ಸರ್ಕಾರದ ಮುಖ್ಯಕಾರ್ಯದರ್ಶಿ ವಿರುದ್ಧ ಲಂಚದ ಆರೋಪ: ಸ್ನೇಹಮಹಿ ಕೃಷ್ಣ ಸಿಸಿಬಿ ವಶಕ್ಕೆ
Snehamayi Krishna: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಲಂಚದ ಆರೋಪ ಮಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆ ಇದೀಗ ಇಂದು (ಫೆಬ್ರವರಿ 20) ಸಿಸಿಬಿ ಪೊಲೀಸರು ಸ್ನೇಹಮಹಿ ಕೃಷ್ಣ ಅವರನ್ನು ಬಂಧಿಸಿದ್ದಾರೆ.
ಮೂಡಾ ಮಾಜಿ ಆಯುಕ್ತ ಡಿಬಿ ನಟೇಶ್ ಬಡ್ತಿ ಪಡೆಯಲು ಶಾಲಿನಿ ರಜನೀಶ್ ಅವರಿಗೆ ಲಂಚ ಕೊಟ್ಟಿದ್ದಾರೆ ಎಂದು ಸ್ನೇಹಮಯಿಕೃಷ್ಣ ಆರೋಪ ಮಾಡಿದ್ದರು. ಬಳಿಕ ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಟೇಶ್ ದೂರು ನೀಡಿದ್ದರು. ಇದರ ಆಧಾರದ ಮೇಲೆ ಸಿಸಿಬಿಯ ಸೈಬರ್ ಕ್ರೈಮ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಇಂದು ಸಿಸಿಬಿ ಅಧಿಕಾರಿಗಳು ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಿಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?
ದ್ವನಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಪಪ್ರಚಾರ ಮಾಡಿದ್ದ ಆರೋಪ ಮೇಲೆ ಮೊದಲು ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ನಂತರ ಅವರನ್ನು ಬಂಧಿಸಿದ್ದಾರೆ. ಅಲ್ಲದೆ, ನ್ಯಾಯಾಲಯದಲ್ಲಿ ಸರ್ಚ್ ವಾರಂಟ್ ಪಡೆದು, ಸ್ನೇಹಮಯಿ ಕೃಷ್ಣ ಅವರ ಮೈಸೂರು ನಿವಾಸದ ಮೇಲೆ ಬೆಂಗಳೂರು ಸಿಸಿಬಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಇನ್ನು ಸ್ನೇಹಮಯಿ ಕೃಷ್ಣ ಬಂಧನದ ಬಗ್ಗೆ ಸಿಸಿಬಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ. ದೂರದಾರರಾದ ಡಿ.ಬಿ.ನಟೇಶ್ ಕೆಎಎಸ್ ಹಿರಿಯ ಅಧಿಕಾರಿ ಹಾಗೂ ಈ ಹಿಂದೆ ಮುಡಾ ಆಯುಕ್ತರು ನೀಡಿದ ದೂರಿನ ಆಧಾರದ ಮೇಲೆ ಮೈಸೂರು ನಿವಾಸಿ ಶ್ರೀ ಸ್ನೇಹಮಯಿ ಕೃಷ್ಣ ಎಂಬವರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ದೂರದಾರರ ಫೋಟೋ ಹಾಗೂ ನಕಲಿ ದಾಖಲೆಗಳನ್ನು ಹಾಗೂ ಧ್ವನಿ ಕ್ಲಿಪ್ ಅನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿ ದೂರದಾರರನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿರುವ ಕುರಿತು ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಿನಾಂಕ 18.02.2026ರಂದು ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
ತನಿಖೆ ವೇಳೆ ತನಿಖಾಧಿಕಾರಿಗಳು ದೂರದಾರರಿಂದ ಹಾಗೂ ಸಾಮಾಜಿಕ ಜಾಲತಾಣದಿಂದ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಧ್ವನಿ ಕ್ಲಿಪ್ ಕುರಿತು ತನಿಖೆ ನಡೆಸಿದ್ದಾರೆ. ಮಾನ್ಯ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಆರೋಪಿಯ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಶೋಧ ಕಾರ್ಯ ನಡೆಸಲಾಗಿದೆ. ಜೊತೆಗೆ ಪ್ರಕರಣದ ಆರೋಪಿ ಸ್ನೇಹಮಯಿ ಕೃಷ್ಣ ಮೈಸೂರು ಅವರಿಗೆ ನೋಟಿಸ್ ಜಾರಿ ಮಾಡಿ ಆರೋಪಿಯನ್ನು ಠಾಣೆಗೆ ಹಾಜರುಪಡಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications