ಲಾಕ್‌ಡೌನ್: ಮನೆ ಸೇರಲೆಂದು ಹೊರಟು ಮಸಣ ಸೇರಿದ 42 ವಲಸೆ ಕಾರ್ಮಿಕರು
ದೆಹಲಿ, ಮೇ 7: ಕಳೆದ ನಾಲವತ್ತು ದಿನಗಳಿಂದ ದೇಶವೇ ಲಾಕ್‌ಡೌನ್ ಆಗಿದ್ದರಿಂದ ಅಪರಾಧಗಳು, ಅಪಘಾತಗಳು ಕಡಿಮೆ ಆಗಿವೆ ಎನ್ನುತ್ತಿದೆ ವರದಿಗಳು. ಆದರೂ ಅಗತ್ಯ ವಸ್ತುಗಳ ಪೂರೈಕೆ ವಾಹನ, ತುರ್ತು ಸೇವೆ ವಾಹನಗಳು ಹಾಗೂ ಇನ್ನಿತರ ಕೆಲವು ವಾಹನಗಳಿಗೆ ಸಂಚರಿಸಲು ಅನುಮತಿ ನೀಡಲಾಗಿತ್ತು.
ಇದೀಗ, ಲಾಕ್‌ಡೌನ್ ವೇಳೆಯಲ್ಲಿ ಸುಮಾರು 140 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅದರಲ್ಲಿ 42 ಜನ ವಲಸೆ ಕಾರ್ಮಿಕರು ಎನ್ನುವುದು ನೋವು ಹೆಚ್ಚು ಮಾಡಿದೆ.
ಜೀವನಕ್ಕಾಗಿ ಕೆಲಸ ಹುಡುಕಿಕೊಂಡು ಪ್ರಮುಖ ನಗರಗಳಿಗೆ ಬಂದಿದ್ದ ಕಾರ್ಮಿಕರು, ಲಾಕ್‌ಡೌನ್ ಘೋಷಣೆ ಆದ ಕಾರಣ, ತಮ್ಮ ಸ್ವಂತ ಊರುಗಳಿಗೆ ತೆರಳಲು ಮುಂದಾದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಂದ್ ಆಗಿದ್ದ ಕಾರಣ, ಅನೇಕರು ಕಾಲ್ನಡಿಗೆಯಲ್ಲಿ ಊರುಗಳ ಕಡೆ ಹೆಜ್ಜೆಯಿಟ್ಟಿದ್ದರು. ಈ ವೇಳೆ ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ಮುಂದೆ ಓದಿ....

ಮನೆ ಸೇರುವ ಬದಲು ಮಸಣ ಸೇರಿದ ಕಾರ್ಮಿಕರು
ಮಾರ್ಚ್ 24ರಂದು ಮೊದಲನೇ ಸಲ ಲಾಕ್‌ಡೌನ್ ಘೋಷಣೆಯಾಗಿತ್ತು. ಈವರೆಗೂ ಮೂರು ಸಲ ಲಾಕ್‌ಡೌನ್ ಪ್ರಕಟವಾಗಿದೆ. ಸುಮಾರು 40 ದಿನ ಕಳೆದು ಹೋಗಿದೆ. ಮೇ 3ನೇ ತಾರೀಕಿನವರೆಗೂ 42 ಜನ ವಲಸೆ ಕಾರ್ಮಿಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಮನೆಗೆ ಹಿಂತಿರುಗುತ್ತಿದ್ದರು ಎಂಬ ಮಾಹಿತಿ ಇದೆ. ನಡೆದುಕೊಂಡು, ಟ್ರಕ್, ಲಾರಿ ಹಾಗೂ ಇನ್ನಿತರ ವಾಹನಗಳಲ್ಲಿ ಕಣ್ತಪ್ಪಿಸಿ ಹೋಗುತ್ತಿದ್ದ ಕಾರ್ಮಿಕರು ಎಂದು ಹೇಳಲಾಗಿದೆ.

ಒಟ್ಟು 140 ಜನರು ಸಾವು
ಲಾಕ್‌ಡೌನ್ ಜಾರಿಯಾದ ಸಮಯದಿಂದ ಇಲ್ಲಿಯವರೆಗೂ ರಸ್ತೆ ಅಪಘಾತದಲ್ಲಿ 140 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ 42 ಕಾರ್ಮಿಕರು. ಈ 42 ಕಾರ್ಮಿಕರ ಪೈಕಿ 8 ಜನರು ಟ್ರಕ್ ಮತ್ತು ಕಾರು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ. ಇವರ ಜೊತ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಡಗಿಕೊಂಡಿದ್ದ 17 ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಯಾವ್ಯಾವ ರಾಜ್ಯದವರು ಇದ್ದಾರೆ
140 ಜನ ಮೃತಪಟ್ಟವರ ಪೈಕಿ 100ಕ್ಕಿಂತ ಹೆಚ್ಚು ಜನರು ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ಪಂಜಾಬ್, ತಮಿಳುನಾಡು, ಗುಜರಾಥ್, ಅಸ್ಸಾಂ, ಕೇರಳಕ್ಕೆ ಸೇರಿದವರು. ಸತ್ತವರ ಪೈಕಿ ಪಂಜಾಬ್‌ನವರು ಹೆಚ್ಚು, ನಂತರ ಕೇರಳ, ದೆಹಲಿ ಹಾಗೂ ಕರ್ನಾಟಕದವರು ಇದ್ದಾರೆ.

600 ಅಪಘಾತ ಸಂಭವಿಸಿದೆ
ಎರಡು ಹಂತದ ಲಾಕ್‌ಡೌನ್ ಮುಗಿಯುಷ್ಟರಲ್ಲಿ ಸುಮಾರು 600 ರಸ್ತೆ ಅಪಘಾತಗಳು ಸಂಭವಿಸಿದೆ ಎಂದು ವರದಿಗಳು ಹೇಳುತ್ತಿದೆ. ಇದು ಲೆಕ್ಕಕ್ಕೆ ಸಿಕ್ಕಿರುವುದು, ಲೆಕ್ಕಕ್ಕೆ ಸಿಗದೇ ಇರುವ ಅಪಘಾತಗಳು ನಡೆದಿರಬಹುದಾದ ಸಾಧ್ಯತೆ ಅಲ್ಲೆಗಳೆಯುವಂತಿಲ್ಲ.












Click it and Unblock the Notifications