ಕೆ. ಆರ್. ಕ್ಷೇತ್ರದ ಬಿಜೆಪಿ ಶಾಸಕ ರಾಮದಾಸ್ ಪ್ರತಿಸ್ಪರ್ಧಿ ಯಾರು?
ಮೈಸೂರು, ಡಿಸೆಂಬರ್ 02; ಕಳೆದ ಹಲವು ವರ್ಷಗಳಿಂದ ಮೈಸೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾದ ಕೃಷ್ಣರಾಜ (ಕೆ. ಆರ್.) ಕ್ಷೇತ್ರದ ಮೇಲೆ ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ಹಿಡಿತ ಸಾಧಿಸಿಕೊಂಡು ಬಂದಿದ್ದಾರೆ.
ವಿನೂತನ ಕಾರ್ಯಕ್ರಮಗಳ ಮೂಲಕ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳ ಗಮನಸೆಳೆದಿದ್ದಾರೆ. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದೇ ಕಷ್ಟ ಸಾಧ‍್ಯ ಎಂಬ ಗುಸುಗುಸು ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಗುಂಯ್ ಗುಡಲಾರಂಭಿಸಿವೆ.
ಮೈಸೂರಿನಲ್ಲಿ ಗುಂಬಜ್ ವಿವಾದ: ನನಗೆ ಕಿರುಕುಳ ಆಗುತ್ತಿದೆ ಎಂದ ಬಿಜೆಪಿ ಶಾಸಕ ರಾಮದಾಸ್
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತು ಇದೆ. ಇದು ಹಲವು ಬಾರಿ ನಿಜವೂ ಆಗಿದೆ. ಅದೇ ರೀತಿ ಗೆಲ್ಲುವ ಕುದುರೆಯಾಗಿರುವ ರಾಮದಾಸ್ ಅವರಿಗೆ ಟಿಕೆಟ್ ನೀಡದೆ ಬೇರೆ ಯಾರಿಗೆ ನೀಡಲು ಸಾಧ್ಯ? ಒಂದು ವೇಳೆ ಹಾಗೇನಾದರೂ ಮಾಡಿದರೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧ್ಯವಾಗುತ್ತದೆಯಾ? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳಲಾರಂಭಿಸಿವೆ.
ಪ್ರತಾಪ್ ಸಿಂಹ ಆಗ್ರಹದಂತೆ ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣದ ಗುಂಬಜ್ ತೆರವು
ಹಲವು ಘಟಾನುಘಟಿ ನಾಯಕರು ಬಿಜೆಪಿ ಪಕ್ಷ ಬಿಟ್ಟ ಸಂದರ್ಭದಲ್ಲಿಯೂ ಪಕ್ಷ ನಿಷ್ಠೆ ತೋರಿದ್ದ ಎಸ್. ಎ. ರಾಮದಾಸ್ ಅವರು ಹಿಂದೆ ಬಿಜೆಪಿ ಆಡಳಿತದಲ್ಲಿದ್ದ ವೇಳೆ ಸಚಿವರಾಗಿಯೂ ಕೆಲಸ ಮಾಡಿದ್ದರು. ಯಡಿಯೂರಪ್ಪ ಅವರ ಶಿಷ್ಯನಾಗಿದ್ದರೂ ಕೆಜೆಪಿ ಕಟ್ಟಿದಾಗ ಅತ್ತ ಮುಖ ಮಾಡದೆ ಬಿಜೆಪಿಯಲ್ಲಿ ಉಳಿದು 2013ರ ವಿಧಾನಸಭಾ ಚುನಾವಣೆ ಎದುರಿಸಿ ಸೋತಿದ್ದರು. ಐದು ವರ್ಷಗಳ ಕಾಲ ರಾಜಕೀಯ ವನವಾಸ ಅನುಭವಿಸಿದ ಬಳಿಕ 2018ರಲ್ಲಿ ಮತ್ತೆ ಗೆದ್ದು ಶಾಸಕರಾದರು.
ಬಿಜೆಪಿಗೆ ಮುಜುಗರ ತಂದ ಬಸ್ ನಿಲ್ದಾಣದ 'ಗುಂಬಜ್' ವಿವಾದ!

ರಾಮದಾಸ್ ಗೆ ಹಿತಶತ್ರುಗಳ ಬಾಧೆ
ಹಾಗೆ ನೋಡಿದರೆ ತಮ್ಮ ಕ್ಷೇತ್ರ ಸೇರಿದಂತೆ ಪಕ್ಷದೊಳಗೆ ಹಿತ ಶತ್ರುಗಳ ಸಂಖ್ಯೆ ಹೆಚ್ಚಿರುವ ಕಾರಣ ಮತ್ತು ಅವರು ಮಾಡಿಕೊಂಡಿರುವ ಕೆಲವೊಂದು ಎಡವಟ್ಟುಗಳಿಂದಾಗಿ ಕಳೆದ ಐದು ವರ್ಷಗಳ ಶಾಸಕರ ಆಡಳಿತಾವಧಿಯಲ್ಲಿ ಅವರಿಗೆ ಹೇಳಿಕೊಳ್ಳುವ ಯಶಸ್ಸು ತಂದುಕೊಟ್ಟಿಲ್ಲ. ಪಕ್ಷದೊಳಗೆ ಅವರಿಗೆ ಶತ್ರುಗಳು ಬೆಳೆಯುತ್ತಾ ಹೋದರು ಎನ್ನುವುದಕ್ಕಿಂತ ಹೋಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ರಾಮದಾಸ್ ಅವರನ್ನು ವಿರೋಧಿಸುವ ನಾಯಕರು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸ್ವಪಕ್ಷವಾದ ಬಿಜೆಪಿಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದಂತು ಸತ್ಯ. ಹೀಗಾಗಿ ಆಗಾಗ್ಗೆ ಅವರು ಅದರ ಪರಿಣಾಮವನ್ನು ಎದುರಿಸಿದ್ದಾರೆ. ಕ್ಷೇತ್ರದಲ್ಲಿ ಬಲವಾದ ಹಿಡಿತ ಸಾಧಿಸಿರುವ ಅವರನ್ನು ಹೇಗಾದರೂ ಮಾಡಿ ಬದಿಗೆ ತಳ್ಳದಿದ್ದರೆ ತಮಗೆ ಉಳಿಗಾಲವಿಲ್ಲ ಎಂಬ ಚಿಂತೆಯಲ್ಲಿ ಹಲವರಿದ್ದಾರೆ.

ಎಣ್ಣೆ ಸೀಗೆಕಾಯಿ ಸಂಬಂಧ
ಆಸರೆ ಫೌಂಡೇಶನ್ ಮೂಲಕ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವುದರೊಂದಿಗೆ ಎಲ್ಲರ ಮನೆ ಬಾಗಿಲಿಗೆ ತಲುಪಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರತಿ ಮನೆಯಲ್ಲಿ ನಡೆಯುವ ಹುಟ್ಟು ಹಬ್ಬ, ವಿವಾಹವಾರ್ಷಿಕೋತ್ಸವಕ್ಕೆ ಶುಭಾಶಯ ಹಾರೈಸುವ ಕಾರ್ಡುಗಳನ್ನು ತಲುಪಿಸಿ ಗಮನಸೆಳೆದಿದ್ದಾರೆ. ಆದರೆ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲವು ನಾಯಕರೊಂದಿಗೆ ಇವರ ಸಂಬಂಧ ಎಣ್ಣೆ ಸೀಗೆಕಾಯಿ ಆಗಿದ್ದು ಅದು ಆಗಾಗ್ಗೆ ಸುದ್ದಿಯಾಗಿ ವಿರೋಧಿಗಳು ಖುಷಿಪಡುವಂತಾಗಿದೆ.
ಇತ್ತೀಚೆಗೆ ನಡೆದ ಬಸ್ ನಿಲ್ದಾಣದ ಮೇಲೆ ಗುಂಬಜ್ ನಿರ್ಮಾಣದ ವಿವಾದ ಸ್ವಪಕ್ಷದ ಸಂಸದ ಮತ್ತು ಶಾಸಕರ ಜಟಾಪಟಿಯಂತೆ ಬಿಂಬಿತವಾಗಿತ್ತು. ಅದು ದೊಡ್ಡಮಟ್ಟದಲ್ಲಿ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತು ಮಾಡಿತ್ತಲ್ಲದೆ, ಸಂಸದ ಮತ್ತು ಶಾಸಕರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬೀದಿ ರಂಪವಾಗಿ ಸಾರ್ವಜನಿಕವಾಗಿ ಶಾಸಕ ರಾಮದಾಸ್ ಅವರು ಕಣ್ಣೀರಿಡುವಂತೆ ಮಾಡಿತ್ತು.

ಚುನಾವಣೆ ಮೇಲೆ ಪರಿಣಾಮ ಬೀರುತ್ತಾ?
ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ರಾಮದಾಸ್ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಅದನ್ನು ಪಕ್ಷದ ವೇದಿಯಲ್ಲಿ ಕುಳಿತು ಬಗೆಹರಿಸಿಕೊಳ್ಳದ ಕಾರಣದಿಂದಾಗಿ ಹಲವು ಬಾರಿ ಅದು ಸಾರ್ವಜನಿಕರ ಮುಂದೆ ನಗೆಪಾಟಲಿಗೀಡಾಗಿದೆ. ಪಕ್ಷದ ರಾಜ್ಯನಾಯಕರಾಗಲೀ ಹೈಕಮಾಂಡ್ ಆಗಲೀ ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲೇ ಇಲ್ಲ. ಅದರ ಪರಿಣಾಮಗಳು ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಾಗಿಲ್ಲ.
ಈ ಬಾರಿ ಹಾಲಿ ಶಾಸಕ ರಾಮದಾಸ್ ಅವರ ಬದಲಿಗೆ ಕೆ. ಆರ್. ಕ್ಷೇತ್ರದಿಂದ ಬಿಜೆಪಿ ನಗರಾಧ‍್ಯಕ್ಷ ಶ್ರೀವತ್ಸ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ, ಶಿಫಾರಸ್ಸುಗಳು ಕೇಳಿ ಬಂದಿವೆ ಎಂಬ ಮಾತುಗಳು ಇದೀಗ ರಾಜಕೀಯ ಚರ್ಚೆಯಾಗಿ ಮಾರ್ಪಟ್ಟಿವೆ. ಇದೆಷ್ಟು ನಿಜವೋ ಗೊತ್ತಿಲ್ಲ. ಆದರೆ ಈ ಸುದ್ದಿ ಜೀವಂತವಾಗಿರುವುದಂತು ಸತ್ಯ.

ಕ್ಷೇತ್ರದಲ್ಲಿ ಆಗೋದು ಬೆಳವಣಿಗೆನಾ? ಬದಲಾವಣೆನಾ?
ಈಗಿನ ಪರಿಸ್ಥಿತಿಯಲ್ಲಿ ಕೆ. ಆರ್. ಕ್ಷೇತ್ರದಲ್ಲಿ ಅಂತಹದೊಂದು ಬೆಳವಣಿಗೆಯಾದರೆ ಕಾಂಗ್ರೆಸ್‌ಗೆ ಲಾಭತರಲಿದೆ. ಕಾಂಗ್ರೆಸ್‌ನಲ್ಲಿ ಕೆ. ಆರ್. ಕೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಮಾಜಿ ಶಾಸಕ ಸೋಮಶೇಖರ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದ್ದು ಅವರು ಈಗಾಗಲೇ ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ. ಮನೆಮನೆಗೆ ತೆರಳಿ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಪಕ್ಷಗಳಿಂದಲೂ ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ಕೊನೆಯದಾಗಿ ಯಾರು ಸ್ಪರ್ಧಿಸಬೇಕೆಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆದ್ದರಿಂದ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳೇ ಅಂತಿಮವಲ್ಲ. ಆದ್ದರಿಂದ ರಾಜಕೀಯದಲ್ಲಿ ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳಲು ಮತ್ತು ತಳ್ಳಿ ಹಾಕಲು ಸಾಧ್ಯವಿಲ್ಲ. ಹೀಗಾಗಿ ಕೆ. ಆರ್. ಕ್ಷೇತ್ರದ ಬಿಜೆಪಿಯಲ್ಲಿ ಮುಂದೆ ಆಗಲಿರುವುದು ಬೆಳವಣಿಗೆನಾ?, ಬದಲಾವಣೆನಾ? ಎಂಬ ಕಾತರ ಎಲ್ಲರನ್ನು ಕಾಡುತ್ತಿದೆ.