Karnataka Elections: ಮೈಸೂರಿನಲ್ಲಿ ಕೈ, ಕಮಲಕ್ಕೆ ಹಿಂದಿನಂತಲ್ಲ ಈ ಚುನಾವಣೆ: ಕಾರಣ, ವಿಶ್ಲೇಷಣೆ
ರಾಜ್ಯ ರಾಜಕೀಯದಲ್ಲಿ ಪ್ರಮುಖ ಭಾಷ್ಯ ಬರೆಯುವ ಹಳೇ ಮೈಸೂರು ಭಾಗದ ಪ್ರದೇಶದಲ್ಲಿ ಈ ಬಾರಿಯ ಚುನಾವಣೆ ಕಳೆದ ಇಲೆಕ್ಷನ್ ನಂತಿಲ್ಲ ಎನ್ನುವುದು ಸದ್ಯದ ಈ ಭಾಗದ ಚಿತ್ರಣ. ಇದಕ್ಕೆ ರಾಜಕೀಯವಾಗಿ ಹಲವಾರು ಕಾರಣಗಳು.
ಮೈಸೂರು ನಗರ ವ್ಯಾಪ್ತಿಯಲ್ಲಿ ಬರುವ ಮೂರು ಕ್ಷೇತ್ರಗಳಲ್ಲಿನ ರಾಜಕೀಯ ಚಿತ್ರಣ ಒಂದು ರೀತಿ (ಚಾಮುಂಡೇಶ್ವರಿ ಹೊರತು ಪಡಿಸಿ). ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟ್. ಮೈಸೂರು ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಫೈಟ್. ಕಳೆದ ಬಾರಿ ನಗರ ವ್ಯಾಪ್ತಿಯ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಎರಡು ಮತ್ತು ಕಾಂಗ್ರೆಸ್, ಜೆಡಿಎಸ್ ತಲಾ ಒಂದು ಸ್ಥಾನದಲ್ಲಿ ಗೆಲುವು ಕಂಡಿತ್ತು.

ಆದರೆ, ಇದೇ ಸನ್ನಿವೇಶ ಹಾಲೀ ಚುನಾವಣೆಯಲ್ಲಿ ಬಿಜೆಪಿಗೆ ಇಲ್ಲ ಎನ್ನುವುದಕ್ಕೆ ಕಾರಣ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪ ಪ್ರಮುಖ ಕಾರಣ. ಇನ್ನೊಂದು, ಹಿಂದುಳಿದ ಮತ್ತು ಲಿಂಗಾಯತ ಸಮುದಾಯದ ಮತಗಳು ವಿಭಜನೆಗೊಂಡು ಕಾಂಗ್ರೆಸ್ಸಿನತ್ತ ವಾಲುವು ಸಾಧ್ಯತೆ ಮೇಲ್ನೋಟಕ್ಕೆ ಕಾಣುತ್ತಿದೆ. ಇನ್ನು, ಚಾಮುಂಡೇಶ್ವರಿಯಲ್ಲಿ ತ್ರಿಕೋನ ಸ್ಪರ್ಧೆ (ಜಿ.ಟಿ.ದೇವೇಗೌಡ, ಕವೀಶ್ ಗೌಡ, ಸಿದ್ದೇಗೌಡ) ಏರ್ಪಡುವ ಸಾಧ್ಯತೆಯಿದೆ.
ಈ ಭಾಗದಲ್ಲಿ ಪಕ್ಷಕ್ಕೆ ಪೂರಕವಾದ ವಾತಾವರಣ ಇಲ್ಲ ಎನ್ನುವ ಆಂತರಿಕ ಸಮೀಕ್ಷೆಯಿಂದ ಎಚ್ಚೆತ್ತಿರುವ ಬಿಜೆಪಿಯು, ದೆಹಲಿಯಿಂದ ಘಟಾನುಗಟಿಗಳನ್ನು ಕರೆಸಿ ಪ್ರಚಾರಕ್ಕೆ ಮುಂದಾಗಿದೆ. ಪ್ರಧಾನಿ ಮೋದಿಯವರ ಸಾರ್ವಜನಿಕ ಸಭೆ ಮತ್ತು ರೋಡ್ ಶೋ ಕೂಡಾ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಒಕ್ಕಲಿಗರ ಪ್ರಾಭಲ್ಯದ ಮಂಡ್ಯದಲ್ಲಿ ಈಗಾಗಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಬಂದು ಹೋಗಿದ್ದಾರೆ.

ಒಕ್ಕಲಿಗರ ಪ್ರಾಭಲ್ಯದ ಕ್ಷೇತ್ರ
ದೆಹಲಿಯ ನಾಯಕರು ಒಕ್ಕಲಿಗರ ಪ್ರಾಭಲ್ಯದ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವುದಕ್ಕಿಂತ ಹೆಚ್ಚಾಗಿ, ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಘೋಷಿಸಿರುವುದು ಪಕ್ಷಕ್ಕೆ ಒಂದಷ್ಟು ಲಾಭ ತಂದು ಕೊಡುವ ಸಾಧ್ಯತೆಯಿಲ್ಲದಿಲ್ಲ. ಮೈಸೂರು ನಗರದ ಮೂರು ಕ್ಷೇತ್ರಗಳನ್ನೂ ಹೊಂದಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ 1.3ಲಕ್ಷಕ್ಕೂ ಹೆಚ್ಚು ಲೀಡ್ ನಿಂದ 2019ರಲ್ಲಿ ಗೆಲುವು ಸಾಧಿಸಿದ್ದರು.
ಚಾಮರಾಜ ಕ್ಷೇತ್ರ
ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಲ್.ನಾಗೇಂದ್ರ, ಕಾಂಗ್ರೆಸ್ಸಿನಿಂದ ಹರೀಶ್ ಗೌಡ ಈ ಬಾರಿ ಕಣದಲ್ಲಿದ್ದಾರೆ. ಇನ್ನು, ಕೃಷ್ಣರಾಜದಲ್ಲಿ ಬಿಜೆಪಿಯಿಂದ ಶ್ರೀವತ್ಸ, ಕಾಂಗ್ರೆಸ್ಸಿನಿಂದ ಎಂ.ಕೆ.ಸೋಮಶೇಖರ್ ಸ್ಪರ್ಧಾ ಕಣದಲ್ಲಿದ್ದಾರೆ. ನರಸಿಂಹರಾಜದಿಂದ ಬಿಜೆಪಿಯಿಂದ ಸಂದೇಶ್ ಸ್ವಾಮಿ, ಕಾಂಗ್ರೆಸ್ಸಿನಿಂದ ತನ್ವೀರ್ ಸೇಠ್, ಜೆಡಿಎಸ್ಸಿನಿಂದ ಅಬ್ಧುಲ್ ಖಾದರ್ ಶಾಹಿದ್ ಸ್ಪರ್ಧಿಸುತ್ತಿದ್ದಾರೆ.

SDPI ಅಭ್ಯರ್ಥಿಯೂ ನರಸಿಂಹರಾಜ ಕ್ಷೇತ್ರದಲ್ಲಿ ಕಣದಲ್ಲಿ
SDPI ಅಭ್ಯರ್ಥಿಯೂ ನರಸಿಂಹರಾಜ ಕ್ಷೇತ್ರದಲ್ಲಿ ಕಣದಲ್ಲಿ ಇರುವುದರಿಂದ ಮತ್ತು ಜೆಡಿಎಸ್ ಅಭ್ಯರ್ಥಿಯೂ ಅಲ್ಪಸಂಖ್ಯಾತ ಸಮುದಾಯದವರು ಆಗಿರುವುದರಿಂದ ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತಾ ಎನ್ನುವುದಿಲ್ಲಿ ಪ್ರಶ್ನೆ. ಮೋದಿಗೆ ಆಪ್ತರಂತಿರುವ ಟಿಕೆಟ್ ವಂಚಿತ ರಾಮದಾಸ್ ಅವರು ಮೈಸೂರಿನ ಪ್ರಧಾನಿ ಭಾಗವಹಿಸಲಿದ್ದಾರಾ ಎನ್ನುವುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ನರಸಿಂಹರಾಜ ಕ್ಷೇತ್ರ
2018ರ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಿಂದ ಸ್ಪರ್ಧಿಸಿದ್ದ SDPIಯ ಅಬ್ದುಲ್ ಮಜೀದ್ 33,284 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಜೆಡಿಎಸ್ ಅಭ್ಯರ್ಥಿ ಅಬ್ದುಲ್ಲಾ 14,709 ಮತಗಳನ್ನು ಪಡೆದಿದ್ದರು. ಆದಾಗ್ಯೂ, ತನ್ವೀರ್ ಸೇಠ್ ತಮ್ಮ ಪ್ರತಿಸ್ಪರ್ಧಿ ಸಂದೇಶ್ ಸ್ವಾಮಿ ವಿರುದ್ದ 18,127 ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಮಿಸ್ಸಿಂಗ್ ಎಂಎಲ್ಎ ಎನ್ನುವ ಹೆಸರೂ ಹಾಲೀ ಶಾಸಕರಿಗೆ ಇರುವುದು ಕಾಂಗ್ರೆಸ್ಸಿಗೆ ಇರುವ ಇನ್ನೊಂದು ವೀಕ್ನೆಸ್.
ಜಾತಿ ಲೆಕ್ಕಾಚಾರ, ಅಭಿವೃದ್ದಿ, ಆಡಳಿತ ವಿರೋಧಿ ಅಲೆ
ಜಾತಿ ಲೆಕ್ಕಾಚಾರ, ಅಭಿವೃದ್ದಿ, ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಮುಂತಾದ ವಿಚಾರಗಳು ಈ ಬಾರಿಯ ಚುನಾವಣೆಯಲ್ಲಿ ಪ್ರಮುಖಾಂಶ ಆಗಲಿದೆ. ಮೋದಿಯವರ ವರ್ಚಸ್ಸು ಅಸೆಂಬ್ಲಿ ಚುನಾವಣೆಯಲ್ಲಿ ವರ್ಕೌಟ್ ಆಗುವ ಸಾಧ್ಯತೆ ಕಮ್ಮಿ. ಹಾಗಾಗಿ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಮೈಸೂರು ನಗರದ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಲುವುದು ಪ್ರಯಾಸದ ದಾರಿ..











Click it and Unblock the Notifications