Mysuru Food Poison: ಮೈಸೂರಿನಲ್ಲಿ ದಾರುಣ ಘಟನೆ: ಗೃಹ ಪ್ರವೇಶದ ಊಟ ಸೇವಿಸಿ ಮಹಿಳೆ ಸಾವು
ಮೈಸೂರು, ಜೂನ್ 03: ಗೃಹ ಪ್ರವೇಶದ ಊಟ ಸೇವಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ಮಾರ್ಬಳ್ಳಿಯಲ್ಲಿ ನಡೆದಿದೆ.
ನಿನ್ನೆ (ಜೂನ್ 02) ಮಾರ್ಬಳ್ಳಿ ಗ್ರಾಮದ ಮನೆಯೊಂದರಲ್ಲಿ ಗೃಹ ಪ್ರವೇಶ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಬಹುತೇಕರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಈ ಸಮಾರಂಭವದಲ್ಲಿ ಊಟ ಸೇವಿಸಿದ್ದ ಗ್ರಾಮದ ಜನರು ಏಕಾಏಕಿ ಅಸ್ವಸ್ಥರಾಗಿದ್ದಾರೆ. ದುರಾದೃಷ್ಟವಶಾತ್ ಗೃಹ ಪ್ರವೇಶದ ಊಟ ತಿಂದ ಶಿವಮ್ಮ (65) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ಗೃಹಪ್ರವೇಶ ಕಾರ್ಯದಲ್ಲಿ ಊಟ ಸೇವಿಸಿದ ಬಳಿಕ ಗ್ರಾಮದ ಜನರಿಗೆ ವಾಂತಿ, ಭೇದಿ ಶುರುವಾಗಿದೆ. ಪುರುಷರು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಮಾರ್ಬಳ್ಳಿಯ ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೃಹ ಪ್ರವೇಶಕ್ಕೆ ತಯಾರಿಸಿದ ಊಟ ಹಾಗೂ ಬಳಸಿದ ನೀರು, ಗ್ರಾಮಸ್ಥರು ಬಳಸುವ ನೀರಿನ ಬಗ್ಗೆ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರಿನಲ್ಲಿ ಗುರಾಯಿಸಿದಕ್ಕೆ ಯುವಕನ ಕೊಲೆ: ನಾಲ್ವರ ಬಂಧನ
ಮೈಸೂರು: ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಯುವಕನನ್ನು ನಾಲ್ವರು ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮೈಸೂರಿನ ಶಾಂತಿನಗರದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉದಯಗಿರಿ ಬಳಿಯ ಶಾಂತಿನಗರ ನಿವಾಸಿ ಜಾವೀದ್ ಖಾನ್ ಎನ್ನುವವರ ಪುತ್ರ ಅರ್ಬಾಜ್ ಖಾನ್ (18) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಶಾದಿಲ್, ಶಹಬಾಜ್, ಶೋಯಬ್ ಮತ್ತು ಸಾಹಿಲ್ ಎನ್ನುವಾತನನ್ನು ಬಂಧಿಸಲಾಗಿದೆ.
ಕೊಲೆಯಾದ ಅರ್ಬಾಜ್ ಖಾನ್ ಮತ್ತು ನಾಲ್ವರು ಆರೋಪಿಗಳು ಶಾಂತಿನಗರದ ನಿವಾಸಿಗಳಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿ ನೋಡಿದ್ದಾನೆ ಎನ್ನಲಾಗಿದೆ. ಈ ವಿಚಾರದಲ್ಲಿ ಗಲಾಟೆ ಶುರುವಾಗಿದ್ದು, ಆರೋಪಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಅರ್ಬಾಜ್ ಖಾನ್‌ಅನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಘಟನೆ ಸಂಬಂಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.












Click it and Unblock the Notifications