ಆಡಿಯೋ ಸ್ಟಿಂಗ್ ಬಹಿರಂಗ: ಪಕ್ಷಕ್ಕೆ ಕೇಜ್ರಿವಾಲ್ ಗುಡ್ ಬೈ?
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜನಾದೇಶ ಪಡೆದಿದ್ದ ಆಪ್ ಆದ್ಮಿ ಪಕ್ಷದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಆಂತರಿಕ ಬೇಗುದಿ ಮತ್ತು ಗುಂಪುಗಾರಿಕೆ ಮತ್ತೆ, ಮಗುದೊಮ್ಮೆ ಜಗಜ್ಜಾಹೀರಾಗಿದೆ.
ಪಕ್ಷದ ಸಂಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಮುಖ್ಯಮಂತ್ರಿ ಕೇಜ್ರಿವಾಲ್ ಮೇಲೆ ಮತ್ತೊಮ್ಮೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಕೇಜ್ರಿವಾಲ್ ಸರ್ವಾಧಿಕಾರಿ ಎಂದು ದೇಶಕ್ಕೆಲ್ಲಾ ತಿಳಿಯುವಂತೆ ಮಾಧ್ಯಮದ ಮುಂದೆ ಡಂಗುರ ಸಾರಿದ್ದಾರೆ.
ಇತ್ತ ಈ ಇಬ್ಬರು ನಾಯಕರ ವಿರುದ್ದ ಕೆಂಡಾಮಂಡಲವಾಗಿರುವ ದೆಹಲಿ ಮುಖ್ಯಮಂತ್ರಿ ಮತ್ತು 'ಫೇಸ್ ಆಪ್ ಆಮ್ ಆದ್ಮಿ ಪಾರ್ಟಿ' ಕೇಜ್ರಿವಾಲ್, ತಾನು ಪಕ್ಷದ ಎಲ್ಲಾ 66 ಶಾಸಕರ ಜೊತೆ ಪಕ್ಷವನ್ನೇ ತೊರೆಯುವುದಾಗಿ ಹೇಳಿರುವ ಆಡಿಯೋ ಸ್ಟಿಂಗ್ ಬಹಿರಂಗವಾಗಿದೆ. (ಎಎಪಿ ಹಿರಿಯ ನಾಯಕರಿಗೆ ಉಚ್ಚಾಟನೆ ಭೀತಿ)
ಹನ್ನೊಂದು ದಿನದ ಹಿಂದೆ ಕೇಜ್ರಿವಾಲ್ ಅವರಿಗೆ ಕಳುಹಿಸಿದ್ದ ಎಸ್ಎಂಎಸ್ ಸಂದೇಶಕ್ಕೆ ಕೇಜ್ರಿವಾಲ್ ಇದುವರೆಗೂ ಉತ್ತರಿಸಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ಪ್ರಶಾಂತ್ ಭೂಷಣ್ ಬೇಸರ ವ್ಯಕ್ತ ಪಡಿಸುತ್ತಿದ್ದರೆ, ಈ ಇಬ್ಬರೂ ನಾಯಕರ ವಿರುದ್ದ ಕೇಜ್ರಿವಾಲ್ ಕೆಂಡಾಮಂಡಲವಾಗಿರುವ ಆಡಿಯೋ ಸಾರ್ವಜನಿಕವಾಗಿದೆ.
ಈ ಮಧ್ಯೆ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ (ಮಾ 28) ಆರಂಭವಾಗಿದ್ದು, ಪಕ್ಷದ ಕಚೇರಿಯ ಹೊರಗೆ ಧರಣಿ ಆರಂಭಿಸಿದ್ದ ಹಿರಿಯ ಮುಖಂಡ ಯೋಗೇಂದ್ರ ಯಾದವ್ ಈಗ ಸಭೆಯಲ್ಲಿ ಭಾಗವಹಿಸಿದ್ದಾರೆ. ಪ್ರಶಾಂತ್ ಭೂಷಣ್ ಕೂಡಾ ಸಭೆಯಲ್ಲಿ ಹಾಜರಾಗಿದ್ದಾರೆ.

ಪ್ರಶಾಂತ್ ಭೂಷಣ್ ಬೇಸರ
ಈ ಹಿಂದೆ ಪಕ್ಷಕ್ಕೆ ಬಹುಮತವಿರಲಿಲ್ಲ ಎನ್ನುವ ಕಾರಣಕಾಗಿ ಕೇಜ್ರಿವಾಲ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದರು. ಅಲ್ಲದೆ ಕಾಂಗ್ರೆಸ್‌ನೊಂದಿಗೆ ಸೇರಿ ಸರಕಾರ ರಚಿಸುವುದಾಗಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಬಹುತೇಕ ನಾಯಕರ ವಿರೋಧವಿತ್ತು. ಆ ವೇಳೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ಪಕ್ಷ ನಾಶವಾಗುವ ಭಯದಿಂದ ತಮ್ಮದೇ ಪ್ರತ್ಯೇಕ ಬಣ ಕಟ್ಟಿ ಬಳಿಕ ಕಾಂಗ್ರೆಸ್‌ನೊಂದಿಗೆ ಸೇರಿ ಮೈತ್ರಿ ಸರ್ಕಾರವನ್ನು ರಚಿಸುತ್ತೇನೆ. ಜೊತೆಗೆ ನನ್ನ ಮಾತಿಗೆ ಬೆಲೆ ಇಲ್ಲದ ಜಾಗದಲ್ಲಿ ನಾನು ನಿಲ್ಲುವುದಿಲ್ಲ ಎಂದಿದ್ದರು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಹೊಸ ಪಕ್ಷ ಕಟ್ಟುವೆ
ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರಿರುವ ಪಕ್ಷದಲ್ಲಿ ನನಗಿರಲು ಇಷ್ಟವಿಲ್ಲ. ನನ್ನ ಎಲ್ಲಾ ಶಾಸಕರ ಜೊತೆ ಆಮ್ ಆದ್ಮಿ ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟುವೆ. ನೀವೆಲ್ಲಾ ಆ ಇಬ್ಬರು ನಾಯಕರ ಜೊತೆ ಆಪ್ ನಲ್ಲೇ ಇರಿ ಎಂದು ಕೇಜ್ರಿವಾಲ್, ವಾರಣಾಸಿಯ ಪಕ್ಷದ ಮುಖಂಡ ಉಮೇಶ್ ಸಿಂಗ್ ಜೊತೆ ನಡೆಸಿದ ಮಾತುಕತೆ ಆಡಿಯೋ ಸ್ಟಿಂಗ್ ನಲ್ಲಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಇದಕ್ಕೆಲ್ಲಾ ಅವರೇ ಕಾರಣ
ಆಡಿಯೋ ಸ್ಟಿಂಗಿಗೆ ಪ್ರಶಾಂತ್ ಮತ್ತು ಯಾದವ್ ಕಾರಣ. ಇವರಿಬ್ಬರೂ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಬಿಡುಗಡೆ ಮಾಡುವವರಿದ್ದರು. ಆದರೆ ಈ ಆಡಿಯೋ ಈಗ ಮಾಧ್ಯಮಕ್ಕೆ ಲಭ್ಯವಾಗಿದೆ ಎಂದು ಆಪ್ ವಕ್ತಾರ ದೀಪಕ್ ಬಾಜ್ಪೇಯಿ ತಿಳಿಸಿದ್ದಾರೆ.

ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು
ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಕಳೆದ ಒಂಬತ್ತು ತಿಂಗಳಿನಿಂದ ಪಕ್ಷದ ಸಭೆಯಲ್ಲಿ ನಡೆಯುವ ವಿದ್ಯಮಾನಗಳನ್ನು ರೆಕಾರ್ಡ್ ಮಾಡುತ್ತಿದ್ದರು. ಮತ್ತು ಅದನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ವಕ್ತಾರ ಬಾಜ್ಪೇಯಿ ಆರೋಪಿಸಿದ್ದಾರೆ.

ವಿಡಿಯೋ ರೆಕಾರ್ಡಿಂಗ್
ಶನಿವಾರ (ಮಾ 28) ನಡೆಯಲಿರುವ ಪಕ್ಷದ ಸಭೆಯ ಘಟನಾವಳಿಗಳನ್ನು ವಿಡಿಯೋ ರೆಕಾರ್ಡ್ ಮಾಡಬೇಕು, ಅವಶ್ಯಕತೆ ಬಿದ್ದಲ್ಲಿ ಗುಪ್ತಮತದಾನ ನಡೆಸಬೇಕೆಂದು ಯೋಗೇಂದ್ರ ಯಾದವ್ ಆಗ್ರಹಿಸಿದ್ದಾರೆ.












Click it and Unblock the Notifications