SM ಕೃಷ್ಣ ನಿಧನದ ವಿಚಾರದಲ್ಲಿ ಸೋನಿಯಾ ಗಾಂಧಿ ನಡೆಗೆ ಹೆಚ್.ವಿಶ್ವನಾಥ್ ಗರಂ
ಮೈಸೂರು, ಡಿಸೆಂಬರ್ 12: ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕೇಂದ್ರದ ವಿದೇಶಾಂಗ ಸಚಿರಾಗಿದ್ದ, ಎಸ್.ಎಂ.ಕೃಷ್ಣ ಅವರ ನಿಧನದ ವಿಚಾರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಡೆಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದರು. ಆದರೆ ಸೋನಿಯಾ ಗಾಂಧಿ ಈ ವಿಷಯದಲ್ಲಿ ತುಟಿ ಬಿಚ್ಚಲಿಲ್ಲ. ಒಬ್ಬ ವ್ಯಕ್ತಿ ಕಾಲವಾದಾಗ ಮನುಷ್ಯತ್ವ ಇರಬೇಕು, ದ್ವೇಷ ಇರಬಾರದು, ಸತ್ತಾಗಲೂ ದ್ವೇಷ ಮಾಡುವುದು ಸರಿಯಲ್ಲ ಎಂದರು.

ಸಾರ್ವಜನಿಕ ಜೀವನದಲ್ಲಿರುವವರು ಪಕ್ಷಾತೀತವಾಗಿ ನಡೆದುಕೊಳ್ಳಬೇಕಿದೆ. ಸೋನಿಯಾ ಗಾಂಧಿ ಈ ಹಿಂದೆ ಕಾಂಗ್ರೆಸ್ ಹಿರಿಯ ನಾಯಕ ದೇವರಾಜ ಅರಸು ಸತ್ತಾಗಲೂ ಸಹ ಸಂತಾಪ ಸೂಚಿಸಲಿಲ್ಲ. ಪಿ.ವಿ.ನರಸಿಂಹರಾವ್, ವಿ.ಪಿ. ಸಿಂಗ್ ಹಾಗೂ ಚಂದ್ರಶೇಖರ್ ಸತ್ತಾಗಲೂ ಸಂತಾಪ ಸೂಚಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್.ಎಂ.ಕೃಷ್ಣ ಅವರು ಹಲವು ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್‌ಗೆ ಹೆಸರು ತಂದುಕೊಟ್ಟಿದ್ದಾರೆ. ಆದರೆ, ಅವರ ಸಾವಿನ ವಿಷಯದಲ್ಲೂ ರಾಜಕಾರಣ, ಪಕ್ಷ ದ್ವೇಷ ಮುಖ್ಯವಾಗಿದ್ದು ಸರಿಯಲ್ಲ. ಎಸ್.ಎಂ.ಕೃಷ್ಣ ಅವರು ತಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೊಡುಗೆಗಳನ್ನು ನೀಡಿದ್ದರೂ, ಇನ್ಫೋಸಿಸ್ ಸಂಸ್ಥೆ ಇಂದು ಸಾವಿರಾರು ಕೋಟಿ ರೂ.ಗಳ ವ್ಯವಹಾರ ನಡೆಯುತ್ತಿದ್ದು, ಇದಕ್ಕೆಲ್ಲ ಎಸ್.ಎಂ.ಕೃಷ್ಣ ಅವರೇ ಕಾರಣರಾಗಿದ್ದಾರೆ. ಆದರೆ ಮೈಸೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಿಂದಲೂ ಒಂದು ಸಂತಾಪ ಸೂಚಿಸಲಿಲ್ಲ. ಇತ್ತೀಚೆಗೆ ಬ್ಯುಸಿನೆಸ್, ಇಂಡಸ್ಟ್ರಿ ಮನುಷ್ಯತ್ವ ಕಳೆದುಕೊಂಡಿವೆ ಎಂದು ಬೇಸರಿಸಿದರು.

ಅನರ್ಹ ಜಾತಿಗಳನ್ನು ಪಟ್ಟಿಯಿಂದ ತೆಗೆದು ಹಾಕಿ
2ಎ ಮೀಸಲಾತಿ ಭರ್ತಿಯಾಗಿ ಬಹಳ ಕಾಲವೇ ಆಗಿದ್ದು, ಈಗ ಅದು ಮುಗಿದು ಹೋಗಿರುವ ವಿಚಾರವಾಗಿದೆ. ಅಲ್ಲದೇ ಈಗಾಗಲೇ 45ಕ್ಕೂ ಹೆಚ್ಚು ಜಾತಿಗಳು ಈ ಪಟ್ಟಿಗೆ ಸೇರಿದ್ದು, ಮೊದಲು ಇವುಗಳ ಪರಿಶೀಲನೆ ನಡೆಸಿ ಅನರ್ಹ ಜಾತಿಗಳನ್ನು ಪಟ್ಟಿಯಿಂದ ತೆಗೆದು ಹಾಕಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.
2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟದ ಕುರಿತು ಮಾತನಾಡಿದ ಅವರು, 2ಎ ಮೀಸಲಾತಿ ಭರ್ತಿಯಾಗಿ ಬಹಳ ಕಾಲವಾಗಿದ್ದು, ಅದು ಮುಗಿದು ಹೋದ ವಿಚಾರ. ಈಗಾಗಲೇ ಸಿಕ್ಕ ಸಿಕ್ಕ ಜಾತಿಗಳೆಲ್ಲಾ 2ಎ ಮೀಸಲಾತಿಗೆ ಸೇರಿಕೊಂಡಿದ್ದು, 45ಕ್ಕೂ ಹೆಚ್ಚು ಜಾತಿಗಳು ಈಗಾಗಲೇ 2ಎ ಮೀಸಲಾತಿ ಪಟ್ಟಿಗೆ ಸೇರಿವೆ. ಹೀಗಾಗಿ ಮೊದಲು ಇವುಗಳ ಬಗ್ಗೆ ರಿವ್ಯೂ ಮಾಡಿ, ಅನರ್ಹ ಜಾತಿಗಳನ್ನು ಆ ಪಟ್ಟಿಯಿಂದ ತೆಗೆದು ಹಾಕಬೇಕಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತರು ಮಾತ್ರವೇ ಬಸವಣ್ಣನವರ ಅನುಯಾಯಿಗಳಲ್ಲ. ಬದಲಾಗಿ ಪ್ರತಿಯೊಂದು ಸಮುದಾಯದ ಜನರು ಸಹ ಬಸವಣ್ಣನವರ ಅನುಯಾಯಿಗಳಾಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಸೇರಿಕೊಂಡು ಬಸವಣ್ಣನವರನ್ನು ದಿನನಿತ್ಯವೂ ಕೊಲ್ಲುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾನು ಬಸವಮೃತ್ಯುಂಜಯ ಸ್ವಾಮೀಜಿ ಅವರಲ್ಲಿ ಮನವಿ ಮಾಡುತ್ತಿದ್ದು, ಎಲ್ಲರಿಗೂ ತೊಂದರೆ ಕೊಡುವುದು ದಯವಿಟ್ಟು ಬೇಡ.
ಸ್ವಾಮೀಜಿಗಳು ಎಲ್ಲರ ನಡುವೆ, ಅಪನಂಬಿಕೆ ಹುಟ್ಟು ಹಾಕುವುದು ಬೇಡ. ಕುರುಬ ಸಮುದಾಯವನ್ನು 2ಎ ತೆಗೆದು ಬುಡಕಟ್ಟಿಗೆ ಸೇರಿಸಿಬಿಡಿ ಎಂದ ಅವರು, ಯಾವುದಾದರೂ ತತ್ವ ಸಿದ್ದಾಂತವಿಲ್ಲದ ಪಕ್ಷ ಎಂದಿದ್ದರೆ ಬಿಜೆಪಿ ಮಾತ್ರವೇ ಆಗಿದ್ದು, ಹೀಗಾಗಿಯೇ ಈ ಮೀಸಲಾತಿ ಹೋರಾಟಕ್ಕೆ ಬಿಜೆಪಿ ಬೆಂಬಲ ಕೊಡುತ್ತಿದೆ ಎಂದರು.












Click it and Unblock the Notifications