ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ 15 ನಿಮಿಷದ ಅಂತರದಲ್ಲೇ ಎರಡು ದರೋಡೆ
ಮೈಸೂರು, ಫೆಬ್ರವರಿ 3: ನಿನ್ನೆ ಬೆಳ್ಳಂಬೆಳಿಗ್ಗೆ ದರೋಡೆಕೋರರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕೇವಲ 15 ನಿಮಿಷದ ಅಂತರದಲ್ಲೇ ಎರಡು ಬಾರಿ ದರೋಡೆ ನಡೆಸಿದ್ದು, ಕಾರು ಮತ್ತು ಬೈಕನ್ನು ಅಪಹರಿಸಿದ್ದಾರೆ.
ಶ್ರೀರಂಗಪಟ್ಟಣ ನಿವಾಸಿ ಮಣಿಕುಮಾರ್ ಎಂಬುವರ ಬೈಕು ಹಾಗೂ ಕೊಡಗಿನ ಸುಂಟಿಕೊಪ್ಪ ನಿವಾಸಿ ರೈಮಂಡ್ ಡಿಸೋಜಾ ಅವರ ಕಾರನ್ನು ದರೋಡೆ ಮಾಡಲಾಗಿದೆ. ನಿನ್ನೆ ಬೆಳಗಿನ ಜಾವ 5.30ರ ಸುಮಾರಿಗೆ ಮಣಿಕುಮಾರ್, ತಮ್ಮ ಬೈಕಿನಲ್ಲಿ ಹೊಸೂರಿಗೆ ತೆರಳುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ಐವರು ಗೌರಿಪುರ ಬಳಿ ಅವರ ಬೈಕನ್ನು ಅಡ್ಡಗಟ್ಟಿ ಮಚ್ಚು ಮತ್ತು ಲಾಂಗ್ ತೋರಿಸಿ ಬೆದರಿಸಿದ್ದು, ಅವರ ಮೇಲೆ ಹಲ್ಲೆ ನಡೆಸಿ ಬೈಕ್, ಮೊಬೈಲ್ ಮತ್ತು 500 ರೂ.ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಇದಾದ ಕೇವಲ ಹದಿನೈದೇ ನಿಮಿಷಗಳಲ್ಲಿ ಗೌರಿಪುರದಿಂದ ಸುಮಾರು 10 ಕಿ.ಮೀ. ದೂರವಿರುವ ಕೋಡಿಶೆಟ್ಟಿಪುರ ಬಳಿ ಕೊಡಗಿನ ಡಿಸೋಜಾ ಅವರು ತಮ್ಮ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದಾಗ, ಅಪಘಾತವಾದಂತೆ ರಸ್ತೆಗೆ ಅಡ್ಡಲಾಗಿ ಬೈಕ್ ಮಲಗಿಸಿ, ಅದರ ಪಕ್ಕದಲ್ಲೇ ಓರ್ವ ಬಿದ್ದಿರುವಂತೆ ನಟಿಸುತ್ತಿದ್ದ. ಅಪಘಾತವಾಗಿದೆ ಎಂದು ನಂಬಿದ ಡಿಸೋಜಾ ಅವರು ಸಹಾಯ ಮಾಡುವ ಉದ್ದೇಶದಿಂದ ಕಾರನ್ನು ರಸ್ತೆಯ ಅಂಚಿನಲ್ಲಿ ನಿಲ್ಲಿಸುತ್ತಿದ್ದಂತೆಯೇ ರಸ್ತೆಯಲ್ಲಿ ಬಿದ್ದಿದ್ದವ, ಮರೆಯಾಗಿ ನಿಂತಿದ್ದ ಇತರ ನಾಲ್ವರು ದರೋಡೆಕೋರರು ಅವರನ್ನು ಸುತ್ತುವರೆದು ಹಲ್ಲೆ ನಡೆಸಿ ಅವರ ಬಳಿ ಇದ್ದ ಮೊಬೈಲ್, 1500 ರೂ. ನಗದು, ಕಾರನ್ನು ಅಪಹರಿಸಿದ್ದಾರೆ.

ಕಾರ್ಯನಿಮಿತ್ತ ಸುಂಟಿಕೊಪ್ಪಕ್ಕೆ ಬಂದು ಡಿಸೋಜಾ ಅವರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿ ದರೋಡೆ ನಡೆದಿದೆ ಎಂಬುದು ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಜಿಲ್ಲಾ ಎಸ್ ಪಿ ಪರಶುರಾಮ್ ಅವರು, ದರೋಡೆಕೋರರು ಬೆಂಗಳೂರು ಕಡೆ ತೆರಳಿದ್ದಾರೆ ಎಂಬ ಮಾಹಿತಿ ಪಡೆದು ಮಂಡ್ಯ ಮತ್ತು ಮದ್ದೂರು ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಈ ದರೋಡೆಕೋರರು ಎರಡು ದರೋಡೆ ನಂತರ ಬೆಂಗಳೂರು ಕಡೆಗೆ ಹೆದ್ದಾರಿಯಲ್ಲಿ ತೆರಳದೇ, ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications