ರೈಲಿನ ಬೋಗಿ ಮೇಲೆ ನಿಂತು ಸೆಲ್ಫಿ ತೆಗೆಯಲು ಹೋಗಿ ಯುವಕ ಸಾವು!
ನವದೆಹಲಿ, ಜನವರಿ,12: ಮೊಬೈಲ್ ನಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಇತ್ತೀಚಿಗೆ ಒಂದು ರೀತಿ ಟ್ರೆಂಡ್ ಆಗುತ್ತಿದೆ. ಹೊಸ ಟ್ರೆಂಡ್ ಗೆ ಬೆರಗಾದ ಯುವಕರು ಹುಚ್ಚಾಟ ಪ್ರದರ್ಶಿಸುವುದಕ್ಕೆ ಹೋಗಿ ಪ್ರಾಣ ಕಳೆದುಕೊಳ್ಳುವಂತಾ ಘಟನೆಗಳು ಪದೇ ಪದೆ ಮರುಕಳಿಸುತ್ತಿವೆ. ಅಂಥದ್ದೇ ಒಂದು ಘಟನೆ ಜಾರ್ಖಂಡ್ ನ ರಾಮಘರ್ ನಲ್ಲಿ ನಡೆದಿದೆ.
ಕಳೆದ ಭಾನುವಾರ ಮೇಲ್ ರೈಲ್ವೆ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಹೋಗಿ ಯುವಕನೊಬ್ಬ ಸಾವನ್ನಪ್ಪಿರುವ ಬಗ್ಗೆ ರೈಲ್ವೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಚಿತ್ರಾಪುರದ ರಾಜ್ರಪ್ಪಾ ಪೊಲೀಸ್ ಠಾಣೆ ವ್ಯಾಪ್ತಿಯ ಯುವಕನೊಬ್ಬ ತನ್ನ ಗೆಳೆಯರ ಜೊತೆಗೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದನು.
ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಾಣಿಕೆ ರೈಲಿನ ಬೋಗಿಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಗೂಡ್ಸ್ ರೈಲಿನ ಬೋಗಿಗಳ ಮೇಲೆ ಏರಿದ ಯುವಕನಿಗೆ ವಿದ್ಯುತ್ ತಂತಿ ತಗುಲಿದ್ದು ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ ಎಂದು ಮುರಿ ಜಂಕ್ಷನ್ ವಿಭಾಗದ ರೈಲ್ವೆ ಇನ್ಸ್ ಪೆಕ್ಟರ್ ಆರ್. ಕೆ. ತಿವಾರಿ ತಿಳಿಸಿದ್ದಾರೆ.

ಸಂಬಂಧಿಕರಿಗೆ ಮೃತದೇಹ ಹಸ್ತಾಂತರ:
ಸೆಲ್ಫಿ ತೆಗೆದುಕೊಳ್ಳಲು ರೈಲಿಗೆ ಬೋಗಿ ಏರಿದ ಯುವಕ ರೈಲ್ವೆ ನಿಲ್ದಾಣದಲ್ಲೇ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದನು. ಮರಣೋತ್ತರ ಪರೀಕ್ಷೆ ನಂತರದಲ್ಲಿ ಯುವಕನ ಮೃತದೇಹ ಸಂಬಂಧಿತರಿಗೆ ಒಪ್ಪಿಸಲಾಗಿದೆ ಎಂದು ರೈಲ್ವೆ ಇನ್ಸ್ ಪೆಕ್ಟರ್ ಆರ್ ಕೆ ತಿವಾರಿ ಹೇಳಿದ್ದಾರೆ.












Click it and Unblock the Notifications