ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಗೆಲುವಿಗೆ ಅದೆಷ್ಟು ಅಡ್ಡಿಗಳೋ!
ಮೈಸೂರು, ಫೆಬ್ರವರಿ 22 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಬೆರಳು ಮಡಚಿ ದಿನ ಎಣಿಸಬಹುದೇನೋ! ತೀರಾ ಹತ್ತಿರ ಹತ್ತಿರಕ್ಕೆ ಬರುತ್ತಿದೆ ಜಗಜಟ್ಟಿಗಳ ಕಾಳಗಕ್ಕೆ ಸಾಕ್ಷಿ ಆಗಬಹುದಾದ ಈ ಬಾರಿಯ ಚುನಾವಣೆ. ಇನ್ನು ಉಸ್ತಾದ್ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಬಹಳ ಆಸಕ್ತಿಕರವಾಗಿವೆ ಹಲವು ಅಖಾಡ.
ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವ ಸಲುವಾಗಿ ದೃಷ್ಟಿ ನೆಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರವು ಬರೀ ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ ಮಟ್ಟದಲ್ಲಿ ಕಣ್ಣರಳಿಸುವಂತೆ ಮಾಡಿದೆ. ಹಾಗಿದ್ದರೆ ಸಿದ್ದರಾಮಯ್ಯ ಅವರು ಗೆಲುವು ಸುಲಭವಾಗಲಿ ಎಂಬ ಕಾರಣಕ್ಕೆ ಆ ಕ್ಷೇತ್ರ ಆರಿಸಿಕೊಂಡರೆ ಎಂಬ ಪ್ರಶ್ನೆ ಏಳುತ್ತದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಗೆಲ್ಲುವುದು ಸುಲಭವಲ್ಲ!
ಹಾಗಿದ್ದರೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಗೆಲುವು ಅಷ್ಟು ಸುಲಭವೇ ಎಂಬ ಪ್ರಶ್ನೆ ಏಳುತ್ತದೆ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವರ್ಸಸ್ ಜಿ.ಟಿ.ದೇವೇಗೌಡರ ಅಂತ ಇದೆ. ದೇವೇಗೌಡರು ಜೆಡಿಎಸ್ ನ ಹುರಿಯಾಳು. ಇನ್ನು ಬಿಜೆಪಿ ಏನು ಮಾಡುತ್ತದೆ ಎಂಬುದು ಮಾತ್ರ ಕುತೂಹಲಕಾರಿ ಅಂಶ. ಸದ್ಯದ ಸ್ಥಿತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಂತರಾಳ ಏನು ಎಂದು ತಿಳಿಸುವ ಪ್ರತ್ಯಕ್ಷ ವರದಿ ಇಲ್ಲಿದೆ.

ಸಿದ್ದರಾಮಯ್ಯಗೆ ಮರುಜನ್ಮ ನೀಡಿದ ಕ್ಷೇತ್ರ
ಇಡೀ ರಾಜ್ಯವೇ ತನ್ನತ್ತ ನೋಡುವಂತೆ ಮಾಡಿರುವ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರ ಚಾಮುಂಡೇಶ್ವರಿ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಮರುಜನ್ಮ ನೀಡಿದ್ದ ಕ್ಷೇತ್ರ. 1980ರ ದಶಕದಲ್ಲಿ ಸಿದ್ದರಾಮಯ್ಯ ಇಲ್ಲಿಂದಲೇ ರಾಜಕೀಯ ಅಸ್ತಿತ್ವ ಕಂಡುಕೊಂಡವರು. 1994ರಲ್ಲಿ ಇಲ್ಲಿಂದ ಗೆದ್ದು, 1995ರಲ್ಲಿ ಉಪಮುಖ್ಯಮಂತ್ರಿ ಕೂಡ ಆಗಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ನಿಂತು ಹೋರಾಡಿದ್ದರೂ 2006ರ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಇಲ್ಲಿನ ಜನರಿಗೆ ಆಶೀರ್ವಾದ ಮಾಡಿದ್ದರು.

ಮತ್ತೆ ಚಾಮುಂಡೇಶ್ವರಿ ಕ್ಷೇತ್ರದತ್ತ
2008ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಕ್ಷೇತ್ರವನ್ನೇ ಬಿಟ್ಟು ಆಗಷ್ಟೇ ಉದಯವಾದ ವರುಣಾ ಕ್ಷೇತ್ರದಿಂದ ನಿಂತು ಗೆದ್ದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಕೂಡ ಆಗಿದ್ದಾರೆ. ಆದರೆ ಮತ್ತೆ ಚಾಮುಂಡೇಶ್ವರಿ ಕ್ಷೇತ್ರ ಸುದ್ದಿಯಲ್ಲಿದೆ. ಆದಕ್ಕೆ ಕಾರಣ ಈ ಬಾರಿ ಇಲ್ಲಿಂದಲೇ ಸಿದ್ದರಾಮಯ್ಯ ಅವರು ಕಣಕ್ಕಿಳಿಯುವ ಮಾತು ಆಡಿದ್ದಾರೆ. ತಾವು ಈ ವರೆಗೆ ಪ್ರತಿನಿಧಿಸಿದ ವರುಣಾ ಕ್ಷೇತ್ರದಿಂದ ತಮ್ಮ ಮಗ ಯತೀಂದ್ರರನ್ನು ಕಣಕ್ಕೆ ಇಳಿಸುವ ಉಮೇದು ಅವರದು.

ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ
ಚಾಮುಂಡೇಶ್ವರಿ ಬೇರೆ ಕ್ಷೇತ್ರಗಳಂತಲ್ಲ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದಾಗ ಇಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಯಿತು. ಇಲ್ಲಿ ಒಕ್ಕಲಿಗ ಸಮುದಾಯದವರು 70 ಸಾವಿರದಷ್ಟು ಮತಗಳಿದ್ದು, ಕುರುಬ, ನಾಯಕ ಮತ್ತು ದಲಿತ ಸಮುದಾಯದವರದೂ ಸೇರಿ ಒಟ್ಟು 1,20,000 ಮತಗಳಿವೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನ ಜಿ.ಟಿ.ದೇವೇಗೌಡರ ಪ್ರಭಾವ ಹೆಚ್ಚಿದೆ.

ಹಳೆ ಒಡನಾಡಿಗಳ ಮಧ್ಯೆ ಜಿದ್ದಾಜಿದ್ದಿ
ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಇಲ್ಲಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಇದು ಜೆಡಿಎಸ್ನ ಭದ್ರಕೋಟೆ. ಶಾಸಕ ಜಿ.ಟಿ. ದೇವೇಗೌಡ 2 ದಶಕಗಳ ಕಾಲ ಸಿದ್ದರಾಮಯ್ಯ ಅವರ ಒಡನಾಡಿಯಾಗಿಯೇ ಇದ್ದವರು. 2006ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದು ಕಾಂಗ್ರೆಸ್ ಗೆ ಸೇರಿದ್ದರೂ ಜಿ.ಟಿ.ದೇವೇಗೌಡರು ಮಾತ್ರ ಜೆಡಿಎಸ್ನಲ್ಲೇ ಉಳಿದರು. ಅಲ್ಲದೆ ಇಲ್ಲಿವರೆಗೆ ಅಲ್ಲಿಂದ ನಿಂತು ಗೆದ್ದಿದ್ದಾರೆ ಕೂಡಾ. ಸಿದ್ದರಾಮಯ್ಯ ಈ ಕ್ಷೇತ್ರಕ್ಕೆ ಎಷ್ಟೇ ಅನುದಾನ ಕೊಟ್ಟರೂ, ಎಷ್ಟೇ ಪ್ರಚಾರ ನಡೆಸಿದರೂ ಪ್ರಬಲ ಪೈಪೋಟಿ ಕೊಡುವ ಶಕ್ತಿ ಜೆಡಿಎಸ್ ನ ಜಿ.ಟಿ.ದೇವೇಗೌಡರಿಗೆ ಇದೆ.

ಆತಂಕ ಶುರುವಾಗಿದೆಯೇ?
ಯತೀಂದ್ರರನ್ನು ವರುಣಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಿ, ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ ಸಿದ್ದರಾಮಯ್ಯ. ಆದರೆ ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅಂದುಕೊಂಡಷ್ಟು ಸ್ಪರ್ಧೆ ಸುಲಭವಲ್ಲ. 2006ರ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಹೋರಾಡಿ ಕೇವಲ 256 ಮತಗಳಿಂದ ಗೆದ್ದಿದ್ದರು. ಈಗ ಜೆಡಿಎಸ್ ನಿಂದ ಜಿ.ಟಿ.ದೇವೇಗೌಡ ಅಖಾಡಕ್ಕೆ ಧುಮುಕಲು ರೆಡಿಯಾಗಿದ್ದಾರೆ. ಅವರು ಪ್ರಬಲ ಪ್ರತಿಸ್ಪರ್ಧಿ ಆಗಿರುವುದರಿಂದ ಸಿದ್ದರಾಮಯ್ಯ ಅವರಿಗೆ ಆತಂಕ ಶುರುವಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಜಿ.ಟಿ.ದೇವೇಗೌಡರ ಮೇಲೆ ಭೂ ಚಕ್ರ
ಇದೇ ಕಾರಣಕ್ಕೆ ಏನೋ ಜಿ.ಟಿ.ದೇವೇಗೌಡರ ಮೇಲೆ ಎಸಿಬಿ ಮೂಲಕ ಕೆಎಚ್ ಬಿ ಭೂ ಹಗರಣದ ಅಸ್ತ್ರ ಪ್ರಯೋಗಿಸಿದ್ದಾರೆ ಸಿದ್ದರಾಮಯ್ಯ. ಇದು ದೇವೇಗೌಡರನ್ನು ಕುಗ್ಗಿಸುವ ರಣತಂತ್ರ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಬಿಜೆಪಿಗೆ ಈ ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಶಕ್ತಿ ಇಲ್ಲ. ಬಿಜೆಪಿಗೆ ಇಲ್ಲೂ ಸಮಾನ ಶತ್ರು ಸಿದ್ದರಾಮಯ್ಯ. ಕೊನೇ ಕ್ಷಣದಲ್ಲಿ ಬಿಜೆಪಿ ನಾಮ್ ಕೇ ವಾಸ್ಥೆ ಸ್ಪರ್ಧಿಯನ್ನು ನಿಲ್ಲಿಸಿ, ಹಿಂಬಾಗಿಲಿನ ಮೂಲಕ ಜೆಡಿಎಸ್ ಬೆಂಬಲಿಸಲೂಬಹುದು. "ಏನೇ ಆಗಲಿ ಸಿದ್ದರಾಮಯ್ಯರನ್ನು ಸೋಲಿಸಿಯೇ ಸೋಲಿಸುತ್ತೇವೆ" ಅಂತಿದ್ದಾರೆ ಜಿ.ಟಿ.ದೇವೇಗೌಡ.

ಶ್ರೀನಿವಾಸ ಪ್ರಸಾದ್, ವಿಶ್ವನಾಥ್ ಕೂಡ ಸೋಲಿಸಲು ಶ್ರಮಿಸುತ್ತಾರೆ
ಇನ್ನು ಸಿದ್ದರಾಮಯ್ಯ ಸೋಲಿಸುವುದಕ್ಕೆ ಹಳೆ ದೋಸ್ತಿ ವಿ.ಶ್ರೀನಿವಾಸ್ ಪ್ರಸಾದ್ ವೀರ ಕಚ್ಚೆ ಕಟ್ಟಿ ಶ್ರಮಿಸಲಿದ್ದಾರೆ. ಅದೇ ರೀತಿ ಎಚ್.ವಿಶ್ವನಾಥ್ ಗೂ ದ್ವೇಷ ಇದೆ. ಸ್ಥಳೀಯ ನಾಯಕರೂ ಸಿ.ಎಂ. ವಿರುದ್ಧ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಈ ಎಲ್ಲ ವಿಷಯಗಳು ಸ್ವತಃ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ.

ಹೊಂದಾಣಿಕೆ ಮಾಡಿಕೊಳ್ಳುವ ಲೆಕ್ಕಾಚಾರ
ಈ ಎಲ್ಲ ಕಾರಣದಿಂದ ರಾಜಕೀಯದ ಉಸ್ತಾದ್ ಸಿದ್ದರಾಮಯ್ಯ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಜೆಡಿಎಸ್ ಜೊತೆ ಗಲಾಟೆ ಮಾಡಿಕೊಳ್ಳಬೇಡಿ. ಚೆನ್ನಾಗಿರಿ ಎಂದು ತಮ್ಮ ಬೆಂಬಲಿಗರಿಗೆ ಸೂಚನೆ ಕೊಟ್ಟಿದ್ದಾರೆ ಎಂಬ ಮಾತುಗಳೂ ಇವೆ. ಇನ್ನೊಂದು ವಿಷಯವೆಂದರೆ, ಚಾಮುಂಡೇಶ್ವರಿಯಲ್ಲಿ ಪರಿಸ್ಥಿತಿ ಬಿಗುವಾದರೆ ಹೆಬ್ಬಾಳ ಕ್ಷೇತ್ರಕ್ಕೂ ಸಿದ್ದರಾಮಯ್ಯ ಅವರು ಜಿಗಿಯಬಹುದು ಎಂಬ ಸುದ್ದಿ ಹರಿದಾಡಿದೆ. ಒಂದು ವೇಳೆ, ಚಾಮುಂಡೇಶ್ವರಿಯಲ್ಲಿ ಒಪ್ಪಂದದ ರಾಜಕೀಯ ಶುರುವಾದರೆ ಅದು ಬೇರೆ ಕ್ಷೇತ್ರಗಳಲ್ಲೂ ಮುಂದುವರಿಯಬಹುದು. ಒಟ್ಟಿನಲ್ಲಿ ಚಾಮುಂಡೇಶ್ವರಿಯಲ್ಲಿ ಜೆಡಿಎಸ್-ಕಾಂಗ್ರೆಸ್ಗೆ ನೇರ ಸ್ಪರ್ಧೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !