ನಾಗರಹೊಳೆಯಲ್ಲಿ ಕಾಡ್ಗಿಚ್ಚು ತಡೆಗೆ ನಿರ್ಮಿಸಿರುವ 'ಅಗ್ನಿರೇಖೆ' ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು, ಜನವರಿ 10 : ಬೇಸಿಗೆ ದಿನಗಳು ಹತ್ತಿರವಾದಂತೆಲ್ಲ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡ್ಗಿಚ್ಚಿನ ಭಯ ಆವರಿಸಿ ಎದೆ ಢವಗುಟ್ಟಲು ಆರಂಭಿಸುತ್ತದೆ. ಆದರೆ ವರ್ಷದ ಆರಂಭದಲ್ಲಿಯೇ ಮೋಡಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಅಕಾಲಿಕ ಮಳೆಯಾಗಿರುವುದು ಕೃಷಿಕರಿಗೆ ತೊಂದರೆ ನೀಡಿದ್ದರೂ ಅರಣ್ಯ ಪ್ರದೇಶಗಳಿಗೆ ಮಾತ್ರ ವರದಾನವಾಗಿದೆ. ಜತೆಗೆ ಅರಣ್ಯಾಧಿಕಾರಿಗಳಿಗೂ ತುಸು ನೆಮ್ಮದಿ ತಂದಂತಾಗಿದೆ.
ಈ ಬಾರಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾದರೂ ಕೊನೆ ತನಕವೂ ಹಿಂಗಾರು ಮಳೆ ಆಗೊಮ್ಮೆ ಈಗೊಮ್ಮೆ ಸುರಿದ ಕಾರಣದಿಂದಾಗಿ ಅರಣ್ಯ ಹಸಿರಾಗಿ ಉಳಿಯಲು ಸಾಧ್ಯವಾಗಿದೆ. ಕುರುಚಲು ಕಾಡು, ಹುಲ್ಲುಗಳು ಒಣಗುವ ಹಂತ ತಲುಪಿದ್ದರೂ ಮಳೆ ಬಿದ್ದ ಪರಿಣಾಮ ಚಿಗುರಲಾರಂಭಿಸಿದೆ.

ಹೀಗಾಗಿ ಅರಣ್ಯದಲ್ಲಿ ಹಸಿರು ಇನ್ನೊಂದಷ್ಟು ದಿನ ಕಾಣಿಸಲಿದೆ. ಸಸ್ಯಹಾರಿ ಪ್ರಾಣಿಗಳಿಗೆ ಕುರುಚಲು ಕಾಡು, ಹುಲ್ಲುಗಳೇ ಆಹಾರವಾಗಿದ್ದು, ಬಿಸಿಲಿನ ಝಳ ಹೆಚ್ಚಾದಂತೆಯಲ್ಲ ಕುರುಚಲು ಕಾಡುಗಳು ಒಣಗಿ ಹೋಗುವುದರಿಂದ ಸಂಕಷ್ಟ ಅನುಭವಿಸಬೇಕಾಗುತ್ತಿತ್ತು. ಆದರೆ ಸದ್ಯಕ್ಕೆ ಹಸಿರಿರುವುದು ಖುಷಿಯ ವಿಚಾರವಾಗಿದೆ.
ಹಾಗೆನೋಡಿದರೆ ಮುಂದಿನ ದಿನಗಳು ಬೇಸಿಗೆಯ ದಿನಗಳಾದರೂ ಆಗೊಮ್ಮೆ ಈಗೊಮ್ಮೆ ಮಳೆ ಸುರಿದರೆ ಅರಣ್ಯ ಹಸಿರಾಗಿರಲು ಸಾಧ್ಯವಾಗುತ್ತದೆ. ಆದರೆ ಮುಂದಿನ ಬೇಸಿಗೆಯ ದಿನಗಳು ಹೇಗಿವೆಯೋ ಗೊತ್ತಿಲ್ಲ. ಆದ್ದರಿಂದ ಮುಂದೆ ಸಂಭವಿಸಬಹುದಾದ ಕಾಡ್ಗಿಚ್ಚಿನಂತಹ ಬೆಂಕಿ ಅವಘಡಗಳನ್ನು ತಪ್ಪಿಸುವ ಸಲುವಾಗಿ ಅರಣ್ಯ ಇಲಾಖೆ ಸಜ್ಜಾಗಿ ಈಗಿನಿಂದಲೇ ಮೈಸೂರು ಕೊಡಗಿಗೆ ಹೊಂದಿಕೊಂತಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಜ್ಜಾಗಿದ್ದು, ಕಾಡ್ಗಿಚ್ಚು ತಡೆಗೆ ನಿಗಾ ವಹಿಸಿರುವುದು ಎದ್ದು ಕಾಣಿಸುತ್ತಿದೆ.
ಇಳಿಮುಖವಾಗುತ್ತಿರುವ ಕಾಡ್ಗಿಚ್ಚು ಪ್ರಕರಣ
ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಯ ದಿನಗಳಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದಾಗಿ ಬಹಳಷ್ಟು ಅರಣ್ಯ ನಾಶ ಸಂಭವಿಸಿದೆ. ಇದಕ್ಕೆ ಒಣಗಿದ ಮರಗಳು ಇಂದಿಗೂ ಸಾಕ್ಷಿಯಾಗಿ ನಿಂತಿವೆ. ಆದರೆ ಕಳೆದ ಕೆಲವೊಂದು ವರ್ಷಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳಿಂದ ಕಾಡ್ಗಿಚ್ಚು ಪ್ರಕರಣ ಕಡಿಮೆಯಾಗಿರುವುದು ಸಂತಸದ ವಿಚಾರವಾಗಿದೆ.

ಅರಣ್ಯದ ಸುತ್ತಲೂ ಅದರಲ್ಲೂ ಸಾರ್ವಜನಿಕರ ಓಡಾಟವಿರುವ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಿ, ತಂತ್ರಜ್ಞಾನದ ನಿಗಾ ವಹಿಸಿ, ಸಿಬ್ಬಂದಿ ಮೂಲಕ ಗಸ್ತು ನಡೆಸಿ ಅರಣ್ಯವನ್ನು ಕಾಡ್ಗಿಚ್ಚಿನಿಂದ ರಕ್ಷಿಸುತ್ತಾ ಬರಲಾಗುತ್ತಿದ್ದು, ಎಷ್ಟೇ ನಿಗಾ ವಹಿಸಿದರೂ ಚಿಕ್ಕಪುಟ್ಟ ಅಗ್ನಿ ಅವಘಡ ಸಂಭವಿಸಿ ಅರಣ್ಯ ನಾಶವಾಗುತ್ತವೆ. ಆದರೆ 2016-17ರಲ್ಲಿ ಮಾತ್ರ 106 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಆದರೆ ಆ ನಂತರ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹಲವು ರೀತಿಯ ಕ್ರಮಗಳನ್ನು ಕೈಗೊಂಡ ಪರಿಣಾಮ ದೊಡ್ಡದಾದ ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಅಗ್ನಿರೇಖೆ ನಿರ್ಮಾಣ ಹೇಗೆ ನಡೆಯುತ್ತೆ?
ಪ್ರತಿವರ್ಷವೂ ನಾಗರಹೊಳೆ, ಕಲ್ಲಳ್ಳ, ಅಂತರಸಂತೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ, ವೀರನಹೊಸಹಳ್ಳಿ, ಹುಣಸೂರು, ಮತ್ತಿಗೋಡು, ವಲಯಗಳು ಸೇರಿದಂತೆ ಎಂಟು ವಲಯಗಳಲ್ಲಿ ಅಗ್ನಿರೇಖೆ (ಫೈರ್ ಲೈನ್) ನಿರ್ಮಿಸಲಾಗುತ್ತದೆ. ಅದರಂತೆ ಈ ಬಾರಿಯೂ ಅಗ್ನಿರೇಖೆ ನಿರ್ಮಿಸುವ ಕಾರ್ಯ ಆರಂಭವಾಗಿದೆ. ಮುಖ್ಯವಾಗಿ ಬೆಂಕಿ ಬೀಳುವ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಹತ್ತು ಮೀಟರ್ ಅಗಲದಲ್ಲಿ ಕುರುಚಲು ಕಾಡು, ಒಣ ಎಲೆಗಳನ್ನೆಲ್ಲ ತೆರವುಗೊಳಿಸಿ ಸ್ವಚ್ಛಗೊಳಿಸುವ ಮೂಲಕ ಅಗ್ನಿರೇಖೆಯನ್ನು ಮಾಡಲಾಗುತ್ತಿದೆ.
ಕಳೆದ ಬಾರಿ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿದ ವೇಳೆ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬುದರ ಬಗ್ಗೆ ಅರಣ್ಯ ಸಿಬ್ಬಂದಿಗೆ ಅಗ್ನಿಶಾಮಕ ಅಧಿಕಾರಿ, ಸಿಬ್ಬಂದಿಯಿಂದ ತರಬೇತಿ ನೀಡಲಾಗಿತ್ತು. ಜತೆಗೆ ಪ್ರತಿ ವಲಯಕ್ಕೊಂದರಂತೆ ಜೀಪ್ ಮೌಂಟೆಡ್ ಟ್ಯಾಂಕರ್, ಸ್ಪ್ರೇಯರ್, ಪವರ್ ಮರಕಟ್ಟಿಂಗ್ ಯಂತ್ರ, ಬ್ಲೋಯರ್ಸ್ ಅಗ್ನಿಶಾಮಕ ದಳದ ವಾಹನ ಮತ್ತು ಕ್ಯೂ.ಆರ್.ಟಿ. ವಾಹನ ಹೀಗೆ ಎಲ್ಲವನ್ನು ಬೇಸಿಗೆಯ ದಿನಗಳಲ್ಲಿ ಸಜ್ಜಾಗಿರಿಸಿಕೊಂಡು ನಾಗರಹೊಳೆ ಅರಣ್ಯವನ್ನು ಕಾಯಲಾಗಿತ್ತು. ಹೀಗಾಗಿ ಕಾಡ್ಗಿಚ್ಚಿನಿಂದ ಯಾವುದೇ ಅನಾಹುತಗಳು ನಡೆದಿರಲಿಲ್ಲ.

ಶೇ.60 ರಷ್ಟು ಅಗ್ನಿರೇಖೆ ಕಾರ್ಯ ಪೂರ್ಣ
ಈ ಬಾರಿಯೂ ಅರಣ್ಯ ಇಲಾಖೆ ಕಾಡ್ಗಿಚ್ಚಿನಿಂದ ಯಾವುದೇ ಅನಾಹುತ ಸಂಭವಿಸದಂತೆ ಈಗಿನಿಂದಲೇ ಕಾರ್ಯಪ್ರವೃತ್ತವಾಗಿದ್ದು, 847.9 ಚದರ ಕಿ.ಮೀ. ವಿಸ್ತೀರ್ಣದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ 8 ವಲಯಗಳಲ್ಲಿ ಅಗ್ನಿರೇಖೆ ಕೆಲಸವನ್ನು ಆರಂಭಿಸಿದ್ದಾರೆ. ಇದಕ್ಕಾಗಿ 400 ಫೈರ್ ವಾಚರ್ ಗಳ ನೇಮಕಮಾಡಿಕೊಳ್ಳಲಾಗಿದೆ.
ಈಗಾಗಲೇ ಶೇ.60 ರಷ್ಟು ಕೆಲಸ ಮುಗಿದಿದ್ದು ಸುಮಾರು 2539 ಕಿಲೋಮೀಟರ್ ಅಗ್ನಿ ರೇಖೆ ನಿರ್ಮಿಸಿದ್ದು, ಸಾಧನ ಸಲಕರಣೆಗಳ ಖರೀದಿ ಇತರೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಬೆಂಕಿ ಆಕಸ್ಮಿಕ ತಡೆಯಲು ಸನ್ನದ್ಧರಾಗಿರುವುದಾಗಿ ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ಡಾ.ಹರ್ಷಕುಮಾರ್ ಚಿಕ್ಕನರಗುಂದ ಹೇಳಿದರೆ, ನಾಗರಹೊಳೆ ಅರಣ್ಯದ ವನ್ಯ ಸಂಪತ್ತನ್ನು ಬೆಂಕಿಯಿಂದ ಕಾಪಾಡಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಉಪವಲಯ ಅರಣ್ಯ ಅಧಿಕಾರಿ ನವೀನ್ ರಾವತ್ ತಿಳಿಸಿದ್ದಾರೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications