ಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ನಿತೀಶ್, ತೇಜಸ್ವಿ
ನವದೆಹಲಿ, ಆಗಸ್ಟ್ 23: ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್, ಎಚ್‌ಎಎಮ್‌ನ ಜಿತನ್ ರಾಮ್ ಮಾಂಝಿ ಮತ್ತು ವಿಐಪಿಯ ಮುಖೇಶ್ ಸಹಾನಿ ಸೇರಿದಂತೆ ಬಿಹಾರದ 10 ರಾಜಕೀಯ ಪಕ್ಷಗಳ ನಾಯಕರ ನಿಯೋಗವು ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಜಾತಿ ಆಧಾರಿತ ಜನಗಣತಿ ನಡೆಸುವ ಕುರಿತು ಚರ್ಚಿಸಿದೆ.
"ನಿಯೋಗದ ಎಲ್ಲ ಸದಸ್ಯರ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಆಲಿಸಿದ್ದಾರೆ. ನಾವು ಅದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಯನ್ನು ಒತ್ತಾಯಿಸಿದ್ದೇವೆ ಮತ್ತು ಜಾತಿ ಗಣತಿ ಕುರಿತು ರಾಜ್ಯ ವಿಧಾನಸಭೆಯಲ್ಲಿ ಎರಡು ಬಾರಿ ನಿರ್ಣಯಗಳನ್ನು ಹೇಗೆ ಅಂಗೀಕರಿಸಲಾಗಿದೆ ಎಂಬುದರ ಕುರಿತು ನಾವು ಅವರಿಗೆ ತಿಳಿಸಿದ್ದೇವೆ," ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಭೆಯ ನಂತರ ಮಾತನಾಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, "ನಮ್ಮ ನಿಯೋಗವು ಸೋಮವಾರ ಪ್ರಧಾನಿಯವರನ್ನು ಭೇಟಿಯಾಗಿ, ಬಿಹಾರ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಜಾತಿ ಆಧಾರಿತ ಜನಗಣತಿಗಾಗಿ ಮನವಿ ಮಾಡಿದ್ದೇವೆ. ನಾವು ಈಗ ಕೇಂದ್ರ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ," ಎಂದು ಹೇಳಿದರು.
ಬಿಜೆಪಿ ಹೊರತುಪಡಿಸಿ ಬಿಹಾರದ ಎಲ್ಲಾ ಪಕ್ಷಗಳು 2021ರ ಜನಗಣತಿಯಲ್ಲಿ ಜಾತಿ ಸಂಖ್ಯೆಗಳ ಎಣಿಕೆಗೆ ಬೇಡಿಕೆ ಇಟ್ಟಿವೆ. ಈ ಬೇಡಿಕೆಯನ್ನು ಪಾಲಿಸಲು ಕೇಂದ್ರ ಸರ್ಕಾರ ಇಲ್ಲಿಯವರೆಗೆ ನಿರಾಕರಿಸಿದ್ದರೆ, ಬಿಹಾರ ಉಪ ಮುಖ್ಯಮಂತ್ರಿ ರೇಣುದೇವಿ ಸೇರಿದಂತೆ ಕೆಲವು ಬಿಜೆಪಿ ಸದಸ್ಯರು ಜಾತಿ ಆಧಾರಿತ ಜನಗಣತಿಗೆ ಬೆಂಬಲ ನೀಡಿದ್ದಾರೆ.
ಈ ವಿಷಯವನ್ನು ಮತ್ತಷ್ಟು ಚರ್ಚಿಸಲು ನಿತೀಶ್ ಕುಮಾರ್ ಬಿಹಾರದಿಂದ 11 ಸದಸ್ಯರ ನಿಯೋಗದ ನೇತೃತ್ವ ವಹಿಸಿಕೊಂಡಿದ್ದಾರೆ. ರಾಜಕೀಯ ವೈಷಮ್ಯ ಮರೆತು ಇದೇ ಮೊದಲ ಬಾರಿಗೆ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಸಂವಿಧಾನ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆಯಲ್ಲಿ ಜಾತಿ ಜನಗಣತಿ ಮತ್ತು ಶೇಕಡಾ 50ಕ್ಕಿಂತ ಹೆಚ್ಚಿನ ಮೀಸಲಾತಿಗಳನ್ನು ತೆಗೆದುಕೊಳ್ಳುವ ಶಾಸನಗಳು ಸುಪ್ರೀಂ ಕೋರ್ಟ್ ತೀರ್ಪನ್ನು ಅತಿಕ್ರಮಿಸಲು ಮತ್ತು ರಾಜ್ಯಗಳಿಗೆ ತಮ್ಮದೇ ಆದ ಒಬಿಸಿ ಪಟ್ಟಿಗಳನ್ನು ರಚಿಸುವ ಹಕ್ಕನ್ನು ಮರುಸ್ಥಾಪಿಸಲು ಪ್ರಯತ್ನಿಸಿವೆ.
ಜಾತಿ ಆಧಾರಿತ ಜನಗಣತಿ ಬೇಡಿಕೆ ತೀವ್ರಗೊಳ್ಳುತ್ತಿದ್ದು, ಈ ವಿಷಯದ ಬಗ್ಗೆ ಬಿಜೆಪಿ ಪಕ್ಷ ಮಾತ್ರ ಸಂದಿಗ್ಧ ಸ್ಥಿತಿಯಲ್ಲಿದೆ. ಕೇಂದ್ರ ಸಚಿವ ಭೂಪೇಂದರ್ ಯಾದವ್ 'ದಿ ಇಂಡಿಯನ್ ಎಕ್ಸ್‌ಪ್ರೆಸ್'ಗೆ ನೀಡಿದ ಸಂದರ್ಶನದಲ್ಲಿ "ಸರ್ಕಾರವು ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ," ಎಂದು ಹೇಳಿದ್ದಾರೆ.
"ಜಾತಿ ಆಧಾರಿತ ಜನಗಣತಿಯನ್ನು ನಡೆಸುವುದು ಬಿಹಾರದ ಬಹುಕಾಲದ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ನಾವು ಇಂದು ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದೇವೆ," ಎಂದು ಎಚ್ಎಎಂ ಅಧ್ಯಕ್ಷ ಮತ್ತು ಮಾಜಿ ಬಿಹಾರ ಸಿಎಂ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.












Click it and Unblock the Notifications