ಮುಂದುವರಿದ ಜಿಲ್ಲಾಧಿಕಾರಿ ಹಾಗೂ ಶಾಸಕರ ಮುಸುಕಿನ ಗುದ್ದಾಟ
ಮೈಸೂರು, ಜನವರಿ 13: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಕೆ.ಆರ್ ನಗರ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ನಡುವಿನ ವಾಕ್ ಸಮರ ಮತ್ತೆ ಮುಂದುವರಿದಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಸಾ.ರಾ ಮಹೇಶ್, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ. ತಾವೊಬ್ಬ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿರುವ ಇವರು ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ತಮ್ಮ ದಿಢೀರ್ ವರ್ಗಾವಣೆಗೆ ನ್ಯಾಯ ಕೇಳಲು KAT ಮೊರೆ ಹೋಗಿದ್ದ ಇದೇ ಅಧಿಕಾರಿ, ಮೈಸೂರಿನಲ್ಲಿ ಉಲ್ಟಾ ಹೊಡೆದ ಕಥೆ ಇಡೀ ನಾಡಿಗೆ ಗೊತ್ತಿದೆ ಎಂದಿದ್ದಾರೆ.

ಇಂಥವರಿಂದ ನಾನು ಪಾಠ ಕಲಿಯಬೇಕಿಲ್ಲ. ತನಗೊಂದು ನ್ಯಾಯ, ಪರರಿಗೊಂದು ನ್ಯಾಯ ಎನ್ನುವ ಇಂತಹ ಅಧಿಕಾರಿ, ಸಾಂವಿಧಾನಿಕ ಸಂಸ್ಥೆಗಳು, ಸಮಿತಿಗಳಿಗೆ ಯಾವ ರೀತಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕೆಂದು ಸರ್ಕಾರ ಹೊರಡಿಸಿರುವ ಸುತ್ತೋಲೆಗಳನ್ನು ಓದಿ ಮೊದಲು ಅರ್ಥಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
"ಮಾತಿನಲ್ಲಿ ಬ್ರಹ್ಮ ನೀತಿಯಲ್ಲಿ ಕ್ರೋಧಿ ಈ ಲೋಕದ ಭುಂಜಕರು

ನಾ ಹೆಚ್ಚು ತಾ ಹೆಚ್ಚು ಎಂದು ನಡೆದಾಡುವರಯ್ಯ
ನಾನು ನೀನೆಂಬ ಉಭಯವಳಿದು
ತಾನು ತಾನಾದುದ ನಾನಾರನೂ ಕಾಣೆನಯ್ಯ ಝೇಂಕಾರ ನಿಜಲಿಂಗಪ್ರಭುವೆ -ಜಕ್ಕಣಯ್ಯ' ಎಂದು ವಚನ ಉಲ್ಲೇಖಿಸುವ ಮೂಲಕ ಕಿಡಿಕಾರಿದ್ದಾರೆ.












Click it and Unblock the Notifications