ಮೈಸೂರು ದಸರೆಗೆ ಈ ಬಾರಿ ಯೋಗದ ಮೆರುಗು
ಮೈಸೂರು, ಸೆಪ್ಟೆಂಬರ್ 4 : ಯೋಗದ ರಾಜಧಾನಿಯೆಂದೇ ಬಿಂಬಿತವಾಗಿರುವ ಮೈಸೂರಿನಲ್ಲಿ ಈ ಬಾರಿ ಯೋಗ ದಸರೆಯನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಯೋಗ ಕುರಿತು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್, ಸೆ.21, 24, 26ರಂದು 3 ದಿನಗಳ ಕಾಲ ಯೋಗ ದಸರೆ ನಡೆಯಲಿದ್ದು, 21ರಂದು ದಸರಾ ಯೋಗ ಜ್ಯೊತಿ ನಡಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಮಾತನಾಡಿ, ಸೆ. 21 ರಂದು ದಸರಾ ಯೋಗ ಜ್ಯೋತಿ ನಡಿಗೆ ಸಂಜೆ 6ರಿಂದ 8ರವರೆಗೆ ಮಹಾರಾಜ ಓವೆಲ್ ಗ್ರೌಂಡ್ ನಲ್ಲಿ ನಡೆಯಲಿದೆ. 24ರಂದು ಬೆಳಗ್ಗೆ 6 ಗಂಟೆಗೆ ಅರಮನೆ ಆವರಣದಲ್ಲಿ ಯೋಗೋತ್ಸವ ಕಾರ್ಯಕ್ರಮ ನಡೆಯಲಿದೆ ಎಂಬ ವಿವರಣೆ ನೀಡಿದರು.
ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ನಡೆಯಲಿದೆ. ಸೆ.26ರಂದು ಕೊನೆಯ ದಿನವಾಗಿದ್ದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಯೋಗ ವಾರಣಾಸಿ ಮತ್ತು ದುರ್ಗಾ ನಮಸ್ಕಾರ ನಡೆಯಲಿದೆ ಎಂದು ಜಗದೀಶ್ ತಿಳಿಸಿದರು.

ಮೂರು ದಿನಗಳ ಯೋಗಾಸನ ನಡೆಯಲಿದ್ದು, ಸುಮಾರು ಐದು ಸಾವಿರ ಯೋಗಾಸಕ್ತರು ಸೇರುವ ನಿರೀಕ್ಷೆ ಇದೆ. ದಸರಾ ಯೋಗಾಸನ ಸ್ವರ್ಧೆ, ಮೊದಲ ಬಾರಿಗೆ ಯೋಗ ನಡಿಗೆ ಆಯೋಜಿಸಲಾಗಿದ್ದು, ನಾಲ್ಕು ಕಡೆಯಿಂದ ಯೋಗ ಪಟುಗಳು ಜ್ಯೋತಿಯನ್ನು ತರಲಿದ್ದಾರೆ. ಯೋಗ ಕಿರು ಹೊತ್ತಿಗೆಯನ್ನು ಸಹ ಬಿಡುಗಡೆ ಮಾಡಲಾಗುವುದು. ಯೋಗದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಗುವುದು.












Click it and Unblock the Notifications