ಸಿಬಿಐ ವಿರುದ್ಧ ನ್ಯಾಯಾಂಗ ಆದೇಶ ಉಲ್ಲಂಘನೆ ದೂರು ಸಲ್ಲಿಸಿದ ಆಕರ್ ಪಟೇಲ್
ನವದೆಹಲಿ, ಏ. 8: ವಿದೇಶಕ್ಕೆ ಹಾರದಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆಗೊಳಗಾದ ಮಾಜಿ ಅಮ್ನೆಸ್ಟಿ ಇಂಡಿಯಾ ಮುಖ್ಯಸ್ಥ ಆಕರ್ ಪಟೇಲ್ ಅವರು ಇದೀಗ ಸಿಬಿಐ ವಿರುದ್ಧ ದೂರು ದಾಖಲಿಸಿದ್ದಾರೆ. ಸಿಬಿಐನಿಂದ ಹೊರಡಿಸಲಾದ ಲುಕೌಟ್ ಸುತ್ತೋಲೆಯಿಂದಾಗಿ ಆಕರ್ ಪಟೇಲ್ ಅವರನ್ನ ವಲಸೆ ಅಧಿಕಾರಿಗಳು ಏರ್‌ಪೋರ್ಟ್‌ನಲ್ಲೇ ತಡೆದಿದ್ದರು. ಆದರೆ ಲುಕೌಟ್ ಸರ್ಕ್ಯೂಲರ್ ಅನ್ನು ರದ್ದುಗೊಳಿಸಿ ವಿಶೇಷ ಸಿಬಿಐ ಕೋರ್ಟ್ ಆದೇಶ ಮಾಡಿದ್ದರೂ ಲೆಕ್ಕಿಸದೇ ತಮ್ಮನ್ನು ತಡೆಯಲಾಯಿತು. ಇದು ನ್ಯಾಯಾಲಯ ಆದೇಶದ ಉಲ್ಲಂಘನೆ ಆಗಿದೆ ಎಂದು ಆಕರ್ ಪಟೇಲ್ ತಮ್ಮ ಪೆಟಿಷನ್ ನಲ್ಲಿ ಆರೋಪಿಸಿದ್ದಾರೆ.
"ದಿನದ 24 ಗಂಟೆಯೂ ಸಕ್ರಿಯವಾಗಿರಬೇಕಾದ ಸಿಬಿಐನಂಥ ಸಂಸ್ಥೆ ನ್ಯಾಯಾಲಯದ ಆದೇಶವನ್ನು ಮರೆತಿತು ಎಂಬುದನ್ನು ನಂಬಲು ಸಾಧ್ಯವೇ ಇಲ್ಲ. ಗೌರವಾನ್ವಿತ ನ್ಯಾಯಾಲಯ 'ತತ್‌ಕ್ಷಣದಿಂದೇ ಜಾರಿಗೆ ಬರುವಂತೆ' ಎಂಬ ಪದ ಬಳಕೆ ಮಾಡಿತ್ತು. ಅಲ್ಲದೇ ಅರ್ಜಿದಾರರು ಏಪ್ರಿಲ್ 7ರ ರಾತ್ರಿಯಂದು ವಿದೇಶಕ್ಕೆ ಪ್ರಯಾಣ ಮಾಡುತ್ತಿರುವ ವಿಚಾರ ಸಿಬಿಐನ ಅರಿವಿಗಿತ್ತು. ಆದರೂ ಕೋರ್ಟ್ ಆದೇಶವನ್ನು ಸಿಬಿಐ ಪಾಲಿಸಲಿಲ್ಲ" ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ತಮ್ಮನ್ನು ತಡೆದ ವಲಸೆ ಅಧಿಕಾರಿಗಳು ಸಿಬಿಐ ತನಿಖಾಧಿಕಾರಿಗಳನ್ನ ಸಂಪರ್ಕಿಸುವ ಪ್ರಯತ್ನ ಕೈಗೂಡಲಿಲ್ಲ. ತಮ್ಮ ಕರೆಗಳನ್ನ ಉತ್ತರಿಸುತ್ತಿಲ್ಲ ಎಂದು ವಲಸೆ ಅಧಿಕಾರಿಗಳು ಹೇಳಿದರು ಎಂದು ಆಕರ್ ಪಟೇಲ್ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ ತಿಳಿಸಿದ್ದಾರೆ.

ಗುರುವಾರ ರಾತ್ರಿ 11ಕ್ಕೆ ಹೊರಡಬೇಕೆಂದು ಸಿಬಿಐಗೆ ತಿಳಿಸಿದ್ದೆ. ಸಿಬಿಐನ ಲುಕೌಟ್ ಸುತ್ತೋಲೆಯನ್ನು ರದ್ದುಗೊಳಿಸಿ ಕೋರ್ಟ್ ಕೂಡ ಆದೇಶ ಹೊರಡಿಸಿತ್ತು. ಹೀಗಿದ್ದೂ ಸಿಬಿಐನ ತನಿಖಾಧಿಕಾರಿ ಲಭ್ಯ ಇಲ್ಲದೇ ಹೋಗಿದ್ದು ಬೇರೆಯೇ ಸೂಚಿಸುತ್ತದೆ. ಕೋರ್ಟ್ ಆದೇಶವನ್ನು ಉದ್ದೇಶಪೂರ್ವಕವಾಗಿಯೇ ಪಾಲನೆ ಮಾಡಲಾಗಿಲ್ಲ ಎಂಬುದು ವೇದ್ಯವಾಗುತ್ತದೆ ಎಂದು ಅಮ್ನೆಸ್ಟಿ ಇಂಡಿಯಾ ಸಂಸ್ಥೆಯ ಮಾಜಿ ಮುಖ್ಯಸ್ಥ ಆಕರ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಆದರೆ, ಆಕರ್ ಪಟೇಲ್ ಅವರ ವಾದವನ್ನು ಸಿಬಿಐ ಅಲ್ಲಗಳೆದಿರುವುದು ತಿಳಿದುಬಂದಿದೆ. ನಿನ್ನೆ ಸಂಜೆ 4:30ಕ್ಕೆ ಕೋರ್ಟ್ ಆದೇಶ ಬಂದಿದೆ. ಈ ಆದೇಶ ಜಾರಿಗೆ 24 ಗಂಟೆ ಕಾಲಾವಕಾಶ ಕೊಡಲಾಗಿತ್ತು. ಹೀಗಾಗಿ, ಸಿಬಿಐನಿಂದ ಕೋರ್ಟ್ ಆದೇಶದ ಉಲ್ಲಂಘನೆ ಆಗಿಲ್ಲ ಎಂದು ಸಿಬಿಐ ಮೂಲವೊಂದು ಎನ್‌ಡಿಟಿವಿಗೆ ಸ್ಪಷ್ಟನೆ ಕೊಟ್ಟಿದೆ ಎನ್ನಲಾಗಿದೆ.
ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐನಿಂದ ಮೇಲ್ಮನವಿ ಸಾಧ್ಯತೆ:
ಅಮ್ನೆಸ್ಟಿ ಇಂಡಿಯಾ ವಿರುದ್ಧದ ಪ್ರಕರಣ ಸಂಬಂಧ ಆಕರ್ ಪಟೇಲ್ ಅವರಿಗೆ ಸಿಬಿಐನಿಂದ ಹೊರಡಿಸಲಾಗಿದ್ದ ಲುಕ್ ಔಟ್ ಸುತ್ತೋಲೆಯನ್ನು ವಿಶೇಷ ಸಿಬಿಐ ನ್ಯಾಯಾಲಯ ನಿನ್ನೆ ವಜಾಗೊಳಿಸಿ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಸಿಬಿಐ ತನಿಖಾ ಸಂಸ್ಥೆ ಮೇಲಿನ ನ್ಯಾಯಾಲಯದ ಮೊರೆ ಹೋಗಬಹುದು ಎಂಬ ವಿಚಾರ ತಿಳಿದುಬಂದಿದೆ.

ಏನಿದು ಲುಕೌಟ್ ಸರ್ಕ್ಯೂಲರ್?
ಅಮ್ನೆಸ್ಟಿ ಇಂಡಿಯಾ ಸಂಸ್ಥೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ನಿಯಮಗಳ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಆಗ ಅಮ್ನೆಸ್ಟಿ ಇಂಡಿಯಾದ ಮುಖ್ಯಸ್ಥರಾಗಿದ್ದ ಆಕರ್ ಪಟೇಲ್ ವಿರುದ್ಧ ಸಿಬಿಐ ಲುಕೌಟ್ ಸುತ್ತೋಲೆ ಹೊರಡಿಸಿತ್ತು. ವಿದೇಶಕ್ಕೆ ಹೋಗದಂತೆ ನಿರ್ಬಂಧಿಸಲು ಲುಕೌಟ್ ಸುತ್ತೋಲೆ ನೀಡಲಾಗುತ್ತದೆ.
ಸಿಬಿಐ ವಿರುದ್ಧ ಕೋರ್ಟ್ ಕೋಪ:
ನಿನ್ನೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಮ್ಮನ್ನು ತಡೆಹಿಡಿದ ಬಳಿಕ ಅಕರ್ ಪಟೇಲ್ ಅವರು ಈ ವಿಚಾರವನ್ನು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅರ್ಜದಾರರಿಗೆ ಮಾನಸಿಕ ಹಿಂಸೆ ನೀಡಿರುವ ಸಿಬಿಐ ಲಿಖಿತವಾಗಿ ಕ್ಷಮೆ ಯಾಚಿಸಬೇಕು ಎಂದು ಕೋರ್ಟ್ ಆದೇಶಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications