5 ದಿನಗಳ ಪೊಲೀಸ್ ವಶಕ್ಕೆ ದಿಶಾ ರವಿ, ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಪರಿಸರ ಹೋರಾಟಗಾರ್ತಿ
ನವದೆಹಲಿ, ಫೆಬ್ರವರಿ 15: ಗ್ರೆಟಾ ಥನ್‌ಬರ್ಗ್ 'ಟೂಲ್‌ಕಿಟ್' ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ದೆಹಲಿ ನ್ಯಾಯಾಲಯವು ಐದು ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಿದೆ.
ಟೂಲ್‌ಕಿಟ್ ವಿಚಾರವಾಗಿ ದೆಹಲಿ ಪೊಲೀಸರ ವಿಶೇಷ ಸೈಬರ್ ಕ್ರೈಂ ಘಟಕವು ಫೆಬ್ರವರಿ 4ರಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಶನಿವಾರ ಬೆಂಗಳೂರಿನಲ್ಲಿರುವ ದಿಶಾ ನಿವಾಸಕ್ಕೆ ಬಂದಿದ್ದ ಪೊಲೀಸರು, ಅವರನ್ನು ಬಂಧಿಸಿ ದೆಹಲಿಗೆ ಕರೆದೊಯ್ದು, ಭಾನುವಾರ ಬೆಳಿಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ದಿಶಾ ಅವರನ್ನು ಏಳು ದಿನಗಳವರೆಗೆ ವಶಕ್ಕೆ ನೀಡುವಂತೆ ಪೊಲೀಸರು ಕೋರಿದ್ದರು. ದಿಶಾಗೆ ಖಲಿಸ್ತಾನ ಪರ ಚಳವಳಿಯೊಂದಿಗೆ ಇದೆ ಎನ್ನಲಾದ ನಂಟನ್ನು ಖಾತರಿಪಡಿಸಿಕೊಳ್ಳಲು ಮತ್ತು ಭಾರತ ಸರ್ಕಾರದ ವಿರುದ್ಧದ ವ್ಯಾಪಕ ಸಂಚಿನ ವಿಚಾರವಾಗಿ ಆಕೆಯ ವಿಚಾರಣೆ ನಡೆಸುವುದು ಅಗತ್ಯವಿದೆ ಎಂದು ತಿಳಿಸಿದ್ದರು. ಆದರೆ ದೆಹಲಿ ಮ್ಯಾಜಿಸ್ಟ್ರೇಟ್ ದೇವ್ ಸರೋಹಾ ಅವರು ಐದು ದಿನಗಳ ಕಸ್ಟಡಿಗೆ ಒಪ್ಪಿಗೆ ನೀಡಿದರು. ಮುಂದೆ ಓದಿ.

ರೈತರಿಗೆ ಬೆಂಬಲ ನೀಡಿದ್ದಷ್ಟೇ
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ದಿಶಾ ಅವರು ಬಿಕ್ಕಿಬಿಕ್ಕಿ ಅತ್ತರು. ತಾವು ದಾಖಲೆಯ ಎರಡೇ ಎರಡು ಸಾಲುಗಳನ್ನು ಮಾತ್ರ ಸಂಪಾದನೆ ಮಾಡಿದ್ದು, ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಗುರಿಯನ್ನಷ್ಟೇ ಹೊಂದಿದ್ದಾಗಿ ತಿಳಿಸಿದರು. ದಿಶಾ ಹಾಗೂ ಇತರರು ಫೆ. 3ರಂದು ಟೂಲ್‌ಕಿಟ್‌ಅನ್ನು ಸಂಪಾದನೆ ಮಾಡಿದ್ದಾರೆ ಎಂದು ದೆಹಲಿ ಪೊಲೀಸರು ವಾದಿಸಿದರು.

ಪ್ರಮುಖ ಸಂಚಿನಲ್ಲಿ ಭಾಗಿ
ಟೂಲ್‌ಕಿಟ್ ಗೂಗಲ್ ಡಾಕ್ಯುಮೆಂಟಿನ ಸಂಪಾದಕರಲ್ಲಿ ದಿಶಾ ರವಿ ಕೂಡ ಒಬ್ಬರು. ಅಲ್ಲದೆ ಅವರು ದಾಖಲೆಯನ್ನು ರೂಪಿಸುವುದು ಮತ್ತು ಪ್ರಸಾರ ಮಾಡುವುದರಲ್ಲಿ ಪ್ರಮುಖ ಸಂಚುಗಾರ್ತಿಯಾಗಿದ್ದಾರೆ. ಟೂಲ್‌ಕಿಟ್ ಡಾಕ್ಯುಮೆಂಟ್ ತಯಾರಿಸಲು ದಿಶಾ ಅವರು ವಾಟ್ಸಾಪ್ ಗ್ರೂಪ್ ಸಹ ಶುರುಮಾಡಿದ್ದರು. ಉಳಿದವರೊಂದಿಗೆ ಸೇರಿಕೊಂಡು ಈ ಕೆಲಸ ಮಾಡಿದ್ದರು ಎಂದು ದೆಹಲಿ ಪೊಲೀಸರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ದಿಶಾ ಜಾಲ ದೊಡ್ಡದಿದೆ-ಪೊಲೀಸ್
'ಡಾಕ್ಯುಮೆಂಟ್ ಸಿದ್ಧಪಡಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಅವರೆಲ್ಲರೂ ಭಾರತದ ವಿರುದ್ಧ ಕೆಟ್ಟ ಅಭಿಪ್ರಾಯ ಹರಡಲು ಖಲಿಸ್ತಾನ ಪರ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ ಜತೆ ಸೇರಿಕೊಂಡಿದ್ದಾರೆ. ಗ್ರೆಟಾ ಥನ್‌ಬರ್ಗ್‌ಗೆ ಟೂಲ್‌ಕಿಟ್ ಡಾಕ್ಯುಮೆಂಟ್ ಹಂಚಿಕೊಂಡವರೇ ದಿಶಾ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಗ್ರೆಟಾ ಆಕಸ್ಮಿಕವಾಗಿ ಮಾಹಿತಿಗಳನ್ನು ಹಂಚಿಕೊಂಡಿದ್ದರಿಂದ ಮುಖ್ಯ ಡಾಕ್ಯುಮೆಂಟ್‌ಅನ್ನು ಅಳಿಸಿಹಾಕುವಂತೆ ಗ್ರೆಟಾಗೆ ಸೂಚನೆಯನ್ನೂ ನೀಡಿದ್ದರು. ಆಕೆ ಹೇಳಿಕೊಳ್ಳುವಂತೆ ಎರಡು ಸಾಲುಗಳನ್ನು ಸಂಪಾದನೆ ಮಾಡಿದ್ದಕ್ಕಿಂತಲೂ ಹೆಚ್ಚು ತೊಡಗಿಸಿಕೊಂಡಿದ್ದರು' ಎಂದು ಪೊಲೀಸರು ಆರೋಪಿಸಿದ್ದಾರೆ.

ನನಗೆ ಯಾವ ಗುಂಪೂ ಗೊತ್ತಿಲ್ಲ
'ನಾನು ರೈತರನ್ನು ಬೆಂಬಲಿಸಿದ್ದೆ. ಏಕೆಂದರೆ ಅವರು ನಮ್ಮ ಭವಿಷ್ಯ. ನಮಗೆಲ್ಲರಿಗೂ ತಿನ್ನಲು ಬೇಕು. ನಾನು ಟೂಲ್‌ಕಿಟ್ ತಯಾರಿಸಿರಲಿಲ್ಲ. ಅದರಲ್ಲಿ ಎರಡು ಸಾಲು ಸಂಪಾದನೆ ಮಾಡಿದ್ದೆ ಅಷ್ಟೇ. ನಾನು ಯಾವ ಸಂಚಿನಲ್ಲಿಯೂ ಭಾಗಿಯಾಗಿಲ್ಲ. ನನಗೆ ಅಂತಹ ಯಾವ ಗುಂಪೂ ಗೊತ್ತಿಲ್ಲ' ಎಂದು ದಿಶಾ ಕಣ್ಣೀರಿಟ್ಟಿದ್ದಾರೆ.

ಏನಿದು ಟೂಲ್‌ಕಿಟ್ ವಿವಾದ?
ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ರೈತರ ಪರ ಮಾಡಿದ್ದ ಪೋಸ್ಟ್‌ನಲ್ಲಿ ಟೂಲ್ ಕಿಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಪ್ರತಿಭಟನೆ ಬೆಂಬಲಿಸಿ ಸರ್ಕಾರದ ವಿರುದ್ಧ ಅಭಿಯಾನ ನಡೆಸುವುದರ ಕುರಿತಾದ ವಿವರಗಳಿದ್ದವು. ಸ್ವಲ್ಪ ಹೊತ್ತಿನಲ್ಲಿಯೇ ಗ್ರೆಟಾ ಅದನ್ನು ಅಳಿಸಿ ಬೇರೆ ಟ್ವೀಟ್ ಮಾಡಿದ್ದರು. ಆದರೆ ಹಳೆಯ ಟ್ವೀಟ್ ವೈರಲ್ ಆಗಿದ್ದು, ಅದರಲ್ಲಿನ ಅಂಶಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು.












Click it and Unblock the Notifications