ಮೈಸೂರಿನಲ್ಲಿ ನಿರ್ಮಲಾ ಸೀತಾರಾಮನ್: ಸಾಂಸ್ಕೃತಿಕ ನಗರಿಯನ್ನು ಹಾಡಿ ಹೊಗಳಿದ ಕೇಂದ್ರ ಸಚಿವೆ
ಮೈಸೂರು, ನವೆಂಬರ್ 08: ಭಾರತದಲ್ಲಿನ ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಭಿನ್ನ ಸಂಸ್ಕೃತಿ, ಭಾಷೆ ಹಾಗೂ ಸಂಗೀತದ ಪರಂಪರೆಯನ್ನು ಹೊಂದಿದ್ದು, ಪ್ರತಿಯೊಂದು ದೇಶದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಪ್ರವಾಸೋದ್ಯಮ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ 'ಮೈಸೂರು ಸಂಗೀತ ಸುಗಂಧ ಉತ್ಸವ' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಸಂಗೀತ ಪರಂಪರೆಗೆ ಕರ್ನಾಟಕ ಸಂಗೀತದ ಕೊಡುಗೆ ಮಹತ್ವವಾಗಿದ್ದು, ಜಾತಿ, ಧರ್ಮ ಹಾಗೂ ಭಾಷೆಯನ್ನು ಮೀರಿ ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದರು.

ಇಂದು ಸಂಗೀತ ಸುಗಂಧ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಿರುವ ಮುಖ್ಯ ಉದ್ದೇಶ, ಇಲ್ಲಿನ ವಿಜಯ ನಗರ ಸಾಮ್ರಾಜ್ಯದಂತಹ ರಾಜ ಮನೆತನಗಳ ಒಡೆಯರು ಸಂಗೀತಕ್ಕೆ ಹಾಗೂ ಅದರ ಬೆಳವಣಿಗೆಗೆ ನೀಡುರುವ ಪ್ರೋತ್ಸಾಹವಾಗಿದೆ. ಅಲ್ಲದೆ ಮೈಸೂರು ಸಂಗೀತದ ನಾಡು ಹಾಗೆಯೇ ಚಂದನದ ನಾಡು ಆಗಿದೆ. ಹಾಗಾಗಿ ಇಂತಹ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿ ಆ ಕಾರ್ಯಕ್ರಮದಲ್ಲಿ ದಾಸ ಸಂಗೀತದ ಬಗ್ಗೆ ಮಾತಾಡವುದು ಹೆಮ್ಮೆಯ ವಿಷಯ ಎಂದು ಹೇಳಿದರು.
12 ನೇ ಮತ್ತು 16 ನೇ ಶತಮಾನದ ನಡುವೆ, ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಕರ್ನಾಟಕ ಸಂಗೀತವು ಪ್ರವರ್ಧಮಾನಕ್ಕೆ ಬಂದಿತು. ಈ ಸಮಯದಲ್ಲಿ ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯಲ್ಪಡುವ ಸಂತ ಪುರಂದರದಾಸರು ಲಕ್ಷಾಂತರ ಕೀರ್ತನೆಗಳು, ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಪಾಠಗಳನ್ನು ಸಹ ರೂಪಿಸಿದ್ದಾರೆ ಎಂದರು.
18 ನೇ ಶತಮಾನವನ್ನು ಕರ್ನಾಟಕ ಸಂಗೀತದ ಸುವರ್ಣಯುಗವೆಂದು ಪರಿಗಣಿಸಬಹುದು. ಪುರಂದರ ದಾಸರ ನಂತರ ತ್ಯಾಗರಾಜ, ಮುತ್ತು ಸ್ವಾಮಿ ದೀಕ್ಷಿತರ್ ಮತ್ತು ಶ್ಯಾಮ ಶಾಸ್ತ್ರೀ ಈ ಮೂವರು ಸಂಯೋಜಕರು ಸಮಕಾಲೀನರಾಗಿದ್ದರು. ಅವರ ಸಂಯೋಜನೆಗಳಿಂದ ಕರ್ನಾಟಕ ಸಂಗೀತ ಸಂಗ್ರಹವನ್ನು ಶ್ರೀಮಂತಗೊಳಿಸಿದರು. ಅವರು ಮಧುರ ಸೌಂದರ್ಯ, ಲಯಬದ್ಧ ಮತ್ತು ಭಕ್ತಿಯ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ ಎಂದರು.
ಭಾರತವು ವಿವಿಧ ಸಂಸ್ಕೃತಿ ಭಾಷೆ ಸಂಗೀತವನ್ನು ಹೊಂದಿರುವಂತಹ ದೇಶವಾಗಿದ್ದು, ಅದನ್ನು ಉಳಿಸಿ ಬೆಳೆಸಬೇಕು. ಏಕ್ ಭಾರತ್ ವಿಕಸಿತ್ ಭಾರತ್ ಎಂಬ ಮಾತಿನ ಅರ್ಥ ಭಾರತದ ಪ್ರತಿಯೊಂದು ರಾಜ್ಯವು ಅದರಲ್ಲಿಯೂ ದಕ್ಷಿಣ ಭಾರತದ ರಾಜ್ಯಗಳು ತಮ್ಮದೇ ಆದ ಭಾಷೆ ಹಾಗೂ ಸಂಸ್ಕೃತಿಯನ್ನು ಹೊಂದಿದ್ದರೂ ನಾವು ಪ್ರತಿನಿಧಿಸುವ ದೇಶ ಒಂದೇ ಅದು ಭಾರತ. ಹಾಗಾಗಿ ಪ್ರತಿಯೊಬ್ಬರೂ ಬೇಧ-ಭಾವವನ್ನು ತೊರೆದು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಪ್ರೋತ್ಸಾಹಿಸಿ ನಾವು ಅದಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯು ತನ್ನದೇ ಆದ ಜಿ.ಐ. ಟ್ಯಾಗ್ ಗಳನ್ನು ಹೊಂದಿರುವ ವಿಭಿನ್ನ ಉತ್ಪನ್ನಗಳನ್ನು ಹೊಂದಿದೆ. ಇದನ್ನು ಗುರುತಿಸಿ ಸರ್ಕಾರ ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಹೆಸರಿನಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರೋತ್ಸಾಹವನ್ನು ನೀಡಲಾಗುತ್ತಿದೆ.
ಪುರoದರದಾಸರು ಭಿಕ್ಷೆಗಾಗಿ ಮನೆ ಮನೆಗೆ ತೆರಳುವಾಗ ರಚಿಸಿದಂತಹ ಕೀರ್ತನೆಗಳು ಇಂದು ಎಲ್ಲರನ್ನು ತಲುಪಿ, ಅವರ ಪ್ರತಿಯೊಂದು ಕೀರ್ತನೆಯಲ್ಲಿಯೂ ಪುರಂದರ ವಿಠ್ಠಲನನ್ನು ನೆನೆಯುತ್ತಾರೆ. ಕನ್ನಡ ಸಂಗೀತ ಲೋಕದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಕರ್ನಾಟಿಕ್ ಸಂಗೀತದ ಬಗ್ಗೆ ತಿಳಿಯುವಾಗ ದಾಸ ಸಂಗೀತವು ಪ್ರಮುಖವಾದದ್ದಾಗಿದ್ದು, ಪುರಂದರರ ನಂತರ ಬಂದಂತಹ ಕನಕದಾಸರು, ಹರಿದಾಸರು ಹಾಗೂ ಇನ್ನಿತರರು ಅದನ್ನು ಬೆಳೆಸುವಲ್ಲಿ ತಮ್ಮನ್ನು ತಾವು ಅರ್ಪಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಇಂದು ಎಲ್ಲಾ ಭಾಷೆ, ಪ್ರದೇಶವನ್ನು ಮೀರಿ ಜನರನ್ನು ತಲುಪಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.












Click it and Unblock the Notifications