ಕೇಜ್ರಿವಾಲ್ ಭಾರತದ ಪರವಾಗಿ ಮಾತನಾಡುತ್ತಿಲ್ಲ - ಸಿಂಗಾಪುರಕ್ಕೆ ಜೈಶಂಕರ್ ಸ್ಪಷ್ಟನೆ
ನವದೆಹಲಿ, ಮೇ 19: ಸಿಂಗಾಪುರದಲ್ಲಿ ಹೊಸ ಕೊರೊನಾ ವೈರಸ್ ಪತ್ತೆಯಾಗಿದ್ದು ಈ ವೈರಸ್ ಭಾರತಕ್ಕೆ ಮೂರನೇ ಅಲೆಯಾಗಿ ಬರುವ ಸಾಧ್ಯತೆ ಇದೆ ಎಂದು ಟ್ವೀಟ್ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ಸಿಂಗಾಪುರ ರಾಯಬಾರಿ ಕಚೇರಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾರತದ ಪರವಾಗಿ ಮಾತನಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡುವುದಾಗಿ ಹೇಳಿದ್ದಾರೆ.
ಸಿಂಗಾಪುರಕ್ಕೆ ಬಂದ ಹೊಸ ರೂಪದ ಕೊರೊನಾ ವೈರಸ್ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಇದು ಮೂರನೇ ಅಲೆಯಾಗಿ ಬರಬಹುದು. ಈ ಹಿನ್ನೆಲೆ ಸಿಂಗಾಪುರದೊಂದಿಗಿನ ವಿಮಾನ ಸೇವೆಗಳನ್ನು ತಕ್ಷಣದಿಂದ ರದ್ದು ಮಾಡಬೇಕು ಹಾಗೂ ಮಕ್ಕಳಿಗೂ ಲಸಿಕೆ ಪಡೆಯುವ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿ ಟ್ವೀಟ್ ಮಾಡಿದ್ದರು.
ಆದರೆ ಈ ಟ್ವೀಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಂಗಾಪುರದ ಭಾರತೀಯ ರಾಯಭಾರಿ, ಸಿಂಗಾಪುರದಲ್ಲಿ ಹೊಸ ಕೊರೊನಾ ವೈರಸ್ ಇದೆ ಎಂಬ ಪ್ರತಿಪಾದನೆಯು ಸತ್ಯಕ್ಕೆ ದೂರವಾದದ್ದು. ಸಿಂಗಾಪುರದಲ್ಲಿ ಇತ್ತೀಚಿನ ವಾರಗಳಲ್ಲಿ ಮಕ್ಕಳನ್ನು ಒಳಗೊಂಡಂತೆ ಅನೇಕ ಮಂದಿಯಲ್ಲಿ ಬಿ. 1.617.2 ಕೊರೊನಾ ರೂಪಾಂತರವು ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ "ಸಿಂಗಾಪುರ ರೂಪಾಂತರ ವೈರಸ್" ಕುರಿತು ದೆಹಲಿ ಸಿಎಂ ಮಾಡಿದ ಟ್ವೀಟ್ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಲು ಸಿಂಗಾಪುರ ಸರ್ಕಾರ ಇಂದು ನಮ್ಮ ಹೈಕಮಿಷನರ್ ಅವರನ್ನು ಸಂಪರ್ಕಿಸಿದೆ. ಕೋವಿಡ್ ರೂಪಾಂತರಗಳು ಅಥವಾ ನಾಗರಿಕ ವಿಮಾನಯಾನ ನೀತಿಯ ಬಗ್ಗೆ ಮಾತನಾಡಲು ದೆಹಲಿ ಸಿಎಂಗೆ ಯಾವುದೇ ಅರ್ಹತೆಯಿಲ್ಲ ಎಂದು ಹೈಕಮಿಷನರ್ ಸ್ಪಷ್ಟಪಡಿಸಿದೆ ಎಂದು ಕೂಡಾ ಅವರು ಹೇಳಿದ್ದಾರೆ.
ಇನ್ನು ಸಿಂಗಾಪುರದ ಭಾರತೀಯ ರಾಯಭಾರಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೊರೊನಾ ವಿರುದ್ಧದ ಹೋರಾಟದಲ್ಲಿ ಸಿಂಗಾಪುರ ಮತ್ತು ಭಾರತ ಜೊತೆಯಾಗಿದೆ. ಆಮ್ಲಜನಕ ಸರಬರಾಜು ಮೊದಲಾದ ವಿಚಾರದಲ್ಲಿ ಸಿಂಗಾಪುರದ ಸಹಾಯ ಶ್ಲಾಘನಾರ್ಹ ಎಂದು ಹೇಳಿದ್ದಾರೆ. ಹಾಗೆಯೇ ಕೆಲವರ ಬೇಜವಾಬ್ದಾರಿ ಹೇಳಿಕೆಗಳು ಉಭಯ ದೇಶಗಳ ಸಂಬಂಧಕ್ಕೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ದೆಹಲಿ ಸಿಎಂ ಭಾರತದ ಪರವಾಗಿ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ದಾರೆ.












Click it and Unblock the Notifications