ಮೋದಿಗೆ ಬಿಹಾರ ಸಿಎಂ ನಿತೀಶ್ ಬೋಧಿಸಿದ ನೀತಿಪಾಠ
ನವದೆಹಲಿ, ಸೆ 21: ನರೇಂದ್ರ ಮೋದಿ ಆಯ್ಕೆ ವಿರುದ್ದ ಸಿಡಿದೆದ್ದು NDA ಮೈತ್ರಿಕೂಟದಿಂದ ಹೆಚ್ಚುಕಮ್ಮಿ ಒಂದು ಕಾಲು ಹೊರ ಇಟ್ಟಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಗುಜರಾತ್ ಸಿಎಂಗೆ ರಾಜಕೀಯ ನೀತಿ ಪಾಠ ಭೋದಿಸಿದ್ದರೆ.
ರಾಜಕೀಯ ಜೀವನದಲ್ಲಿ ಎಲ್ಲರೂ ಒಂದೇ. ದೇಶ ಮತ್ತು ರಾಜ್ಯವನ್ನು ಮುನ್ನಡೆಸುವವನು ತಿಲಕ ಹಚ್ಚಿಕೊಳ್ಳ ಬೇಕಾಗುತ್ತದೆ ಹಾಗೆಯೇ ಟೋಪಿ ಕೂಡಾ ಹಾಕಿ ಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ದೇಶದಲ್ಲಿ ಮೋದಿ ಅಲೆ ಇದೆ ಎಂದು ಕೃತಕ ಹವಾ ಸೃಷ್ಟಿಸುತ್ತಿದ್ದಾರೆ. ನರೇಂದ್ರ ಮೋದಿ ಬರೀ ನಗರ ಪ್ರದೇಶಕ್ಕೆ ಸೀಮಿತ ಎನ್ನುವುದನ್ನು ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶ ತೋರಿಸಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ನ್ಯಾಷನಲ್ ಕಮಿಷನ್ ಫಾರ್ ಮೈನಾರಿಟೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನಿತೀಶ್, 2002ರಲ್ಲಿ ಸಾವಿರಾರು ಮುಸ್ಲಿಮರು ಗುಜರಾತ್ ಕೋಮು ಗಲಭೆಯಲ್ಲಿ ಸಾವನ್ನಪ್ಪಿದರು. ಇದೆಲ್ಲಾ ಮೋದಿ ಕಣ್ಮುಂದೆ ನಡೆಯಿತು. ಅದಕ್ಕೆ ಮೋದಿ ನೇರ ಜವಾಬ್ದಾರಿ ಎಂದು ದೂರಿದ್ದಾರೆ.
ಒಂದು ಕೋಮಿನ ನಾಯಕ ಎಂದು ಬಿಂಬಿಸಿ ಕೊಳ್ಳುವವನು ರಾಜಕೀಯ ರಂಗದಲ್ಲಿ ಶಾಸ್ವತವಲ್ಲ. ನಮ್ಮ ದೇಶದಲ್ಲಿ ಎಲ್ಲಾ ಕೋಮಿನವರು ಬದುಕುತ್ತಿದ್ದಾರೆ. ಎಲ್ಲರಿಗೂ ಬೇಕಾಗಿ ಅಧಿಕಾರ ನಡೆಸಿಕೊಂಡು ಹೋಗುವವನು ಮಾತ್ರ ರಾಜ್ಯ ಮತ್ತು ದೇಶವನ್ನು ಮುನ್ನಡೆಸಿಕೊಂಡು ಹೋಗಲು ಯೋಗ್ಯನಾಗಿರುತ್ತಾನೆ ಎಂದು ನಿತೀಶ್ ಪರೋಕ್ಷವಾಗಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ನರೇಂದ್ರ ಮೋದಿ ಅವರನ್ನು ಚುನಾವಣಾ ಸಮಿತಿಯ ಅಧ್ಯಕ್ಷ ಎಂದು ಮೂರು ತಿಂಗಳ ಹಿಂದೆ ಘೋಷಿಸಿದ ಮರುದಿನವೇ ಜೆಡಿಯು (ಜನತಾದಳ ಸಂಯುಕ್ತ), ಬಿಜೆಪಿ ಜೊತೆಗಿನ ತನ್ನ ಹದಿನೇಳು ವರ್ಷದ ಸಂಬಂಧವನ್ನು ಕಡಿದು ಕೊಂಡಿತ್ತು.
ಎರಡು ವರ್ಷಗಳ ಹಿಂದೆ ಮುಸ್ಲಿಂ ಧಾರ್ಮಿಕ ಗುರುಗಳು ನರೇಂದ್ರ ಮೋದಿಗೆ ಟೋಪಿ ಹಾಕಲು ಬಂದಿದ್ದಾಗ ಮೋದಿ ಅದನ್ನು ಧರಿಸಿಕೊಳ್ಳಲು ನಿರಾಕರಿಸಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದು.(ಪಿಟಿಐ)












Click it and Unblock the Notifications