Mysuru Dasara Flower Show 2023: ಸ್ವರ್ಗದಂತಿರುವ ಈ ಬಾರಿಯ ಫಲಪುಷ್ಪ ಪ್ರದರ್ಶನ
ಮೈಸೂರು, ಅಕ್ಟೋಬರ್, 16: ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಮೈಸೂರು ದಸರಾ ಪ್ರಯುಕ್ತ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವು ಪುಷ್ಪ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು, ಹೂವಿನಲ್ಲಿ ದೇಗುಲ ಸೃಷ್ಟಿಯಾಗಿ ಅದರೊಳಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ಮೈದಾಳಿ ನಿಂತ ಕಲಾಕೃತಿ ಆಸ್ತಿಕ ನಾಸ್ತಿಕರೆನ್ನದೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದು, ಫಲಪುಷ್ಪ ಪ್ರದರ್ಶನಕ್ಕೆ ತೆರಳಿದವರಿಗೆ ಹತ್ತಾರು ಅನುಭವದೊಂದಿಗೆ ಹೂವಿನಂತೆ ನೋಡುಗರ ಮೈಮನವೂ ಅರಳಲಿದೆ.
ತೋಟಗಾರಿಕೆ ಇಲಾಖೆಯು ಖಾಸಗಿ ಪ್ರಾಯೋಜಕ ಉಲ್ಲಾಸ್ ಅಗರಬತ್ತೀಸ್ ಕಡೆಯಿಂದ ಈ ಚಾಮುಂಡೇಶ್ವರಿ ದೇವಾಲಯದ ಪ್ರತಿರೂಪವನ್ನು 50 ಸಾವಿರಕ್ಕೂ ಹೆಚ್ಚು ಹೂಗಳಿಂದ ನಿರ್ಮಿಸಿದ್ದು, ಗೋಪುರದ ಮುಂಭಾಗದ ಚಾಮುಂಡೇಶ್ವರಿಯ ಪ್ರತಿಮೆಯೊಂದಿಗೆ ನಂದಿ ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ಭಕ್ತಿಯ ಸಂಕೇತವಾಗಿ ಊದುಬತ್ತಿಯನ್ನು ಸಹ ಹಚ್ಚಲಾಗಿದೆ. ಇದರಿಂದ ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಬರುತ್ತಿದ್ದ ಮಹಿಳೆಯರು ಭಕ್ತಿಯಿಂದ ದೇವಿಯ ಪ್ರತಿಮೆ ಕೈಮುಗಿದು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಹಲವು ಹೊಸತನಗಳನ್ನು ಮತ್ತು ವಿಶೇಷತೆಗಳನ್ನು ತೆರೆದಿಡಲಾಗಿದ್ದು, ಫಲಪುಷ್ಪ ಪ್ರದರ್ಶನದೊಳಗೆ ತೆರಳಿದ್ದೇ ಆದರೆ ಅಲ್ಲಿನ ಗಾಜಿನ ಮನೆಯಲ್ಲಿ ಪುಷ್ಪಲೋಕವೇ ಎದ್ದು ಬಂದಂತೆ ಗೋಚರಿಸುತ್ತದೆ. ಇಲ್ಲಿ 6 ಲಕ್ಷ ಕೊಲ್ಕತ್ತಾ ಹೂಗಳಿಂದ ನಿರ್ಮಾಣಗೊಂಡಿರುವ ಚಂದ್ರಯಾನ-3 ಆಕರ್ಷಕವಾಗಿದ್ದು, ಇದನ್ನು ಕೆಂಪು, ಬಿಳಿ ಗುಲಾಬಿಯೊಂದಿಗೆ ಸೇವಂತಿಗೆ ಹೂವಿನಿಂದ ಲಾಂಚಿಂಗ್ ರಾಕೆಟ್, ರೋವರ್ ಅನ್ನು ಇಪ್ಪತ್ತನಾಲ್ಕು ಅಡಿ ಎತ್ತರದಲ್ಲಿ ನಿರ್ಮಿಸಿರುವುದು ವಿಶೇಷವಾಗಿದೆ.
ಶಕ್ತಿ ಯೋಜನೆಯ ಪ್ರತಿರೂಪ 'ಹೂ' ಬಸ್
ಗಾಜಿನ ಮನೆಯಲ್ಲಿನ ಬಿಸಲಿನ ತಾಪಕ್ಕೆ ಹೂವುಗಳು ಒಣಗುವುದನ್ನು ತಡೆಯಲು ಆಗಾಗ್ಗೆ ಫಾಗರ್ ಮೂಲಕ ನೀರು ಚಿಮುಕಿಸಲಾಗುತ್ತಿದೆ. ಇದರೊಂದಿಗೆ ಸರಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯ ಪ್ರತಿರೂಪವಾಗಿ ಕೆಂಪು ಬಸ್, ಉಚಿತ ವಿದ್ಯುತ್ ಪೂರೈಕೆಯ ಗೃಹಜ್ಯೋತಿ ಯೋಜನೆಯನ್ನು ಅನಾವರಣ ಮಾಡಿದ್ದು, ಆ ಮೂಲಕ ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸಲಾಗುತ್ತಿದೆ.
ಇದರ ಜತೆಗೆ ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಡೇರಿ ಡೇ ಯಿಂದ ಕ್ರೀಡಾ ಸಾಮಗ್ರಿಯಾದ ಬ್ಯಾಟ್-ಬಾಲ್, ಫುಟ್ಬಾಲ್, ಬ್ಯಾಡ್ಮಿಂಟನ್‌ನ ವಸ್ತುಗಳನ್ನು ಹೂಗಳಿಂದ ನಿರ್ಮಿಸಲಾಗಿದೆ. ಇನ್ನು ಜೆಕೆ ಟೈರ್ಸ್‌ನಿಂದ ಹೆರಿಟೇಜ್ ಕಾರು, ಮಹಾರಾಜರ ಸಿಂಹಾಸನ, ಅಮೃತ್ ನೋನಿಯಿಂದ ವರ್ಲ್ಡ್ ಕಪ್ ಥೀಮ್, ಲೆವಿಸ್ಟಾ ವತಿಯಿಂದ ಬೃಹತ್ ಕಾಫಿ ಮಗ್, ಸೆಲ್ಫಿ ಪಾಯಿಂಟ್ ಮೊದಲಾದವು ವಿಶೇಷ ಆಕರ್ಷಣೆಯಾಗಿವೆ.
ಖಾಸಗಿ ವಾಹಿನಿಯಿಂದ ಸುವರ್ಣ ಕರ್ನಾಟಕದ ಪರಿಕಲ್ಪನೆ ನಿರ್ಮಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ಮೂರು ಕಡೆ ಪ್ರವೇಶ ದ್ವಾರ ನಿರ್ಮಿಸಲಾಗಿದ್ದು, ಮೂರು ಕಡೆಯೂ ಟಿಕೆಟ್ ಕೌಂಟರ್‌ಗಳನ್ನು ತೆರೆಯುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆಯ ಮಾಹಿತಿಯೊಂದಿಗೆ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ
ಚಂದ್ರಯಾನ-3 ಕಲಾಕೃತಿ ವೀಕ್ಷಿಸಿದ ಸಿಎಂ
ವಿಶಿಷ್ಟ ಮತ್ತು ವಿಭಿನ್ನವಾದ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಚಾಲನೆ ನೀಡಿದ್ದು, ಗಾಜಿನ ಮನೆಯಲ್ಲಿ ನಿರ್ಮಾಣಗೊಂಡಿದ್ದ ಚಂದ್ರಯಾನ-3 ಪುಷ್ಪ ಕಲಾಕೃತಿಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಜೊತೆಗೆ ಹೊರ ಆವರಣದಲ್ಲಿ ಸೈಕಲ್ ಬ್ರ್ಯಾಂಡ್ ಅಗರಬತ್ತೀಸ್ ವತಿಯಿಂದ ನಿರ್ಮಿಸಲಾಗಿದ್ದ ಅಗರಬತ್ತಿಯನ್ನು ಸಿಎಂ ಹಚ್ಚಿ ಗಮನಸೆಳೆದರು.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಕೆ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ತೋಟಗಾರಿಕೆ ಸಂಘದ ಶಶಿಕಲಾ ನಾಗರಾಜು, ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಅಂಗಡಿ, ಹಿರಿಯ ಸಹಾಯಕ ನಿರ್ದೇಶಕಿ ಸುವೇದಾ, ಸಹಾಯಕ ನಿರ್ದೇಶಕ ನವೀನ್ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications