ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯದ ಬಗ್ಗೆ 'ಗಾಂಧಿಗಳು' ಮೌನವೇಕೆ?
ನವದೆಹಲಿ, ಅಕ್ಟೋಬರ್ 12: ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುವಾಗ ಕಾಂಗ್ರೆಸ್‌ನ ನಾಯಕರುಗಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಯಾಕೆ ಮೌನವಾಗಿರುತ್ತಾರೆ ಎಂದು ಬಿಜೆಪಿಯು ಪ್ರಶ್ನೆ ಮಾಡಿದೆ.
ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಜಾರ್ಖಾಂಡ್‌ನಲ್ಲಿ ಪರಿಶಿಷ್ಠ ಜಾತಿ (ಎಸ್‌ಸಿ) ಗೆ ಸೇರಿದವರ ಮೇಲೆ ದೌರ್ಜನ್ಯಗಳು ನಡೆಸಲಾಗುತ್ತಿದೆ ಎಂಬ ಆರೋಪಗಳನ್ನು ಉಲ್ಲೇಖ ಮಾಡಿರುವ ಬಿಜೆಪಿ, "ನಾವು ದಲಿತರ ಹಕ್ಕುಗಳ ವಿಚಾರದಲ್ಲಿ ಚಾಂಪಿಯನ್‌ಗಳು ಎಂಬಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿರುವ ಕೆಲವರು ಈಗ ಅಂತಹ ಘಟನೆಯನ್ನು ಕಡೆಗಣಿಸುತ್ತಿದ್ದಾರೆ," ಎಂದು ಆರೋಪ ಮಾಡಿದೆ.
ನವದೆಹಲಿಯಲ್ಲಿ ಪಕ್ಷದ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ, "ತಾವು ದಲಿತರ ಹಕ್ಕುಗಳ ವಿಚಾರದಲ್ಲಿ ಚಾಂಪಿಯನ್‌ಗಳು ಎಂಬಂತೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಾರೆ. ಆದರೆ ಈಗ ರಾಜಸ್ಥಾನ ಹಾಗೂ ಬೇರೆ ರಾಜ್ಯಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ," ಎಂದು ಪ್ರಶ್ನೆ ಮಾಡಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಬಳಿಕ ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಲಖಿಂಪುರದಲ್ಲಿರುವ ಮೃತರ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರುಗಳನ್ನು ವ್ಯಂಗ್ಯ ಮಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, "ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ರಾಜಕೀಯ ಪ್ರವಾಸ ಹೋದ ನಾಯಕರುಗಳು ಈಗ ದಲಿತರ ಮೇಲೆ ದೌರ್ಜನ್ಯ ನಡೆದಿರುವ ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಭೇಟಿ ನೀಡಿಲ್ಲ," ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಆರೋಪವನ್ನು ಮಾಡಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್, "ದಲಿತ ಮುಖಂಡ ಬಿ ಆರ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದು ಕಾಂಗ್ರೆಸ್. ಅವರ ಆಡಳಿತವಧಿಯಲ್ಲಿ ದಲಿತ ನಾಯಕ ಬಿ ಆರ್ ಅಂಬೇಡ್ಕರ್ ಅವರಿಗೆ ಯಾವುದೇ ಗೌರವವನ್ನು ಕಾಂಗ್ರೆಸ್ ನೀಡಿಲ್ಲ," ಎಂದು ದೂರಿದರು.
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳು ರೈತರ ಮೇಲೆ ಹರಿದು ಹೋದಾಗ ರೈತರು ಸಾವನ್ನಪ್ಪಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ. ಹಾಗೆಯೇ ಈ ಕಾರಿನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಕೂಡಾ ಕಾರಿನಲ್ಲಿ ಇದ್ದರು ಎಂದು ಆರೋಪ ಮಾಡಲಾಗಿದೆ. ಈ ಹಿನ್ನೆಲೆ ತಲೆ ಮರೆಸಿಕೊಂಡಿದ್ದ ಆಶಿಶ್ ಮಿಶ್ರಾರ ಬಂಧನ ಮಾಡಲಾಗಿದೆ.
ಇನ್ನು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಈ ಘಟನೆ ನಡೆದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಘಟನಾ ಸ್ಥಳಕ್ಕೆ ತೆರಳಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಕಳೆದ ಸೋಮವಾರ ಬಂಧನಕ್ಕೆ ಒಳಗಾಗಿದ್ದ ಪ್ರಿಯಾಂಕಾ ಗಾಂಧಿ ಗುರುವಾರ ಬಿಡುಗಡೆಯಾಗಿದ್ದರು. ಆ ಬಳಿಕ ಉತ್ತರ ಪ್ರದೇಶ ಸರ್ಕಾರ ಮೃತರ ಕುಟುಂಬಸ್ಥರನ್ನು ಭೇಟಿಯಾಗಲು ಅನುಮತಿ ನೀಡಿದ್ದು, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಒಳಗೊಂಡ ನಿಯೋಗ ಮೃತರ ಕುಟುಂಬಸ್ಥರನ್ನು ಭೇಟಿಯಾಗಿದೆ. ಹಾಗೆಯೇ ಈ ಘಟನೆಯನ್ನು ವಿರೋಧಿಸಿ ಹಾಗೂ ಅಜಯ್ ಮಿಶ್ರಾರ ಅಮಾನತಿಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ, ಮೌನ ಸತ್ಯಾಗ್ರಹವನ್ನು ನಡೆಸಿದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications