ಮೈಸೂರಿಗೆ ಆಗಮಿಸಿದ ಸುಧಾ ನಾರಾಯಣ್ ಮೂರ್ತಿ, ಜಿಲ್ಲಾಡಳಿತದಿಂದ ಸ್ವಾಗತ
ಮೈಸೂರು, ಅಕ್ಟೋಬರ್. 09 : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದ್ದು, ದಸರಾ ಉದ್ಘಾಟಕರಾದ ಇನ್ಫೋಸಿಸ್ ಅಧ್ಯಕ್ಷೆ ಸುಧಾ ನಾರಾಯಣ್ ಮೂರ್ತಿ ಅವರು ಮಂಗಳವಾರ ಮೈಸೂರಿಗೆ ಆಗಮಿಸಿದರು.
ಪತಿ ನಾರಾಯಣ್ ಮೂರ್ತಿ ಅವರೊಂದಿಗೆ ಮೈಸೂರಿಗೆ ಬಂದಿಳಿದ ಸುಧಾ ನಾರಾಯಣ್ ಮೂರ್ತಿ ಅವರಿಗೆ ಜಿಲ್ಲಾಡಳಿತದಿಂದ ಹೂ ಗುಚ್ಛ ನೀಡಿ ಸ್ವಾಗತ ಕೋರಲಾಯಿತು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ಸುಧಾಮೂರ್ತಿ ಅವರು, ಮೈಸೂರು ದಸರಾ ಉದ್ಘಾಟನೆ ಮಾಡುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಉದ್ಘಾಟನೆ ಮಾಡಲು ನನ್ನ ಹೆಸರು ಪ್ರಕಟಿಸಿದಾಗ ಬಹಳ ಸಂತೋಷವಾಯಿತು.

ದಸರಾ ಕೇವಲ ಎಲ್ಲಾ ಹಬ್ಬಗಳಂತೆ ಅಲ್ಲ. ಇದು ವಿಶೇಷ ಹಬ್ಬ, ನಾಡ ಹಬ್ಬ. ಇದಕ್ಕೆ ಇತಿಹಾಸದ ನಂಟಿದೆ. ಇದು ಸಂಸ್ಕೃತಿ ಪ್ರತೀಕ. ಎಲ್ಲರೂ ಈ ಹಬ್ಬವನ್ನು ಆಚರಿಸಿ ಗೌರವಿಸುವಂತಾಗಬೇಕು. ಉದ್ಘಾಟನೆಗೆ ಅವಕಾಶ ಕೊಟ್ಟಿದ್ದಕ್ಕೆ ಋಣಿಯಾಗಿದ್ದಾನೆ. ನಮಗೆ ಇರುವ ಇತಿಮಿತಿಯಲ್ಲಿ ನಾವು ಸರಳವಾಗಿ ದಸರಾ ಆಚರಿಸಬೇಕು ಎಂದು ಸಲಹೆ ನೀಡಿದರು.
1950ರಲ್ಲಿ ಜಯ ಚಾಮರಾಜೇಂದ್ರ ಒಡೆಯರ ದರ್ಬಾರ್ ನಾನು ನೋಡಿದ ದಸರಾ. ಆಗ ನಾನು ಎಂಟನೇ ತರಗತಿ ಓದುತ್ತಿದ್ದೆ. ಅಂದಿನ ದಸರಾಕ್ಕೂ ಇಂದಿನ ದಸರಾಕ್ಕೂ ಸಾಕಷ್ಟು ವ್ಯತ್ಯಾಸ ಇದೆ. 60 ವರ್ಷಗಳ ಇತಿಹಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಸುಧಾಮೂರ್ತಿ ಸ್ಮರಿಸಿಕೊಂಡರು. ಅಲ್ಲದೆ ದಸರಾ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications