Meat Shops Closed In Delhi : ಚೈತ್ರ ನವರಾತ್ರಿ: ದೆಹಲಿ ಐಎನ್‌ಎ ಮಾರುಕಟ್ಟೆಯಲ್ಲಿ 40 ಮಾಂಸದ ಅಂಗಡಿಗಳು ಬಂದ್
ನವದೆಹಲಿ ಏಪ್ರಿಲ್ 6: ದೇಶದಲ್ಲಿ ಧಾರ್ಮಿಕ ಬಿಕ್ಕಟ್ಟು ದಿನ ಕಳೆದಂತೆ ಹಲವಾರು ರೂಪ ಪಡೆದುಕೊಳ್ಳುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ದಕ್ಷಿಣ ಮತ್ತು ಪೂರ್ವ ದೆಹಲಿಯ ಮೇಯರ್‌ಗಳು ಮಂಗಳವಾರ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಮಾಂಸದ ಅಂಗಡಿಗಳನ್ನು ನವರಾತ್ರಿಯ ಸಮಯದಲ್ಲಿ ಮುಚ್ಚುವಂತೆ ಸೂಚಿಸಿದ್ದಾರೆ. 'ಹೆಚ್ಚಿನ ಜನರು ನವರಾತ್ರಿಯಲ್ಲಿ ಮಾಂಸಾಹಾರವನ್ನು ಒಂಬತ್ತು ದಿನಗಳವರೆಗೆ ಸೇವಿಸುವುದಿಲ್ಲ' ಎಂದು ಹೇಳುವ ಮೂಲಕ ಮೇಯರ್‌ಗಳು ಮಾಂಸ ಅಂಗಡಿಗಳನ್ನು ಮುಚ್ಚಲು ಸೂಚಿಸಿದ್ದಾರೆ. ಆದರೆ ಅಧಿಕೃತವಾಗಿ ಈ ಆದೇಶವನ್ನು ಹೊರಡಿಸಲಾಗಿಲ್ಲ.
ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ಮತ್ತು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (EDMC) ಮೇಯರ್‌ಗಳು ಒಂಬತ್ತು ದಿನಗಳ ಹಬ್ಬದ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಕರೆ ನೀಡಿದ್ದಾರೆ. ಮೇಯರ್ ಅವರ ಹೇಳಿಕೆಗಳನ್ನು ಅನುಸರಿಸಿ, ರಾಷ್ಟ್ರ ರಾಜಧಾನಿಯ ಕೆಲ ಪ್ರದೇಶಗಳಲ್ಲಿ ಹಲವಾರು ಮಾಂಸದ ಅಂಗಡಿ ಮಾಲೀಕರು ಅಧಿಕಾರಿಗಳ ಕ್ರಮಕ್ಕೆ ಹೆದರಿ ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ.
ಪೂರ್ವ ದೆಹಲಿಯ ಮೇಯರ್ ಶ್ಯಾಮ್ ಸುಂದರ್ ಅಗರ್ವಾಲ್ ಅವರು ಚೈತ್ರ ನವರಾತ್ರಿಯಲ್ಲಿ "90 ಪ್ರತಿಶತ ಜನರು ಮಾಂಸ ಆಹಾರವನ್ನು ಸೇವಿಸುವುದಿಲ್ಲ" ಎಂದು ಹೇಳಿದರೆ, ದಕ್ಷಿಣ ದೆಹಲಿಯ ಮೇಯರ್ ಮುಖೇಶ್ ಸೂರ್ಯನ್ ಅವರು ಹಬ್ಬದ ಸಮಯದಲ್ಲಿ "ಮಾಂಸದ ಅಂಗಡಿಗಳನ್ನು ತೆರೆಯುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ. ಇವರಿಬ್ಬರೂ ಜನ ಮಾಂಸವನ್ನು ಈ ಅವಧಿಯಲ್ಲಿ ಸೇವಿಸುವುದಿಲ್ಲ ಎನ್ನುವ ಸೂಚನೆಯೊಂದಿಗೆ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಆದೇಶವನ್ನು ಅವರು ಹೊರಡಿಸಿಲ್ಲ.

ಈ ಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಪ್ರತಿಕ್ರಿಯೆಗಳು ಬರುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮೇಯರ್‌ಗಳ ಕರೆಯನ್ನು ಬೆಂಬಲಿಸಿದ್ದಾರೆ. ಮಾತ್ರವಲ್ಲದೆ ನವರಾತ್ರಿಯ ಸಮಯದಲ್ಲಿ ದೇಶದಾದ್ಯಂತ ಇಂತಹ ನಿರ್ಬಂಧವನ್ನು ವಿಧಿಸಬೇಕು ಎಂದು ಹೇಳಿದ್ದಾರೆ.
ಐಎನ್‌ಎ ಮಾರುಕಟ್ಟೆಯಲ್ಲಿ ಸುಮಾರು 40 ಮಾಂಸದ ಅಂಗಡಿಗಳಿದ್ದು, ಸೂರ್ಯನ್ ಅವರ ಹೇಳಿಕೆಯ ನಂತರ ಅಂಗಡಿಗಳನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೆಲವು ಮಾಲೀಕರು ಹೇಳಿದ್ದಾರೆ.
ಇಲ್ಲಿಯವರೆಗೆ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲವಾದರೂ, ಸೋಮವಾರ ಎಸ್‌ಡಿಎಂಸಿ ಆಯುಕ್ತ ಜ್ಞಾನೇಶ್ ಭಾರ್ತಿ ಅವರಿಗೆ ಬರೆದ ಪತ್ರದಲ್ಲಿ ಸೂರ್ಯನ್ ಅವರು ಜನ ಮಾಂಸದ ಅಂಗಡಿಗಳತ್ತ ಬಂದಾಗ ಅಥವಾ ಮಾಂಸದ ದುರ್ವಾಸನೆ ಬಂದರೆ "ಧಾರ್ಮಿಕ ನಂಬಿಕೆಗಳು ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತದೆ" ಎಂದು ಹೇಳಿದ್ದಾರೆ. ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಗೆ ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸಲು ಅವರ ದಾರಿಯಲ್ಲಿ ಮಾಂಸದ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ. ನವರಾತ್ರಿಯ ಸಮಯದಲ್ಲಿ ಮಂಗಳವಾರದಿಂದ ಏಪ್ರಿಲ್ 11 ರವರೆಗೆ ಮಾಂಸದ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ ಮತ್ತು ಅವರ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪುರಸಭೆಯ ಆಯುಕ್ತರನ್ನು ಹೇಳಿದ್ದಾರೆ.
ಹೀಗಾಗಿ ಇಂದು ಬಹುತೇಕ ಮಾಂಸದಂಗಡಿಗಳು ಮುಚ್ಚಿವೆ. ನವರಾತ್ರಿ ವೇಳೆ ಹೆಚ್ಚಿನವರು ಮಾಂಸ, ಈರುಳ್ಳಿ-ಬೆಳ್ಳುಳ್ಳಿ ತಿನ್ನುವುದಿಲ್ಲ. ಹಾಗಾಗಿ ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ನವರಾತ್ರಿ ಹಬ್ಬದಂದು ಮಾಂಸದಂಗಡಿ ತೆರೆಯುವ ಅಗತ್ಯವಿಲ್ಲ. ಈ ಸಂಬಂಧ ಆದೇಶವನ್ನು ಇಂದು ಬಿಡುಗಡೆ ಮಾಡಲಾಗುವುದು ಎಂದು ಸೂರ್ಯನ್ ಮಂಗಳವಾರ ಪಿಟಿಐಗೆ ತಿಳಿಸಿದರು.

ಇನ್ನೂ ಸಮುದಾಯದ "ಧಾರ್ಮಿಕ ಭಾವನೆಗಳ" ದೃಷ್ಟಿಯಿಂದ ನವರಾತ್ರಿಯ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಅಗರ್ವಾಲ್ ವ್ಯಾಪಾರಿಗಳಿಗೆ ಮನವಿ ಮಾಡಿದ್ದಾರೆ. ನಾನು ಇಂದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಜನರ ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿ ನವರಾತ್ರಿ ಅಥವಾ ಹಬ್ಬದ ಕೊನೆಯ ಮೂರು ದಿನಗಳಲ್ಲಾದರೂ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ವ್ಯಾಪಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಪೂರ್ವ ದೆಹಲಿ ಮೇಯರ್, ಪ್ರತಿ ವರ್ಷ ಚೈತ್ರ ನವರಾತ್ರಿಯ ಕೊನೆಯ ಮೂರು ರಂದು ಗಾಜಿಪುರ ಕಸಾಯಿಖಾನೆಯನ್ನು ಮುಚ್ಚಲಾಗುತ್ತದೆ ಮತ್ತು ಈ ವರ್ಷ ಅದನ್ನು ಏಪ್ರಿಲ್ 8-10 ರಂದು ಮುಚ್ಚಲಾಗುವುದು ಎಂದು ಹೇಳಿದರು. ಹಾಗಾಗಿ ಈ ಅವಧಿಯಲ್ಲಿ ಯಾರಾದರೂ (ಎಮ್ಮೆ ಅಥವಾ ಮೇಕೆ) ಮಾಂಸವನ್ನು ಮಾರಾಟ ಮಾಡುತ್ತಿದ್ದರೆ ಅದನ್ನು ತಡೆಯುವಂತೆ ಹಾಗೂ ಅಂತಹವರ ಮೇಲೆ ತೀವ್ರ ನಿಗಾ ಇಡಲು 16 ತಂಡಗಳನ್ನು ರಚಿಸುವಂತೆ ನಾನು ಆದೇಶಿಸಿದ್ದೇನೆ " ಎಂದು ಅಗರ್ವಾಲ್ ಹೇಳಿದರು. ಆದೇಶವನ್ನು ಮೀರಿದರೆ " ಮಾಂಸವನ್ನು ವಶಪಡಿಸಿಕೊಳ್ಳುವುದು, ಚಲನ್ ವಿಧಿಸುವುದು ಅಥವಾ ಪರಿಸ್ಥಿತಿಗೆ ಅನುಗುಣವಾಗಿ ಅಂಗಡಿಗಳ ಪರವಾನಗಿ ಅಥವಾ ಸೀಲಿಂಗ್ ಅನ್ನು ರದ್ದುಗೊಳಿಸುವ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸದಿದ್ದರೂ ಅಧಿಕಾರಿಗಳ ಕ್ರಮಕ್ಕೆ ಹೆದರಿ ತಮ್ಮ ಸಂಸ್ಥೆಗಳನ್ನು ಮುಚ್ಚಿದ್ದೇವೆ ಎಂದು ಐಎನ್‌ಎ ಮಾರುಕಟ್ಟೆಯಲ್ಲಿರುವ ಮಾಂಸದ ಅಂಗಡಿಗಳ ಮಾಲೀಕರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಬಾಂಬೆ ಫಿಶ್ ಶಾಪ್‌ನ ಮ್ಯಾನೇಜರ್ ಸಂಜಯ್ ಕುಮಾರ್ "ಅಧಿಕಾರಿಗಳ ಕ್ರಮಕ್ಕೆ ಹೆದರಿ ಐಎನ್‌ಎ ಮಾರುಕಟ್ಟೆಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಲಾಗಿದೆ. ನಿನ್ನೆ ಎಸ್‌ಡಿಎಂಸಿ ಮೇಯರ್ ನವರಾತ್ರಿ ವೇಳೆ ಅಂಗಡಿ ತೆರೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ. ಹೀಗಾಗಿ ನಮ್ಮ ಅಂಗಡಿಗಳನ್ನು ಮುಚ್ಚಲು ನಾವು ನಿರ್ಧರಿಸಿದ್ದೇವೆ" ಎಂದು ಹೇಳಿದ್ದಾರೆ.
"ಮೇಯರ್ ಮಾಂಸದಂಗಡಿ ತೆರೆಯುವವರ ವಿರುದ್ಧ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಮಾಲೀಕರು ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ" ಎಂದು ಕುಮಾರ್ ಹೇಳಿದ್ದಾರೆ. ಜೊತೆಗೆ ಜೋರ್ ಬಾಗ್‌ನ ಹಂದಿಮಾಂಸದ ಅಂಗಡಿಯ ಸಹ-ಮಾಲೀಕ ಕಮಲ್ ಅವರು ಬೆಳಗ್ಗೆ ಅಂಗಡಿಯನ್ನು ತೆರೆದರು ಆದರೆ ಮೇಯರ್ ಹೇಳಿಕೆಯ ಬಗ್ಗೆ ತಿಳಿದ ನಂತರ ಅದನ್ನು ಮುಚ್ಚಲು ನಿರ್ಧರಿಸಿದರು.












Click it and Unblock the Notifications