ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಿಸಲು ಸಾಂಸ್ಕೃತಿಕ ನಗರಿಯಿಂದ 10 ಸಾವಿರಕ್ಕೂ ಹೆಚ್ಚು ಜನರ ಆಗಮನ
ಮೈಸೂರು, ಮೇ, 20: ಶನಿವಾರ (ಮೇ 20) ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮ ವೀಕ್ಷಣೆಗೆ ಮೈಸೂರಿನಿಂದ 10 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ನಗರಪಾಲಿಕೆ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮೈಸೂರಿನಿಂದ ಬರುವ ಜನರಿಗೆ ಬಸ್ ವ್ಯವಸ್ಥೆ ಮಾಡಿದ್ದಾರೆ. ಕೆಲವು ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಬಸ್, ಕಾರು ಹಾಗೂ ರೈಲಿನ ಮೂಲಕ ಬೆಂಗಳೂರಿಗೆ ತಲುಪಿದ್ದಾರೆ. ಮೈಸೂರಿನಿಂದ ಪ್ರಗತಿಪರ ಚಿಂತಕರು, ಸಾಹಿತಿಗಳನ್ನು ಕರೆತರಲು ಕರ್ನಾಟಕದ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ವಾಹನಗಳ ವ್ಯವಸ್ಥೆಯನ್ನು ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ತವರು ಸಿದ್ದರಾಮನಹುಂಡಿಯಲ್ಲೂ ಗ್ರಾಮಸ್ಥರು ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಿಸಲು ಬೆಂಗಳೂರಿಗೆ ಶನಿವಾರ ಬೆಳಗ್ಗೆ ತೆರಳಲು ತೀರ್ಮಾನಿಸಿದ್ದಾರೆ. ಅಲ್ಲದೆ ವರುಣ ಕ್ಷೇತ್ರದ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ನೇತೃತ್ವದಲ್ಲಿ ಕಾರ್ಯಕರ್ತರು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ತೆರಳಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಇನ್ನು ಚಿನ್ನಂಬಳ್ಳಿ ಆರ್.ಮಹದೇವ, ಸುತ್ತೂರು ಸೋಮಣ್ಣ, ರವಿ ನಗರಲೆ, ನಾರಾಯಣ ನಾಯ್ಕ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಕೆ.ಬಿ.ಸ್ವಾಮಿ ಗಿರೀಶ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ತಗಡೂರು ಆರ್.ಮಹದೇವ, ಬೊಕ್ಕಹಳ್ಳಿ ಸೋಮಸುಂದರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿ ಬಿ.ಪಿ, ಮಹದೇವ್ ಹಾರೋಪುರ, ಶಿವಣ್ಣ ಬೆಳಗಲಿ, ಪುರುಷೋತ್ತಮ್, ಜಗದೀಶ್ ಕುಮಾರ್ ಕಿರುಗುಂದ ಶಿವನಾಗ, ಮಲ್ಲಿಪುರ ಪ್ರಕಾಶ್ ಮಹದೇವಸ್ವಾಮಿ, ಕಲ್ಬಳ್ಳಿ ಸುರೇಶ್ ಬಾಬು ಸೇರಿದಂತೆ ಮತ್ತತರರು ಈ ವೇಳೆ ಉಪಸ್ಥಿತರಿದ್ದರು.












Click it and Unblock the Notifications