ದೆಹಲಿಯಲ್ಲಿ ಬಿಜೆಪಿ ಸರ್ಕಾರ, ಇದು ಓದುಗರ ತೀರ್ಪು
ಬೆಂಗಳೂರು, ಜ.17 : ದೆಹಲಿಯಲ್ಲಿ ಚುನಾವಣಾ ಜ್ವರ ಏರುತ್ತಿದ್ದು ದಿನಕ್ಕೊಂದು ಸಮೀಕ್ಷೆ ಪ್ರಕಟವಾಗುತ್ತಿದೆ. ಈ ಬಾರಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೋಡಿ ಮಾಡಲಿದ್ದು, ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಒನ್ ಇಂಡಿಯಾ ಕನ್ನಡದ ಓದುಗರು ತೀರ್ಪು ನೀಡಿದ್ದಾರೆ.
ಫೆಬ್ರವರಿ 7ರಂದು 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಒನ್ ಇಂಡಿಯಾ ಕನ್ನಡ ದೆಹಲಿಯಲ್ಲಿ ಈ ಬಾರಿ ಯಾರು ಸರ್ಕಾರ ರಚಿಸಲಿದ್ದಾರೆ? ಎಂಬ ಪ್ರಶ್ನೆ ಕೇಳಿತ್ತು. ಓದುಗರು ಮತದಾನದ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಲಿದ್ದು, ಕಿರಣ್ ಬೇಡಿ ಸಿಎಂ ಆಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. [ಸಮೀಕ್ಷೆ: ಬದಲಾಯಿತೇ ಮತದಾರನ ಮೂಡ್]
ಶೇ 84.2 ರಷ್ಟು ಓದುಗರು ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಮತದಾನ ಮಾಡಿದ್ದರೆ, ಶೇ 11.09ರಷ್ಟು ಜನರು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂದು ಮತ ಹಾಕಿದ್ದಾರೆ. ಶೇ 4.71 ರಷ್ಟು ಜನರ ಅಭಿಪ್ರಾಯದಂತೆ ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ. [ಸಮೀಕ್ಷೆ : ದೆಹಲಿ ಗದ್ದುಗೆಗೆ ಮತ್ತೆ ಆಮ್ ಆದ್ಮಿ]

ನಮ್ಮ ಪ್ರಶ್ನೆಗಳೇನು : ಈ ಬಾರಿಯೂ ಕೇಜ್ರಿವಾಲ್ ಸಿಎಂ ಆಗ್ತಾರಾ?, ಮೋದಿ ಮೋಡಿ ಮಾಡ್ತಾರೆ, ಬೇಡಿ ಸಿಎಂ ಆಗ್ತಾರೆ, ಇವರಿಬ್ಬರ ಜಗಳದಲ್ಲಿ ಕಾಗ್ರೆಸ್ಸಿಗೆ ಲಾಭ ಎಂಬ ಮೂರು ಆಯ್ಕೆಗಳನ್ನು ನೀಡಲಾಗಿತ್ತು. ಮೋದಿ ಮೋಡಿ ಮಾಡ್ತಾರೆ, ಬೇಡಿ ಸಿಎಂ ಆಗ್ತಾರೆ ಎಂದು 2,270 ಜನರು ಮತ ನೀಡಿದ್ದು, ದೆಹಲಿಯಲ್ಲಿ ಈ ಬಾರಿ ಕಮಲ ಅರಳಲಿದೆ ಎಂದು ಶೇ 84.2ರಷ್ಟು ಜನರು ಹೇಳಿದ್ದಾರೆ. [ದೆಹಲಿ ಚುನಾವಣೆ ವೇಳಾಪಟ್ಟಿ]
ಕಳೆದ ಬಾರಿ 49 ದಿನ ಅಧಿಕಾರ ನಡೆಸಿ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಈ ಬಾರಿಯೂ ಸಿಎಂ ಆಗ್ತಾರೆ ಎಂದು 299 ಜನರು ಮಾತ್ರ ಮತ ನೀಡಿದ್ದು, ಕೇಜ್ರಿವಾಲ್ ಸಿಎಂ ಆಗುವ ಸಾಧ್ಯತೆ ಶೇ.11.09 ಮಾತ್ರ ಎಂಬುದು ಓದುಗರ ತೀರ್ಪು.
ಈಗಾಗಲೇ ದೆಹಲಿ ಚುನಾವಣಾ ವೇದಿಕೆಯಿಂದ ಕಾಂಗ್ರೆಸ್ ಮರೆಯಾಗುತ್ತಿದೆ. ನಮ್ಮ ಓದುಗರು ಸಹ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಪ್, ಬಿಜೆಪಿ ಜಗಳದಲ್ಲಿ ಕಾಂಗ್ರೆಸ್ಸಿಗೆ ಲಾಭವಾಗುತ್ತದೆ ಎಂದು 127 ಜನರು ಮಾತ್ರ ಹಾಕಿದ್ದಾರೆ.
ನಮ್ಮ ಈ ಸಮೀಕ್ಷೆಯಲ್ಲಿ ಒಟ್ಟು 2,696 ಓದುಗರು ಮತದಾನ ಮಾಡಿದ್ದಾರೆ. ಮತ ಹಾಕಿದ ಎಲ್ಲಾ ಓದುಗರಿಗೂ ಒನ್ ಇಂಡಿಯಾ ಕನ್ನಡದ ಪರವಾಗಿ ಧನ್ಯವಾದಗಳು. ದೆಹಲಿಯಲ್ಲಿ ಫೆಬ್ರವರಿ 7ರಂದು ಚುನಾವಣೆ ನಡೆಯಲಿದ್ದು, 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications