ಸಾಲದ ಹೊರೆ; ಕಪಿಲಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ; ಇಬ್ಬರು ಪಾರು
ಮೈಸೂರು, ಅಕ್ಟೋಬರ್ 19: ನಂಜನಗೂಡಿನಲ್ಲಿ ಕಪಿಲಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಮುಂದಾಗಿದ್ದು, ಅದರಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಪಾರಾಗಿರುವ ಘಟನೆ ಇಂದು ನಡೆದಿದೆ.
ತಾಯಿ ಅಕ್ಕಮ್ಮ (60) ಮಗಳು ರಶ್ಮಿ (35) ಹಾಗೂ ಮೊಮ್ಮಗಳು ಮಿಂಚು (10) ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಈ ಮೂವರಲ್ಲಿ ರಶ್ಮಿ ಎನ್ನುವವರು ಸಾವನ್ನಪ್ಪಿದ್ದು, ಅಜ್ಜಿ, ಮೊಮ್ಮಗಳು ಪಾರಾಗಿದ್ದಾರೆ.
ಇವರು ಮೈಸೂರಿನ ಜೆ.ಎಸ್.ಎಸ್. ಲೇಔಟ್ನ ನಿವಾಸಿಗಳಾಗಿದ್ದಾರೆ. ರಶ್ಮಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಸುಮಾರು 50 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಸಾಲದ ವಿಚಾರವಾಗಿಯೇ ಮನೆಯಲ್ಲಿ ಆಗಾಗ್ಗೆ ಜಗಳವಾಗುತ್ತಿತ್ತು. ಸಾಲ ತೀರಿಸಲು ಸಾಧ್ಯವಾಗದೇ ಹೆದರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಸಾಲದಿಂದ ಬೇಸತ್ತು, ಕುಟುಂಬದ ಈ ಮೂವರೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ನಂಜನಗೂಡಿನ ಪಟ್ಟಣದ ಮಲ್ಲನಮೂಲೆ ಮಠದ ಕಪಿಲಾ ನದಿಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ರಶ್ಮಿ ಅವರು ಸಾವನ್ನಪ್ಪಿದ್ದರು. ಅಜ್ಜಿ, ಮೊಮ್ಮಗಳನ್ನು ಚಿಕಿತ್ಸೆಗೆ ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಶ್ಮಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications