ಮೈತ್ರಿ ಸರ್ಕಾರದ ಗೆಲುವಲ್ಲ, ಕಾಂಗ್ರೆಸ್ ಗೆಲುವು: ಸಿದ್ದರಾಮಯ್ಯ
ಮೈಸೂರು, ಜೂನ್.13 : ಜಯನಗರ ವಿಧಾನಸಭಾ ಚುನಾವಣೆ 2018ರ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು, ಇದು ಮೈತ್ರಿ ಸರ್ಕಾರದ ಗೆಲುವಲ್ಲ, ಕಾಂಗ್ರೆಸ್ ಪಕ್ಷದ ಗೆಲುವು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಜಯನಗರದಲ್ಲಿ ಗೆಲ್ಲುವ ನಿರೀಕ್ಷೆ ನಮಗೆ ಮೊದಲಿಂದಲೂ ಇತ್ತು. ನಮ್ಮ ಪಕ್ಷಕ್ಕೆ ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಕೃತಜ್ಞತೆ ತಿಳಿಸಿದ್ದಾರೆ.
ನಮ್ಮ ಅಭ್ಯರ್ಥಿ ಸೌಮ್ಯರೆಡ್ಡಿ ತುಂಬಾ ಚಟುವಟಿಕೆಯಿಂದ ಕೂಡಿದ್ದರು. ಹಾಗಾಗಿ ಗೆದ್ದಿದ್ದೇವೆ ಎಂದು ಸೌಮ್ಯರೆಡ್ಡಿ ಅವರಿಗೂ ಸಿದ್ದರಾಮಯ್ಯ ಧನ್ಯವಾದಗಳನ್ನು ತಿಳಿಸಿದರು.

ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಜಯನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಭರ್ಜರಿ ಜಯ ದಾಖಲಿಸಿದ್ದಾರೆ. ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ ಬಿಜೆಪಿಯ ಬಿ.ಎನ್. ಪ್ರಹ್ಲಾದ್ ಇಲ್ಲಿ ಸೋಲೊಪ್ಪಿಕೊಂಡಿದ್ದಾರೆ.
ಇನ್ನು ಅಬ್ಬರದ ಪ್ರಚಾರ ನಡೆಸಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಠೇವಣಿಯೂ ಉಳಿಸಿಕೊಳ್ಳಲಾಗದೆ ಮುಖಭಂಗ ಅನುಭವಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ಇಲ್ಲಿನ ಚುನಾವಣೆ ಜೂನ್ 11ಕ್ಕೆ ಮುಂದೂಡಿತ್ತು. ಸೋಮವಾರ ನಡೆದ ಚುನಾವಣೆಯಲ್ಲಿ ಒಟ್ಟು ಶೇಕಡ 55 ಮತದಾನವಾಗಿತ್ತು. ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು.
ಮೊದಲಿನಿಂದಲೂ ಭರ್ಜರಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ 2,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಕ್ರಮವಾಗಿ ಸೌಮ್ಯ ರೆಡ್ಡಿ 54, 457, ಬಿ.ಎನ್. ಪ್ರಹ್ಲಾದ್ 51, 568, ರವಿಕೃಷ್ಣಾ ರೆಡ್ಡಿ 1,861 ಮತಗಳನ್ನು ಪಡೆದಿದ್ದಾರೆ.












Click it and Unblock the Notifications