'ಕೃಷಿ ಸಾಲ ಸಂಪೂರ್ಣ ಮನ್ನಾ': ಕೇಂದ್ರ ಸಚಿವ ವಿ.ಸೋಮಣ್ಣಗೆ ರೈತರ ಹಕ್ಕು ಒತ್ತಾಯ ಪತ್ರ ಸಲ್ಲಿಕೆ
ಮೈಸೂರು, ಸೆಪ್ಟೆಂಬರ್ 14: ಅಕ್ರಮ ಸಕ್ರಮ ಯೋಜನೆ ಮರು ಜಾರಿ ಆಗಬೇಕು. ಕೇಂದ್ರ ಸರ್ಕಾರ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ರೈತರು ಹಕ್ಕು ಒತ್ತಾಯ ಪತ್ರ ಸಲ್ಲಿಕೆ ಮಾಡಿದ್ದಾರೆ.
ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಮೈಸೂರಿಗೆ ಭೇಟಿ ನೀಡಿದ್ದು, ಈ ವೇಳೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ರೈತರ ಹಕ್ಕು ಒತ್ತಾಯ ಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸಚಿವರ ಬಳಿ ಮನವಿ ಮಾಡಿದ್ದಾರೆ.

ರೈತರ ಹಕ್ಕು ಒತ್ತಾಯ ಪತ್ರದಲ್ಲಿನ ಒತ್ತಾಯಗಳೇನು..?
1) ಪ್ರತಿ ಟನ್ ಕಬ್ಬಿಗೆ ನಾಲ್ಕು ಸಾವಿರಕ್ಕೆ ನಿಗದಿಗೆ ಒತ್ತಾಯ. ಕಬ್ಬಿನ ಇಳುವರಿಯನ್ನು ಕೇಂದ್ರ ಸರ್ಕಾರ ಕಾರ್ಖಾನೆಗಳಿಗೆ 8.5% ನಿಗದಿ ಮಾಡಬೇಕು. ಬಳಿಕ ಎಫ್ಆರ್‌ಪಿ ಹಾಗೂ ಎಂಎಸ್‌ಪಿ ಕೈಗೊಳ್ಳಬೇಕು. ಸದ್ಯ 10.5%ಗೆ ದರ ನಿಗದಿ ಮಾಡಿ ಆದೇಶ ನೀಡಿರುವುದು ರೈತರಿಗೆ ಮಾಡಿದ ದ್ರೋಹವಾಗಿ.ದೆ ಆದ್ದರಿಂದ ತಕ್ಷಣ ಈ ಮಾನದಂಡವನ್ನು ಬದಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
2) ಎಮ್‌ಎಸ್‌ಪಿ ಕಾನೂನು ಖಾತ್ರಿ ಎಲ್ಲ ಬೆಳೆಗಳಿಗೆ ಜಾರಿಯಾಗಬೇಕು.
3) ಅಕ್ರಮ ಸಕ್ರಮ ಯೋಜನೆ ಮರು ಜಾರಿ ಆಗಬೇಕು ಹಾಗೂ ಸೋಲಾರ್ ಪಂಪ್ಪೆಟ್ಟುಗಳನ್ನು ರೈತರು ಅಳವಡಿಸಿಕೊಂಡರೆ ಯೋಜನೆ ವೆಚ್ಚದ 90ರಷ್ಟು ಸಹಾಯಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು.
4)ಎಂ.ಎಸ್ ಸ್ವಾಮೀನಾಥನ್ ವರದಿಯನ್ನು ಯಥಾವತ್ ಜಾರಿಮಾಡಬೇಕು.
5) ಕೇಂದ್ರ ಸರ್ಕಾರ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
6) ಮೈಸೂರು ಮತ್ತು ಚಾಮರಾಜನಗರದ ನಡುವೆ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಕ್ರಮವಹಿಸಬೇಕು. ಚಾಮರಾಜನಗರದಿಂದ ಮೇಟು ಪಾಳ್ಯ ರೈಲು ಮಾರ್ಗದ ಜಾರಿಗೆ ಚಾಲನೆ ನೀಡಬೇಕು. ಏಕೆಂದರೆ ರಾಜ್ಯದಿಂದ ತಮಿಳುನಾಡಿಗೆ ವ್ಯಾಪಾರ ವಹಿವಾಟು ವೃದ್ಧಿಯಾಗಲು ಸಹಕಾರಿ ಆಗುತ್ತದೆ.

7) ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು.
8) ಎಲ್ಲಾ ಬೆಳೆಗಳಿಗೂ ಖರೀದಿ ಕೇಂದ್ರಗಳನ್ನು ವರ್ಷಪೂರ್ತಿ ತೆರೆಯಬೇಕು. ಯಾವುದೇ ನಿರ್ಬಂಧ ಗಳಿಲ್ಲದೇ ಷರತ್ತುಗಳಿಲ್ಲದೆ ಖರೀದಿ ಮಾಡಿ ನಾಗರಿಕ ಸರಬರಾಜು ಮೂಲಕ ವಿತರಿಸಲು ಕ್ರಮ ಕೈಗೊಳ್ಳಬೇಕು. ಓಡಿಸಾ ಮತ್ತು ಛತ್ತೀಸ್‌ಘಡ್ ರಾಜ್ಯಗಳಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ 3, 100 ರೂಪಾಯಿಗಳನ್ನು ನಿಗದಿ ಮಾಡಲು ಆದೇಶ ನೀಡಿವೆ. ಆದರೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ 2,300 ಅನ್ನು ನಿಗದಿ ಮಾಡಿದೆ. ಇದು ರೈತರಿಗೆ ತೊಂದರೆಯಾಗಿದೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು.
9) ಬೆಳೆ ವಿಮೆಯನ್ನು ರೈತನ ಹೊಲದಲ್ಲಿನ ವೈಯಕ್ತಿಕ ವಿಮೆ ರೀತಿ ಪರಿಗಣಿಸಿ ನಷ್ಟ ಪರಿಹಾರವನ್ನು ಪರಿಗಣಿಸಬೇಕು.
10) ರೈತರ ಕೃಷಿ ಉತ್ಪನ್ನಗಳಿಗೆ GSTಯನ್ನು ತೆರೆ ಗೊಳಿಸಬೇಕು.
11) ಕೊಬ್ಬರಿ ಬೆಂಬಲ ಬೆಲೆಗೆ ಹೆಚ್ಚಳಕ್ಕೆ ಒತ್ತಾಯ. ವಿದೇಶಿ ರೇಷ್ಮೆ ಆಮದು ನಿಲ್ಲಿಸಲು ಒತ್ತಾಯ.
12) ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ನಷ್ಟ ಪರಿಹಾರ ವೈಜ್ಞಾನಿಕವಾಗಿ ನೀಡಬೇಕು.
13) ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರನ್ನು ಪರಿಗಣಿಸಬಾರದು. ಕೃಷಿ ಸಾಲಕ್ಕೆ ಸಾಲ ನೀಡಲು ಇರುವ ಹಳೆಯ ಮಾನದಂಡಗಳನ್ನು ಬದಲಿಸಿ ಕೃಷಿ ಭೂಮಿಯ ಮಾರುಕಟ್ಟೆಯ ಮೌಲ್ಯ ಅನುಸಾರ ಪ್ರತಿ ಎಕರೆಗೆ 50 ಪರ್ಸೆಂಟ್ ಸಾಲ ನೀಡಬೇಕು ಮತ್ತು ಹೆಚ್ಚಿನ ಸಮಯ ಅಲೆದಾಡಿಸದೆ ತಕ್ಷಣ ಸಾಲ ಮಂಜೂರಾತಿಗೆ ಅವಕಾಶ ನೀಡಬೇಕು.
14) ಕೇಂದ್ರ ಸರ್ಕಾರ ಪ್ರವಾಹ ಮತ್ತು ಬರ ಪರಿಹಾರವನ್ನು ನೀಡುವಾಗ ಎನ್‌ಡಿಆರ್ಎಫ್ ಮತ್ತು ಎಸ್‌ಡಿಆರ್ಎಫ್ ಮಾನದಂಡವನ್ನು ವೈಜ್ಞಾನಿಕವಾಗಿ ಪ್ರತಿ ವರ್ಷ ಬದಲಾಯಿಸಿ ಬೆಳೆ ನಷ್ಟ ಮತ್ತು ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಸಚಿವರಿಗೆ ಹಕ್ಕು ಪತ್ರದಲ್ಲಿ ಒತ್ತಾಯಿಸಿದ್ದಾರೆ.












Click it and Unblock the Notifications