ತಿ.ನರಸೀಪುರ; ವಿದ್ಯುತ್ ಕಂಬದಿಂದ ಬಿದ್ದು ಮೂವರು ಚೆಸ್ಕಾಂ ನೌಕರರಿಗೆ ಗಂಭೀರ ಗಾಯ
ಮೈಸೂರು, ನವೆಂಬರ್ 04: ದುರಸ್ತಿ ನಡೆಸುತ್ತಿದ್ದ ಸಂದರ್ಭ ಶಾಕ್ ಹೊಡೆದು ವಿದ್ಯುತ್ ಕಂಬದಿಂದ ಬಿದ್ದು ಮೂವರು ನೌಕರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನದ ಸಮಯದಲ್ಲಿ ವಿದ್ಯುತ್ ಲೈನ್ ದುರಸ್ತಿ ಕಾರ್ಯವನ್ನು ಬನ್ನೂರು ವಿಭಾಗೀಯ ಚೆಸ್ಕಾಂನ ತ್ಯಾಗರಾಜು, ಮಹೇಂದ್ರ, ಮಲ್ಲೇಶ್ ಎಂಬುವರು ಕೈಗೊಂಡಿದ್ದರು. ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿದ್ದು, ಈ ಸಂದರ್ಭ ಕಂಬದಿಂದ ಬಿದ್ದು ಮೂವರೂ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಕಂಬದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಬ್ಯಾಟರಿಯಿಂದ ರಿಟರ್ನ್ ಆಗಿ ವಿದ್ಯುತ್ ಶಾಕ್ ಹೊಡೆದಿದೆ. ವಿದ್ಯುತ್ ಆಘಾತದಿಂದಾಗಿ ಮೂರೂ ನೌಕರರು ಒಬ್ಬರಾದ ನಂತರ ಒಬ್ಬರಂತೆ ಕಂಬದಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮವಾಗಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಗ್ರಾಮಸ್ಥರು ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದಾರೆ. ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ನೌಕರರು ಕಂಬದಿಂದ ಬೀಳುತ್ತಿದ್ದ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು.












Click it and Unblock the Notifications