Arun Yogiraj: ಅಯೋಧ್ಯೆ ಶ್ರೀರಾಮನ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್‌ಗೆ ವೀಸಾ ನಿರಾಕರಿಸಿದ ಯುಎಸ್
ಅಯೋಧ್ಯೆ ಬಾಲರಾಮ ಮೂರ್ತಿಯನ್ನು ಕೆತ್ತನೆ ಮಾಡಿರುವ ಕರ್ನಾಟಕದ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನಿರಾಕರಿಸಿದೆ. ಶಿಲ್ಪಿ ಅರುಣ್ ಯೋಗಿರಾಜ್ ಅಮೆರಿಕದ ಅಕ್ಕ ಸಮ್ಮೇಳನ ಸೇರಿದಂತೆ ನಾನಾ ಕಾರ್ಯಕ್ರಮದಲ್ಲಿ ಭಾಗವಹಿಸಲು 20 ದಿನಗಳ ಪ್ರವಾಸ ಹೋಗಬೇಕಿತ್ತು. ಅದಕ್ಕಾಗಿ ಅವರು ಎರಡು ತಿಂಗಳ ಮೊದಲೇ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಮೆರಿಕ ಅವರ ವೀಸಾ ನಿರಾಕರಿಸಿದೆ.
ಆಗಸ್ಟ್ 30 ಮತ್ತು ಸೆಪ್ಟೆಂಬರ್ 1ರಂದು ಅಮೆರಿಕಾದಲ್ಲಿ ಅರುಣ್ ಯೋಗಿರಾಜ್ ಅವರ ಕಾರ್ಯಕ್ರಮ ನಿಗದಿಯಾಗಿತ್ತು. ಅವರು 20 ದಿನಕ್ಕೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆಗಸ್ಟ್ 10ರಂದು ವೀಸಾ ನಿರಾಕರಿಸಿರುವ ಬಗ್ಗೆ ಅರುಣ್ ಯೋಗಿರಾಜ್ ಅವರಿಗೆ ಮಾಹಿತಿ ಸಿಕ್ಕಿತು. ಅಮೆರಿಕದ ನಿರ್ಬಂಧನೆಗಳನ್ನು ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ವೀಸಾ ನಿರಾಕರಣೆಯಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರುಣ್ ಯೋಗಿರಾಜ್, ಯಾವ ಕಾರಣಕ್ಕೆ ವೀಸಾ ನಿರಾಕರಿಸಿದ್ದಾರೆ ಎಂಬುದು ಗೊತ್ತಿಲ್ಲ. ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೆವು. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಜತೆಗೆ ಸಹ್ಯಾದ್ರಿ ಕನ್ನಡಕೂಟದಿಂದ 'ಸರ್ವಶ್ರೇಷ್ಠ ಕನ್ನಡಿಗ' ಪ್ರಶಸ್ತಿ ಪ್ರದಾನ ಸಮಾರಂಭವೂ ಇತ್ತು. ನಮ್ಮ ವಿದೇಶಾಂಗ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ದೊರೆಯಿತು. ಆದರೆ, ಅಮೆರಿಕ ರಾಯಭಾರ ಕಚೇರಿಯಿಂದ ಯಾವುದೇ ಸಹಕಾರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದ ಹೆಮ್ಮೆಯ ಶಿಲ್ಪಿ
ಅರುಣ್ ಯೋಗಿರಾಜ್ ಅದ್ಭುತ ಶಿಲ್ಪಿ, ಅಯೋಧ್ಯೆ ಬಾಲರಾಮನ ವಿಗ್ರಹ ಕೆತ್ತಿದ ಬಳಿಕ ಅವರ ಜನಪ್ರಿಯತೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲು ಮೂವರು ಶಿಲ್ಪಿಗಳು ಬಾಲರಾಮನ ವಿಗ್ರಹ ಕೆತ್ತನೆ ಮಾಡಿದ್ದು, ಅದರಲ್ಲಿ ಅರುಣ್ ಯೋಗಿರಾಜ್ ಕೆತ್ತಿದ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಗೆ ಆಯ್ಕೆಯಾಗಿತ್ತು. ಬಾಲರಾಮನ ವಿಗ್ರಹ ನೋಡಿದ ಭಕ್ತಾದಿಗಳು ಭಾವಪರವಶರಾಗಿದ್ದರು.












Click it and Unblock the Notifications