ಮೈಸೂರಿನಲ್ಲಿ ಪತಿ ಕೊಲೆ ಮಾಡಿ ನಾಟಕವಾಡಿದ ಪತ್ನಿ ಅಂದರ್
ಮೈಸೂರು, ಏಪ್ರಿಲ್ 19: ಮದ್ಯ ಸೇವಿಸಿ ಹಿಂಸೆ ಕೊಡುತ್ತಿದ್ದ ಪತಿ ವೇಣುಗೋಪಾಲ್ (43) ಅವರನ್ನು ಅವರ ಪತ್ನಿ ವಿಮಲಾ (29) ಇಲ್ಲಿನ ಗುಂಡೂರಾವ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊಲೆ ಮಾಡಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
"ನಿತ್ಯ ಕುಡಿದು ಬಂದು ಹೊಡೆಯುತ್ತಿದ್ದ. ಬದುಕಿಗೆ ಹಣ ನೀಡುತ್ತಿರಲಿಲ್ಲ. ಕೂಲಿ ಮಾಡಿಕೊಂಡು ಬಂದ ಹಣವನ್ನೂ ಕಿತ್ತುಕೊಳ್ಳುತ್ತಿದ್ದ ಹೀಗಾಗಿ, ಕೊಲೆ ಮಾಡಿದೆ" ಎಂದು ಆರೋಪಿ ಮಹಿಳೆ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಒಂದು ಕಡೆ ತಂದೆ ಕೊಲೆಯಾದರೆ, ತಾಯಿ ಜೈಲಿಗೆ ಹೋಗಿದ್ದಾಳೆ. ಇದರಿಂದ ಇಬ್ಬರು ಚಿಕ್ಕ ಮಕ್ಕಳು ತಬ್ಬಲಿಯಾಗುವಂತಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೊದಲಿಗೆ ಪತಿಯದು ಸಹಜ ಸಾವೆಂದು ಬಿಂಬಿಸಲು ಆರೋಪಿ ಮಹಿಳೆ ಯತ್ನಿಸಿದ್ದಳು. ಆದರೆ ಸಂಬಂಧಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರ ಮುಂದೆಯೂ ಪತಿ ರಾತ್ರಿ ಮಲಗಿದ್ದರು, ಬೆಳಿಗ್ಗೆ ಎದ್ದೇಳಲಿಲ್ಲ. ಕಾಯಿಲೆ ಇತ್ತು ಎಂದು ಹೇಳಿಕೆ ನೀಡಿದ್ದಳು.

ಆದರೆ, ಮರಣೋತ್ತರ ಪರೀಕ್ಷೆ ವೇಳೆ ಕುತ್ತಿಗೆ ಭಾಗದಲ್ಲಿ ಹಗ್ಗದಿಂದ ಬಿಗಿದಿರುವ ಗುರುತು ಪತ್ತೆಯಾಯಿತು. ಹಗ್ಗದಿಂದ ಬಿಗಿದಿದ್ದರಿಂದ ಪ್ರಾಣ ಹೋಗಿದೆ ಎಂಬ ವರದಿ ಬಂದಿತು. ಇದರ ಆಧಾರದ ಮೇಲೆ ವಿದ್ಯಾರಣ್ಯಪುರಂ ಠಾಣೆ ಇನ್‌ಸ್ಪೆಕ್ಟರ್ ರವಿಶಂಕರ್ ಅವರು ತೀವ್ರವಾಗಿ ವಿಚಾರಣೆ ನಡೆಸಿದಾಗ ರಾತ್ರಿ ಮಲಗಿದ್ದಾಗ ಕುತ್ತಿಗೆಗೆ ದಾರ ಬಿಗಿದು ಸಾಯಿಸಿರುವುದಾಗಿ ಒಪ್ಪಿಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications