ಮೈಸೂರು ದಸರಾ ಸಂಭ್ರಮಕ್ಕೆ ಬರೆ ಎಳೆದ ಬರ..!
ಮೈಸೂರು, ಸೆಪ್ಟೆಂಬರ್ 22: ದಸರಾ ಹತ್ತಿರವಾಗುತ್ತಿದೆ ಎಂದರೆ ಮೈಸೂರಿಗೆ ಪ್ರವಾಸಿಗರ ಆಗಮನದ ಕಾಲ ಎಂದರ್ಥ. ಈ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ದಸರಾ ರಜೆಯಿರುವುದರಿಂದ ರಜಾದ ಮಜಾ ಸವಿಯಲು ಹೊರಜಿಲ್ಲೆ, ರಾಜ್ಯ ಮತ್ತು ವಿದೇಶಗಳಿಂದ ಜನರು ಬರುವುದು ವಿಶೇಷ. ಆದರೆ ಈ ಬಾರಿ ಅದು ಸಾಧ‍್ಯನಾ? ಎಂಬ ಪ್ರಶ್ನೆ ಗಿರಕಿ ಹೊಡೆಯಲಾರಂಭಿಸಿದೆ.
ಈಗಾಗಲೇ ರಾಜ್ಯದಲ್ಲಿ ಬರ ಕಾಣಿಸಿರುವ ಕಾರಣದಿಂದ ದಸರಾವನ್ನು ಸರಳವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಜತೆಗೆ ಕಾವೇರಿಯ ಕಿಚ್ಚು ಹಳೆ ಮೈಸೂರು ಭಾಗದಲ್ಲಿ ಎದ್ದಿರುವುದರಿಂದ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಅದು ನಿಲ್ಲುವ ಲಕ್ಷಣಗಳಿಲ್ಲ. ಜನರಿಗೆ ಕುಡಿಯಲು ನೀರು ಇಲ್ಲದ ಸಂಕಷ್ಟದಲ್ಲಿ ದಸರಾವನ್ನು ಸಂಭ್ರಮಿಸುವುದಾದರೂ ಹೇಗೆ? ಎಂಬುದು ಜನವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಯಾಗಿದೆ.

ರಾಜ್ಯದಲ್ಲಿ ಪ್ರತಿಭಟನೆ, ಹೋರಾಟ, ರಸ್ತೆ ತಡೆಯಂತಹ ಧರಣಿಗಳು ನಡೆಯುತ್ತಿದ್ದರೆ, ಮೈಸೂರಿನತ್ತ ಪ್ರವಾಸಿಗರು ಬರುವುದು ಕಷ್ಟವಾಗುತ್ತದೆ. ಸಂಕಷ್ಟಗಳಲ್ಲಿ ಜನರು ಬೇಯುತ್ತಿರುವಾಗ ದಸರಾದ ಮೂಲಕ ಸಂಭ್ರಮಿಸಲು ಯಾರಿಗೆ ತಾನೆ ಮನಸ್ಸು ಬರುತ್ತದೆ. ಇನ್ನು ದಸರಾವನ್ನು ಸರಳವಾಗಿ ಆಚರಿಸುವ ಬಗ್ಗೆ ಸರ್ಕಾರ ಹೇಳಿಕೆ ನೀಡಿದೆ. ಜತೆಗೆ ಪ್ರತಿಭಟನೆ ನಡುವೆ ದಸರಾ ಆಚರಣೆ ಮಾಡಬೇಕಾದ ಸನ್ನಿವೇಶ ಸರ್ಕಾರಕ್ಕೆ ಎದುರಾಗಿದ್ದು, ನೂತನ ಸರ್ಕಾರದ ಮೊದಲ ದಸರಾ ಸಂಭ್ರಮಕ್ಕೆ ವಿಘ್ನ ಬಂದಿದೆ.
ದಸರಾ ಸಂಭ್ರಮ ಕಸಿದ ವರುಣ
ಎರಡು ವರ್ಷಗಳ ಕಾಲ ಕೊರೊನಾ ಕಾರಣದಿಂದಾಗಿ ದಸರಾದ ಮೇಲೆ ಕರಿನೆರಳು ಬಿದ್ದಿತ್ತು. ಆದರೆ ಕಳೆದ ವರ್ಷ ಎಲ್ಲವನ್ನೂ ಮೆಟ್ಟಿ ನಿಂತು ಅದ್ಧೂರಿ ದಸರಾ ಆಚರಣೆ ನಡೆದಿತ್ತು. ಜನರು ಕೂಡ ತಾವು ಅನುಭವಿಸಿದ ಸಂಕಷ್ಟಗಳನ್ನು ಮರೆತು ದಸರಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಐದು ವರ್ಷಗಳ ಕಾಲ ನಿರೀಕ್ಷೆಗೂ ಮೀರಿ ಮಳೆ ಸುರಿಸಿದ ವರುಣ ಈ ವರ್ಷ ಮುನಿಸಿಕೊಳ್ಳುತ್ತಾನೆಂದು ಯಾರೂ ನಂಬಿರಲಿಲ್ಲ. ಆದರೆ ಬರದ ಸಂಕಷ್ಟ ತಂದೊಡ್ಡಿರುವ ವರುಣನಿಂದಲೇ ಇದಕ್ಕೆ ಪರಿಹಾರ ಸಿಗಬೇಕಾಗಿದೆ.
ಹಾಗೆನೋಡಿದರೆ ಹಿಂದಿನ ದಿನಗಳಲ್ಲಿ ದಸರಾಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆಯೇ ಇಡೀ ನಗರ ದಸರಾ ಸ್ವಾಗತಿಸಲು ಸಜ್ಜಾಗಿದೆಯೇನೋ ಎಂಬ ಭಾವ ಮೂಡುತ್ತಿತ್ತು. ದುಸ್ಥಿತಿಯಲ್ಲಿರುವ ರಸ್ತೆಗಳನ್ನು ದುರಸ್ತಿಗೊಳಿಸುವುದು, ಮನೆ ಮಹಲಿಗೆ ಬಣ್ಣ ಬಳಿಯುವುದು, ಬೀದಿ, ವೃತ್ತಗಳು, ಕಟ್ಟಡಗಳನ್ನು ಶುಚಿಗೊಳಿಸಿ ಇಡೀ ನಗರ ಹಬ್ಬಕ್ಕೆ ಸಜ್ಜಾಗುವಂತೆ ಮಾಡಲಾಗುತ್ತಿತ್ತು. ಇದರಿಂದ ದೂರದಿಂದ ಆಗಮಿಸುವ ಪ್ರವಾಸಿಗರಿಗೆ ನಮ್ಮನ್ನು ಸ್ವಾಗತಿಸಲು ಇಡೀ ಮೈಸೂರು ಸಿದ್ಧಗೊಂಡಿದೆಯೇನೋ ಎಂಬ ಭಾವ ಮೂಡುತ್ತಿತ್ತು.

ಮೈಸೂರಲ್ಲಿ ಕಾಣಿಸದ ದಸರಾ ಕಳೆ
ದಸರಾದ ಸಮಯವೆಂದರೆ ಅದು ಅತಿಥಿಗಳು ಬರುವ ಕಾಲ ಎಂದರೂ ತಪ್ಪಾಗಲಾರದು. ಹಳ್ಳಿಗಳಲ್ಲಿರುವವರು ಮೈಸೂರು ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿ ಒಂದಷ್ಟು ದಿನಗಳಿದ್ದು, ಸಂಜೆಯಾಗುತ್ತಿದ್ದಂತೆಯೇ ನಗರದಲ್ಲಿ ಅಡ್ಡಾಡಿ ಒಂದಷ್ಟು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ, ಹೋಟೆಲ್ ಗಳಿಗೆ ಹೋಗಿ ಎಲ್ಲರೂ ಜತೆಯಲ್ಲೇ ತಮಗೆ ಇಷ್ಟವಾದುದನ್ನು ತಿಂದುಂಡು ಖುಷಿಯಾಗಿ ಮನೆಯತ್ತ ಹೆಜ್ಜೆಯಿಡುತ್ತಿದ್ದರು.
ಈ ಸಮಯದಲ್ಲಿ ಹೊರಗಿನಿಂದ ಪ್ರವಾಸಿಗರು ದಂಡು ದಂಡಾಗಿ ಮೈಸೂರಿಗೆ ಬರುವುದರಿಂದ ವ್ಯಾಪಾರಿಗಳಿಗೆ, ಆಟೋ, ಟ್ಯಾಕ್ಸಿ, ಬಸ್, ಹೀಗೆ ಎಲ್ಲರಿಗೂ ಆದಾಯ ತರುವ ಕಾಲವಾಗುತ್ತಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಾದಷ್ಟು ಪ್ರವಾಸೋದ್ಯಮಕ್ಕೆ ಹೊಂದಿಕೊಂಡಂತೆ ಇರುವ ಎಲ್ಲ ವಹಿವಾಟುಗಳು ಚೇತರಿಕೆ ಕಂಡು ಅದರಿಂದ ಕೇವಲ ವ್ಯಾಪಾರಿಗಳಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ಆದಾಯ ಬರುತ್ತಿತ್ತು.
ಬರದ ಆತಂಕದಲ್ಲಿ ಜನ ಸಾಮಾನ್ಯರು
ಸಾಮಾನ್ಯವಾಗಿ ಮೈಸೂರಿಗೆ ವರ್ಷದ ಎಲ್ಲ ದಿನಗಳಲ್ಲಿಯೂ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಆದರೆ ದಸರಾ ಸಮಯದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ವಿಶೇ಼ಷ ಅನುಭವವಾಗುತ್ತದೆ. ಮೈಸೂರು ನಗರ ಸೇರಿದಂತೆ ಹೊರ ವಲಯಗಳಲ್ಲಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ. ನಗರದ ಹೋಟೆಲ್, ಶಾಪಿಂಗ್ ಮಹಲ್ ಸೇರಿದಂತೆ ಎಲ್ಲ ಕಡೆಗಳಲ್ಲೂ ಜನರೋ ಜನ. ಜತೆಗೆ ನಗರದಲ್ಲಿ ಅಡ್ಡಾಡುವಾಗ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವಾಗ ಏನೋ ಒಂಥರಾ ಖುಷಿಯ ಭಾವ ಮೂಡುತ್ತಿತ್ತು.
ಈ ಬಾರಿ ಎಲ್ಲ ಸಂಭ್ರಮದ ಮೇಲೆಯೂ ಬರದ ಛಾಯೆ ಆವರಿಸಿದೆ. ನಗರದಲ್ಲಿ ಯಾವುದೇ ರೀತಿಯ ದಸರಾದ ಕಳೆ ಕಂಡು ಬರುತ್ತಿಲ್ಲ. ಇಷ್ಟರಲ್ಲೇ ಕಾವೇರಿ ಸಂಕಷ್ಟದಲ್ಲಿ ಸಿಲುಕಿರುವ ಸರ್ಕಾರಕ್ಕೆ ಎಲ್ಲವನ್ನು ನಿಭಾಯಿಸಿ ಎಂದಿನಂತೆ ದಸರಾ ಆಚರಣೆ ಮಾಡುವುದು ಸುಲಭವೇನಲ್ಲ.ಈ ನಡುವೆ ಕಾವೇರಿ ಕಾವು. ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಜತೆಗೆ ಬರವೂ ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಿರುವಾಗ ದಸರಾವನ್ನು ಸಂಭ್ರಮಿಸುವುದಾದರೂ ಹೇಗೆ?












Click it and Unblock the Notifications