ಚಾಮುಂಡೇಶ್ವರಿ ದರ್ಶನ ಪಡೆದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ದಂಪತಿ
ಮೈಸೂರು, ಡಿಸೆಂಬರ್ 5: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರು ಭಾನುವಾರ ಚಾಮುಂಡಿಬೆಟ್ಟಕ್ಕೆ ದಂಪತಿ ಸಹಿತ ಭೇಟಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಬೆಳಗ್ಗೆ ಪತ್ನಿ ಡಾ. ವಿಜೇತಾ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ರಾಹುಲ್ ದ್ರಾವಿಡ್ ತಾಯಿ ದರ್ಶನ ಪಡೆದರು. ನಗರದ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ 19 ವರ್ಷದೊಳಗಿನವರ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯು ಉತ್ತರಾಖಂಡದ ವಿರುದ್ಧ ನಡೆಯುತ್ತಿದೆ. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಪುತ್ರ ಸುಮಿತ್ ಕೂಡ ಕರ್ನಾಟಕದ ಪರ ಆಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಗ ಆಟ ಕಣ್ತುಂಬಿಕೊಳ್ಳಲು ರಾಹುಲ್ ದ್ರಾವಿಡ್ ಮೈಸೂರಿಗೆ ಆಗಮಿಸಿದ್ದುಘಿ, ಭಾನುವಾರ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.

ನಟ ರಾಮಚರಣ್‌ರಿಂದ ದರ್ಶನ:
ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಪುತ್ರ ಟಾಲಿವುಡ್ ನಾಯಕ ನಟ ರಾಮ್‌ಚರಣ್ ತೇಜ ಅವರು ಕೂಡ ಭಾನುವಾರ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ರಾಮ್‌ಚರಣ್ ತೇಜ ಅವರು ತಮ್ಮ ಬಹು ನಿರೀಕ್ಷಿತ ಚಿತ್ರ 'ಗೇಮ್ ಚೇಂಜರ್' ಸಿನಿಮಾ ಶೂಟಿಂಗಾಗಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ದರ್ಶನ ಪಡೆದರು.
ಮಹಾನಂದಿಗೆ ಮಹಾಭಿಷೇಕ:
ಲೋಕ ಕಲ್ಯಾಣಕ್ಕಾಗಿ ಭಾನುವಾರ ಮುಂಜಾನೆ ಚಾಮುಂಡಿಬೆಟ್ಟ ಮಹಾನಂದಿಗೆ ಮಹಾಭಿಷೇಕ ನಡೆಯಿತು. ನಗರದ ಚಾಮುಂಡಿಬೆಟ್ಟದ ಮೇಲಿನ ಏಕಶಿಲಾ ಮೂರ್ತಿ ಮಹಾನಂದಿಗೆ ಕಾರ್ತಿಕ ಮಾಸದ ಪ್ರಯುಕ್ತ ಕನಕಾಭಿಷೇಕ, ರುದ್ರಾಭಿಷೇಕದ ಜತೆಗೆ 36 ಬಗೆಯ ದ್ರವ್ಯಗಳಿಂದ ಅಭಿಷೇಕ ನಡೆಸಲಾಯಿತು.

ಅನೇಕ ವರ್ಷಗಳಿಂದ ಪ್ರತಿ ವರ್ಷದ ಕಾರ್ತಿಕ ಮಾಸದಲ್ಲಿ ಟ್ರಸ್ಟ್ ವತಿಯಿಂದ ಮಹಾಭಿಷೇಕ ಆಯೋಜಿಸುತ್ತಿದ್ದು, ಇಂದು 18ನೇ ಬಾರಿಗೆ ನಡೆದಿದ್ದು, ಮಹಾಭಿಷೇಕ ಕಾರ್ಯಕ್ರಮಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು. ನೂರಾರು ಮಂದಿ ಸಾಕ್ಷಿಯಾದರು.
ಪ್ರಮುಖವಾಗಿ ಕ್ಷೀರಾಭಿಷೇಕ, ಗಂಧಾಭಿಷೇಕ, ಕುಂಕುಮಾಭಿಷೇಕ, ಅರಿಶಿನ ಅಭಿಷೇಕ ಸೇರಿದಂತೆ ವಿವಿಧ ಬಗೆಯ ಹಣ್ಣು, ಹಾಲು, ಚಂದನ, ಶ್ರೀಗಂಧ, ಬಿಲ್ವಪತ್ರೆ, ಖರ್ಜೂರ, ಕೊಬ್ಬರಿ ಅಭಿಷೇಕ ನೆರವೇರಿಸಲಾಯಿತು. ಕೊನೆಯಲ್ಲಿ ಜಲಾಭಿಷೇಕದೊಡನೆ ಮಹಾಭಿಷೇಕವನ್ನು ಸಮಾಪ್ತಿಗೊಳಿಸಲಾಯಿತು. ಈ ಎಲ್ಲಾ ಅಭಿಷೇಕಗಳು ಹಾಗೂ ಪೂಜಾ ಕೈಂಕರ್ಯಗಳು, ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ಮಹಾಭಿಷೇಕವನ್ನು ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್‌ನವರು ಆಯೋಜಿಸಿದ್ದರು.
'' ಈ ರೀತಿಯ ಅಭಿಷೇಕ ಮಾಡುವುದರಿಂದ ಏಕಶಿಲೆಯಲ್ಲಿ ನಿರ್ಮಿಸಿರುವ ನಂದಿ ವಿಗ್ರಹದ ಸಂರಕ್ಷಣೆಗೆ ಸಹಕಾರಿಯಾಗುತ್ತದೆ. ಬೆಟ್ಟದ ಬಳಗದಿಂದ ಮಹಾಭಿಷೇಕ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಪೂಜೆ ಆರಂಭಕ್ಕೂ ಮುನ್ನ ಯದುವಂಶದ ಹೆಸರಿನಲ್ಲಿ ಸಂಕಲ್ಪವನ್ನು ಕೂಡ ಮಾಡಲಾಗುತ್ತದೆ,'' ಎಂದು ಬೆಟ್ಟದ ಬಳಗದ ಕಾರ್ಯದರ್ಶಿ ಪ್ರಕಾಶನ್ ತಿಳಿಸಿದ್ದಾರೆ.












Click it and Unblock the Notifications