ಕಾಂಗ್ರೆಸ್ಸಿಗೆ ಮರಳಿದ ಎಎಪಿಯಿಂದ ಅನರ್ಹಗೊಂಡ ಶಾಸಕಿ ಅಲ್ಕಾ ಲಂಬಾ
ನವದೆಹಲಿ, ಅಕ್ಟೋಬ್13: ಆಮ್ ಆದ್ಮಿ ಪಕ್ಷ ತೊರೆದಿರುವ ದೆಹಲಿಯ ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದ ಶಾಸಕಿ ಅಲ್ಕಾ ಲಂಬಾ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಈಗ ನಿರೀಕ್ಷೆಯಂತೆ ತಮ್ಮ ಮಾತೃಪಕ್ಷ ಕಾಂಗೆಸ್ಸಿಗೆ ಶನಿವಾರದಂದು ಮರಳಿದ್ದಾರೆ.
ಸಂವಿಧಾನದ 10ನೇ ಪರಿಚ್ಛೇದದ ಕಲಂ 2(1)ರ ಅನ್ವಯ ಅಲ್ಕಾ ಲಂಬಾರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಎಎಪಿಯಿಂದ ಹೊರ ನಡೆದಿರುವ ಕಪಿಲ್ ಮಿಶ್ರಾ, ಸಂದೀಪ್ ಕುಮಾರ್, ಅನಿಲ್ ಬಾಜ್ಪೇಯಿ, ದೇವೇಂದ್ರ ಶೇಹ್ರಾವತ್ ಅವರನ್ನು ಕೂಡಾ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಅಲ್ಕಾ ಲಂಬಾ ಶಾಸಕ ಸ್ಥಾನದಿಂದ ಅನರ್ಹಗೊಂಡ ಬಳಿಕ ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ.
"ಕಾಂಗ್ರೆಸ್ ಪಕ್ಷ ನನ್ನನ್ನು ಮರಳಿ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು, ಕಾಂಗ್ರೆಸ್ ಸದಸ್ಯಳಾಗಿ ಮತ್ತೊಮ್ಮೆ ರಾಜಕೀಯ ಜೀವನ ಆರಂಭಿಸುತ್ತಿದ್ದೇನೆ. ನಾನು ಪಕ್ಷದಿಂದ ದೂರವಿದ್ದರೂ ಪಕ್ಷದ ಸಿದ್ಧಾಂತ, ಕಾಂಗ್ರೆಸ್ ಕಲಿಸಿದ ಪಾಠದಿಂದ ದೂರಾಗಿರಲಿಲ್ಲ" ಎಂದು ಎಎನ್ಐಗೆ ಅಲ್ಕಾ ಲಂಬಾ ತಿಳಿಸಿದ್ದಾರೆ.

ಎಎಪಿಯಲ್ಲಿ ಸದಾಕಾಲ ರೆಬೆಲ್
ಎಎಪಿಯಲ್ಲಿ ಸದಾಕಾಲ ರೆಬೆಲ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅಲ್ಕಾ ಲಂಬಾ ಅವರು ರಾಜೀವ್ ಗಾಂಧಿ ಅವರ ಭಾರತ ರತ್ನ ಹಿಂಪಡೆಯುವ ನಿಲುವಳಿಗೆ ವಿರೋಧಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಎಎಪಿ ಕ್ರಮವನ್ನು ಪ್ರಶ್ನಿಸಿದ್ದರು. ಇದಾದ ಬಳಿಕ ಕೇಜ್ರಿವಾಲ್ ಸರ್ಕಾರದ ನೀತಿ ಹಾಗೂ ಕಾರ್ಯಕರ್ತರ ಬಗ್ಗೆ ತಾರತಮ್ಯವನ್ನು ಸದಾ ಪ್ರಶ್ನಿಸಿ, ಹಲವಾರು ಮಂದಿಯ ವಿರೋಧ ಕಟ್ಟಿಕೊಂಡರು. ಲೋಕಸಭೆ ಚುನಾವಣೆ ವೇಳೆ ಕೇಜ್ರಿವಾಲ್ ರೋಡ್ ಶೋಗೆ ಹೋಗಿರಲಿಲ್ಲ. ಪಕ್ಷದ ಅಧಿಕೃತ ವಾಟ್ಸಾಪ್ ಗ್ರೂಪಿನಿಂದ ಲಂಬಾರನ್ನು ತೆಗೆದು ಹಾಕಲಾಗಿತ್ತು. ಪಕ್ಷದ ಸೋಲಿಗೆ ಕೇಜ್ರಿವಾಲ್ ಕಾರಣ ಎಂದಿದ್ದರು.

ವಿದ್ಯಾರ್ಥಿ ಸಂಘಟನೆ ನಾಯಕಿ
ವಿದ್ಯಾರ್ಥಿ ಸಂಘಟನೆ ನಾಯಕಿಯಾಗಿ 90ರ ದಶಕದಲ್ಲಿ ಬೆಳೆದ ಲಂಬಾ ಅವರು 1995ರಲ್ಲಿ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆಯಾಗಿದ್ದರು. ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯುಐನ ಸಕ್ರಿಯ ಸದಸ್ಯರಾಗಿದ್ದ ಲಂಬಾ ಅವರು 2002ರಲ್ಲಿ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ 2015ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. "2013ರಿಂದ 2020 ರ ತನಕ ನನ್ನ ಪಯಣ ಆಶಾದಾಯಕವಾಗಿತ್ತು. ಎಲ್ಲಾ ಕ್ರಾಂತಿಕಾರಿ ಸಂಗಾತಿಗಳಿಗೆ ನನ್ನ ಅಭಿನಂದನೆಗಳು" ಎಂದಿದ್ದರು. ಈಗ ಮರಳಿ ಕಾಂಗ್ರೆಸ್ ಸೇರಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ
"ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಏಕೆ ಸಾಧ್ಯವಾಗಲಿಲ್ಲ ದೆಹಲಿಯಲ್ಲದೆ, ಹರ್ಯಾಣ, ಪಂಜಾಬ್ ನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಇನ್ನಿಲ್ಲದ್ದಂತೆ ಕಾಡಿ ಬೇಡಿದ ಎಎಪಿಯ ಹುಳುಕು ಎಲ್ಲರಿಗೂ ಗೊತ್ತಾಗಿದೆ, ದೆಹಲಿಯಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಏಕೆ ಸಾಧ್ಯವಾಗಲಿಲ್ಲ ಎಂಬುದು ಬಹಿರಂಗವಾಗಲಿ" ಎಂದು ಅಲ್ಕಾ ಆಗ್ರಹಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎಎಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲು ಅಲ್ಕಾ ನಿರಾಕರಿಸಿದ್ದರು.

2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದ ಲಂಬಾ
2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಸ್ಥಳೀಯವಾಗಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಆದರೆ, ಶೀಲಾ ದೀಕ್ಷಿತ್ ಅವರು ಹಿಂತಿರುಗಿದ ಬಳಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಅಸಾಧ್ಯವಾಯಿತು. ಲೋಕಸಭೆ ಚುನಾವಣೆ 2019ರಲ್ಲಿ 7ಕ್ಕೆ ಏಳು ಕ್ಷೇತ್ರಗಳಲ್ಲಿ ಕಳಪೆ ಸಾಧನೆ ಮಾಡಿದ ಎಎಪಿಯ ಸೋಲಿಗೆ ಯಾರು ಹೊಣೆ ಎಂದು ಅರವಿಂದ್ ಕೇಜ್ರಿವಾಲ್ ರನ್ನು ಅಲ್ಕಾ ಪ್ರಶ್ನಿಸಿದ್ದರು.












Click it and Unblock the Notifications