ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ದೆಹಲಿಗೆ, ಯಾರಿಗೆ ಟಿಕೆಟ್?
ನವದೆಹಲಿ, ಜ.16 : ಕೆಪಿಸಿಸಿ ತಯಾರಿಸಿರುವ ಲೋಕಸಭೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಗೆ ಹೈಕಮಾಂಡ್ ನಾಯಕರ ಒಪ್ಪಿಗೆ ಬೇಕಾಗಿದೆ. ಅಭ್ಯರ್ಥಿಗಳ ಪಟ್ಟಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೇಂದ್ರ ನಾಯಕರು ಶನಿವಾರ ಮಾತುಕತೆ ನಡೆಸಲಿದ್ದಾರೆ.
ನವದೆಹಲಿಯಲ್ಲಿ ಜ.17ರಂದು ಶುಕ್ರವಾರ ಎಐಸಿಸಿ ಅಧಿವೇಶನ ನಡೆಯಲಿದ್ದು, ಶನಿವಾರ ಲೋಕಸಭಾ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಲೋಕಸಭಾ ಚುನಾವಣಾ ಸಮಿತಿ ರಾಜ್ಯ ಉಸ್ತುವಾರಿ ವಯಲಾರ್ ರವಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ಸಿಗುವ ಸಾಧ್ಯತೆ ಇದೆ. [ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ]

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಎಐಸಿಸಿ ವಕ್ತಾರ ಭಕ್ತ ಚರಣ್‌ದಾಸ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪರಮೇಶ್ವರ್ ಈಗಾಗಲೇ ದೆಹಲಿ ತಲುಪಿದ್ದು, ಸಿಎಂ ಸಿದ್ದರಾಮುಯ್ಯ ಗುರುವಾರ ಪ್ರಯಾಣ ಬೆಳೆಸಲಿದ್ದಾರೆ. [ಜಿಎಸ್ ಬಸವರಾಜ್ ಕಾಂಗ್ರೆಸ್ ಸೇರೋಲ್ಲಾ]
ಗುರುವಾರ ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರೊಂದಿಗೆ ಸಭೆ ನಡೆಸಲಿದ್ದು, ಈಗಾಗಲೇ ತಯಾರಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಲಿದ್ದಾರೆ. ನಂತರ ಶನಿವಾರ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಸಭೆ ನಡೆಯಲಿದೆ.
ಸಂಸದರಿಗೆ ಟಿಕೆಟ್ ದೊರೆಯುತ್ತಾ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಲು ಸಜ್ಜಾಗುತ್ತಿರುವ ಕಾಂಗ್ರೆಸ್, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿಯೂ ಎಚ್ಚರ ವಹಿಸಲಿದೆ. ಆದ್ದರಿಂದ ಹಾಲಿ ಸಂಸದರಿಗೂ ಟಿಕೆಟ್ ಖಾತ್ರಿ ಎಂದು ಹೇಳುವಂತಿಲ್ಲ.
ಕೆಪಿಸಿಸಿ ಸಿದ್ಧಪಡಿಸಿದ ಅಭ್ಯರ್ಥಿಗಳಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಎಐಸಿಸಿ ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ರಹಸ್ಯ ಸಮೀಕ್ಷೆ ನಡೆಸಿ, ವರದಿಯನ್ನು ಪಡೆದಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗೆಲ್ಲುವ ಅಭ್ಯರ್ಥಿಗಳ ಕುರಿತು ಸಮೀಕ್ಷೆ ನಡೆಸಿದೆ. ಆದ್ದರಿಂದ ಎಲ್ಲಾ ವರದಿ ಮತ್ತು ಕೆಪಿಸಿಸಿ ಪಟ್ಟಿ ಎಲ್ಲವನ್ನು ಪರಿಶೀಲಿಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಿದೆ ಎಂದು ತಿಳಿದುಬಂದಿದೆ.
ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಇರುವ ಸ್ಥಳೀಯ ಅಭಿಪ್ರಾಯ, ಕ್ರಿಮಿನಲ್ ಹಿನ್ನೆಲೆ, ಚಾರಿತ್ರ್ಯ, ಸಾಮರ್ಥ್ಯ, ಇತರೆ ಪಕ್ಷಗಳ ಬಲ ಮುಂತಾದವುಗಳ ಕುರಿತು ಚರ್ಚೆ ನಡೆಸಿ, ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಫೆಬ್ರವರಿಯಲ್ಲಿ ಕಾಂಗ್ರೆಸ್ ಅಖಿಲ ಭಾರತ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅದರ ಅಧ್ಯಕ್ಷತೆ ವಹಿಸಲಿದ್ದಾರೆ. ಆ ಬಳಿಕ ಅಭ್ಯರ್ಥಿಗಳ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.












Click it and Unblock the Notifications