ಬಿರುಬೇಸಿಗೆಯಲ್ಲೂ ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರರು: ಅಷ್ಟಕ್ಕೂ ಆಗಿದ್ದೇನು?
ಮೈಸೂರು, ಮಾರ್ಚ್ 22: ಕಲ್ಲಂಗಡಿ ಹಣ್ಣಿಗೆ ಬಣ್ಣ ಬರಲು ರಾಸಾಯನಿಕವನ್ನು ಚುಚ್ಚಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲಗಳಲ್ಲಿ ಹರಿದಾಡಿದ ಪರಿಣಾಮ ಅದರ ಪರಿಣಾಮಗಳು ಇವತ್ತು ಕಲ್ಲಂಗಡಿ ಬೆಳೆದ ರೈತರು ಮತ್ತು ಮಾರಾಟಗಾರರು ಹೊಟ್ಟೆಗೆ ತಣ್ಣೀರು ಬಟ್ಟೆಯಿಟ್ಟುಕೊಳ್ಳುವಂತೆ ಮಾಡಿದೆ. ಜತೆಗೆ ಬೇಸಿಗೆಯ ಸಮಯದಲ್ಲಿ ಯಥೇಚ್ಛವಾಗಿ ಬಳಸುತ್ತಿದ್ದ ಗ್ರಾಹಕರು ಕೂಡ ಕಲ್ಲಂಗಡಿಯನ್ನು ಕೊಂಡುಕೊಳ್ಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಆದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈಗ ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಲ್ಲಂಗಡಿಯನ್ನು ಬೆಳೆದಿರುವ ರೈತರು ಮಾರಾಟ ಮಾಡಲಾಗದೆ ಪರದಾಡುವಂತಾಗಿದೆ. ಕಲ್ಲಂಗಡಿಗೆ ಬೇಡಿಕೆಯಿಲ್ಲದ ಕಾರಣದಿಂದಾಗಿ ಮಾರಾಟಗಾರರು ರೈತರ ಬಳಿಗೆ ಹೋಗುತ್ತಿಲ್ಲ. ಒಂದು ವೇಳೆ ರೈತರಿಂದ ಖರೀದಿ ಮಾಡಿದರೂ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಹೀಗಾಗಿ ರೈತರಿಗೆ ಇತ್ತ ಮಾರಾಟ ಮಾಡುವಂತೆಯೂ ಇಲ್ಲ.. ಅತ್ತ ಜಮೀನಿನಲ್ಲಿ ಬಿಡುವಂತೆಯೂ ಇಲ್ಲ.. ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ನಗರಗಳಲ್ಲಿ ರಾಶಿ, ರಾಶಿ ಕಲ್ಲಂಗಡಿಗಳನ್ನು ತಂದು ಹಾಕಿಕೊಂಡಿದ್ದರೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸುಳಿಯುತ್ತಿಲ್ಲ.

ಸಾಮಾನ್ಯವಾಗಿ ಬೇಸಿಗೆಯ ಈ ದಿನಗಳಲ್ಲಿ ಕಲ್ಲಂಗಡಿಗೆ ಗ್ರಾಹಕರು ಮುಗಿಬೀಳುತ್ತಿದ್ದರು. ದೇಹಕ್ಕೆ ನೀರಿನಾಂಶ ಒದಗಿಸುವ ಕಲ್ಲಂಗಡಿಯ ಬಳಕೆಯನ್ನು ಹೆಚ್ಚು, ಹೆಚ್ಚಾಗಿ ಜನರು ಮಾಡುತ್ತಿದ್ದರು. ಸಭೆ ಸಮಾರಂಭಗಳಲ್ಲಿ ಕಲ್ಲಂಗಡಿ ಜ್ಯೂಸ್ ಬಳಕೆಯಾಗುತ್ತಿತ್ತು. ಮನೆಯಲ್ಲಿ ಜನ ಕಲ್ಲಂಗಡಿಯನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿಡುವ ಪ್ರಯತ್ನ ಮಾಡುತ್ತಿದ್ದರು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಲ್ಲಂಗಡಿ ಬಳಕೆ ತೀರಾ ಕಡಿಮೆಯಾಗಿದೆ. ಅದರ ಪರಿಣಾಮಗಳು ರೈತರ ಮೇಲಾಗುತ್ತಿದೆ. ಇದರಿಂದ ಕಲ್ಲಂಗಡಿ ಬೆಳೆದ ರೈತರು ಸಾಲಗಾರರಾಗುವ ಹಂತಕ್ಕೆ ಹೋಗಿದ್ದಾರೆ.
ಕಲ್ಲಂಗಡಿ ಬೆಳೆದ ರೈತರಿಗೆ ಇನ್ನಿಲ್ಲದ ಸಂಕಷ್ಟ
ಬೇಸಿಗೆ ವೇಳೆಗೆ ಕಲ್ಲಂಗಡಿ ಫಸಲು ಬಂದರೆ ಒಂದಷ್ಟು ಆರ್ಥಿಕ ಸದೃಢತೆ ಕಾಣಬಹುದೆಂದು ರೈತರು ಕನಸು ಕಂಡಿದ್ದರು. ದುಬಾರಿ ಕೂಲಿ ನೀಡಿ, ಗೊಬ್ಬರ ಹಾಕಿ ಕಲ್ಲಂಗಡಿಯನ್ನು ಬೆಳೆದಿದ್ದರು. ಆದರೆ ಸಾಮಾಜಿಕ ಜಾಲಗಳಲ್ಲಿ ಕಲ್ಲಂಗಡಿಯಲ್ಲಿ ಹಾನಿಕಾರಕ ರಾಸಾಯನಿಕವನ್ನು ಬಳಸಲಾಗುತ್ತಿದ್ದು ಇದರಿಂದ ಹಣ್ಣಿಗೆ ಕಲರ್ ಬರುತ್ತಿದೆ. ಇದು ಭಯಂಕರ ಡೇಂಜರ್ ಎಂಬಂತಹ ಸುದ್ದಿಗಳು ಎಗ್ಗಿಲ್ಲದೆ ಹರಿದಾಡಿದ್ದವು. ಇದೆಲ್ಲವನ್ನು ನೋಡಿದ ಜನ ಕಲ್ಲಂಗಡಿ ಬಳಸಲು ಹಿಂದೇಟು ಹಾಕಲು ಶುರು ಮಾಡಿದ್ದು, ಇದೀಗ ಸುಡುಬೇಸಿಗೆಯಲ್ಲಿಯೂ ಜನ ಕಲ್ಲಂಗಡಿ ಬಳಕೆ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ.

ಹಲವರು ಇದು ಸುಳ್ಳು, ಅಪಪ್ರಚಾರ, ಯಾವುದೇ ಕಾರಣಕ್ಕೂ ಹಣ್ಣಿಗೆ ರಾಸಾಯನಿಕವನ್ನು ಚುಚ್ಚಲು ಸಾಧ್ಯವಿಲ್ಲ. ಹಾಗೊಂದು ವೇಳೆ ಮಾಡಿದರೆ ಆ ಜಾಗ ಕೊಳೆಯುತ್ತದೆ. ಹಣ್ಣಿನ ಜೀವಕೋಶಗಳು ಅಷ್ಟು ಸುಲಭವಾಗಿ ರಾಸಾಯನಿಕವನ್ನು ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬಿತ್ಯಾದಿ ವಿಚಾರಗಳನ್ನು ಜನರಿಗೆ ಸವಿವರವಾಗಿ ವಿವರಿಸುವ ಪ್ರಯತ್ನವನ್ನು ಮಾಡುತ್ತಿದ್ದರೂ ಈಗಾಗಲೇ ಹರಡಿರುವ ಸುದ್ದಿಯನ್ನು ನಂಬಿದವರು ಅಷ್ಟು ಸುಲಭವಾಗಿ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಸತ್ಯವನ್ನು ತಿಳಿಸುವ ಕೆಲಸವನ್ನು ರೈತರಿಂದ ಆರಂಭವಾಗಿ ಮಾಧ್ಯಮದವರೆಗೆ ಹಲವರು ಮಾಡುತ್ತಾ ಬರುತ್ತಿದ್ದಾರೆ.
ಅಪಪ್ರಚಾರದ ವಿರುದ್ಧ ಕ್ರಮಕ್ಕೆ ಆಗ್ರಹ
ಒಮ್ಮೆ ಅಪಪ್ರಚಾರ ಮಾಡಿ ಬಿಟ್ಟರೆ ಅದರಿಂದ ಏನೆಲ್ಲ ತೊಂದರೆ ಆಗುತ್ತದೆ ಎಂಬುದಕ್ಕೆ ಈ ಬಾರಿ ಕಲ್ಲಂಗಡಿ ಬೆಳೆದ ರೈತರು ಅನುಭವಿಸುತ್ತಿರುವ ಸಂಕಷ್ಟ ನಿದರ್ಶನವಾಗಿದೆ. ಹೀಗಾಗಿ ಕಲ್ಲಂಗಡಿ ಕುರಿತಂತೆ ಹರಿದಾಡುತ್ತಿರುವ ಅಪಪ್ರಚಾರದ ವಿಚಾರಗಳ ಸತ್ಯಾಸತ್ಯತೆಯನ್ನು ಸರ್ಕಾರ ಜನರ ಮುಂದಿಡುವ ಕೆಲಸ ಮಾಡಬೇಕಾಗಿದೆ. ಈ ಕುರಿತಂತೆ ಈಗಾಗಲೇ ಕಲ್ಲಂಗಡಿ ಬೆಳೆದ ರೈತರು ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಜತೆಗೆ ಕಲ್ಲಂಗಡಿ ಹಣ್ಣಿನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ಈ ಕುರಿಂತೆ ಮಾತನಾಡಿರುವ ಮೈಸೂರಿನ ಪಿರಿಯಾಪಟ್ಟಣದ ರೈತ ಮುಖಂಡ ಆವರ್ತಿ ಚಂದ್ರಶೇಖರ್ ಅವರು ರಾಜ್ಯದಾದ್ಯಂತ ಬಹಳಷ್ಟು ರೈತರು ಸಾವಿರಾರು ಎಕರೆಯಲ್ಲಿ ಕಲ್ಲಂಗಡಿಯನ್ನು ಬೆಳೆದಿದ್ದಾರೆ. ಈ ಬೆಳೆಗೆ ಸೂಕ್ತ ಬೆಂಬಲ ಕೂಡ ಸರ್ಕಾರ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲಂಗಡಿ ಹಣ್ಣಿಗೆ ಬಣ್ಣ ಬರಲು ವಿಷಪೂರಿತ ಚುಚ್ಚು ಮದ್ದು ಹಾಕುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿ ಸಾಮಾಜಿಕ ಜಾಲತಾಣದಲಲ್ಲಿ ವಿಡಿಯೋಗಳು ವೈರಲ್ ಮಾಡುತ್ತಿದ್ದಾರೆ.
ಸರ್ಕಾರ ರೈತರ ಪರವಾಗಿ ನಿಲ್ಲುತ್ತಾ?
ಇದರಿಂದಾಗಿ ಕಲ್ಲಂಗಡಿ ಹಣ್ಣು ಕೊಂಡುಕೊಳ್ಳುವ ಮತ್ತು ಸೇವಿಸುವ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂಬ ಭಯದ ವಾತಾವರಣ ಸಾರ್ವಜನಿಕರು ಕಲ್ಲಂಗಡಿ ಹಣ್ಣನ್ನು ತಿರಸ್ಕಾರ ಮಾಡಲು ಕಾರಣವಾಗುತ್ತಿದೆ. ಕಲ್ಲಂಗಡಿ ಹಣ್ಣನ್ನು ಬಹಳ ವರ್ಷಗಳಿಂದ ನಾನು ಹತ್ತು ಎಕೆರೆಯಲ್ಲಿ ಬೆಳೆಯುತ್ತಿದ್ದೇನೆ. ಪ್ರತಿ ಹಣ್ಣಿಗೂ ಕೂಡ ಅದರ ಸ್ವಭಾವದ ಬಣ್ಣ ಮತ್ತು ಆಕಾರ, ರುಚಿಯನ್ನು ಹೊಂದಿರುತ್ತದೆ ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ಹಣ್ಣಿಗೆ ಕೃತಕವಾಗಿ ಯಾವುದೇ ರೀತಿಯ ಮದ್ದನ್ನು ನೀಡಲು ಸಾಧ್ಯವಿಲ್ಲ. ಕಲ್ಲಂಗಡಿ ಹಣ್ಣಿಗೂ ಕೂಡ ಯಾವುದೇ ರೀತಿಯ ಔಷಧಿಗಳನ್ನು ಚುಚ್ಚುಮದ್ದು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಕಿಡಿಗೇಡಿಗಳು ಮಾಡಿರುವ ಅಪಪ್ರಚಾರದಿಂದ ಇಂದು ಕಲ್ಲಂಗಡಿಯನ್ನು ಬೆಳೆದ ರೈತನು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರವು ಕೂಡಲೇ ಕಲ್ಲಂಗಡಿ ಹಣ್ಣಿನ ಪರೀಕ್ಷೆಗೆ ಒಳಪಡಿಸಿ ಅದನ್ನು ತಿನ್ನಲು ಉಪಯುಕ್ತವಾದ ಆಹಾರ ಪದಾರ್ಥವೆಂದು ಸೂಕ್ತ ಬೆಲೆ ನಿಗದಿಪಡಿಸಿ ಘೋಷಿಸಬೇಕು ಮತ್ತು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡೋಣ.












Click it and Unblock the Notifications