ರಾಜಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ, ಅಧಿಕೃತ ಘೋಷಣೆ
Recommended Video

ನವದೆಹಲಿ, ಡಿಸೆಂಬರ್ 14 : ರಾಜಸ್ಥಾನದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಅವರನ್ನು ಆಯ್ಕೆ ಮಾಡಲಾಗಿದೆ. ಭಾರೀ ಪೈಪೋಟಿ ನೀಡಿದ್ದ ಸಚಿನ್ ಪೈಲಟ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ದಯಪಾಲಿಸಲಾಗಿದೆ.
ಮುಖ್ಯಮಂತ್ರಿ ಹುದ್ದೆಗಾಗಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ 41 ವರ್ಷದ ಸಚಿನ್ ಪೈಲಟ್ ಮತ್ತು ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿ ಆಗಿದ್ದ 67 ವರ್ಷದ ಅಶೋಕ್ ಗೆಹ್ಲೋಟ್ ಅವರ ನಡುವೆ ಬಿರುಸಿನ ಪೈಪೋಟಿ ಇತ್ತು.
ಆದರೆ ಅನುಭವದ ಆಧಾರದ ಮೇಲೆ ಅಶೋಕ್ ಗೆಹ್ಲೋಟ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಘೋಷಿಸುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿದೆ.

ಮುಖ್ಯಮಂತ್ರಿ ಆಯ್ಕೆಯ ಸಂಬಂಧ ನಿನ್ನೆಯಿಂದಲೂ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸುತ್ತಲೇ ಇತ್ತು. ಕೊನೆಗೆ ಗುರುವಾರ ರಾತ್ರಿಯ ವೇಳೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನಾಗಿ ಕಮಲ್ ನಾಥ್ ಅವರ ಹೆಸರನ್ನು ಕಾಂಗ್ರೆಸ್ ಘೋಷಿಸಿತ್ತು.
ಇಂದು ರಾಜಸ್ಥಾನ ಮುಖ್ಯಮಂತ್ರಿ ಆಯ್ಕೆ ಕುರಿತು ಸಭೆ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಗೆಹ್ಲೋಟ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ.
ರಾಜಸ್ಥಾನದ 200 ಕ್ಷೇತ್ರಗಳ ವಿಧಾನಸಭೆ ಚುನಾವಣೆ ಡಿಸೆಂಬರ್ 7ರಂದು ಮತದಾನ ನಡೆದಿತ್ತು. ಡಿ.11ರಂದು ಫಲಿತಾಂಶ ಹೊರಬಿದ್ದ ಫಲಿತಾಂಶದಲ್ಲಿ 99 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ.












Click it and Unblock the Notifications