ನಾವು ಮೊದಲು ಅಭ್ಯರ್ಥಿ ಹಾಕಿದ್ದು: ಬಿಜೆಪಿ ಗೆಲ್ಲಲು ಜೆಡಿಎಸ್ ಕಾರಣ- ಸಿದ್ದರಾಮಯ್ಯ
ಮೈಸೂರು, ಜೂ. 11: ಜೆಡಿಎಸ್ ಜೊತೆ ಹೋಗಿ ನಾವು ಕಟ್ಟಿದ್ದೇ ಹೊರತು ಅವರಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ಚುನಾವಣೆ ವೇಳೆ ಕಾಂಗ್ರೆಸ್ ಜೆಡಿಎಸ್ ಜೊತೆ ಹೋಗಿ ನಾವು ಕೆಟ್ಟೆವು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ಬಿಜೆಪಿ ಗೆಲ್ಲಲು ಸಿದ್ದರಾಮಯ್ಯ ಕಾರಣ ಎಂಬ ಎಚ್‌ಡಿಕೆ ಹೇಳಿಕೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಗೆಲ್ಲಲು ಜೆಡಿಎಸ್ ಕಾರಣ ಅಲ್ವಾ? ಮೊದಲು ನಾವು ಅಭ್ಯರ್ಥಿ ಹಾಕಿದೆವು. ಆ ನಂತರ ಅವರು ಅಭ್ಯರ್ಥಿ ಹಾಕಿದ್ದು. ಬಿಜೆಪಿ ಗೆಲ್ಲಬಾರದಿತ್ತು ಅನ್ನೋದಿದ್ರೆ ಅವರ ಅಭ್ಯರ್ಥಿಯನ್ನು ಹಾಕಬಾರದಿತ್ತು. ದೇವೇಗೌಡರು ರಾಜ್ಯಸಭಾ ಚುನಾವಣೆಗೆ ನಿಂತಾಗ ನಾವು ಅಭ್ಯರ್ಥಿಗಳನ್ನು ಹಾಕಿದ್ವಾ? ಇಲ್ಲ ತಾನೇ. ಅದೇ ರೀತಿ ಅವರು ಮಾಡಬೇಕಿತ್ತು.

ಅವರು ಮುಖ್ಯಮಂತ್ರಿ ಆಗೋಕೆ ನಾವು ಸಹಕಾರ ನೀಡಿರಲಿಲ್ವಾ? ನಾವು ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ವಿ. ಬಿಜೆಪಿ ಗೆಲ್ಲಬಾರದು ಅನ್ನೊದಾಗಿದ್ರೆ ನಮಗೆ ಸಪೋರ್ಟ್ ಮಾಡಬೇಕಿತ್ತು. ಬಿಜೆಪಿ ಗೆಲ್ಲಕ್ಕೆ ಅವರೇ ಕಾರಣ ಎಂದರು.
ನಾಟಕ ವೀಕ್ಷಿಸಿದ ಸಿದ್ದು
ಇದೇ ವೇಳೆ ಶನಿವಾರ ಮೈಸೂರಿನಲ್ಲಿ ಸಿದ್ದರಾಮಯ್ಯ ಕುರುಕ್ಷೇತ್ರ ನಾಟಕ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, "ವಕೀಲರ ಸಂಘದವರು ಆಹ್ವಾನ ಕೊಟ್ಟಿದ್ದರು. ಹಾಗಾಗಿ ಇಂದು ಸ್ವಲ್ಪ ಹೊತ್ತು ಕೂತು ನಾಟಕ ನೋಡಿದೆ. ಬಹಳ ಖುಷಿಯಾಯಿತು. ಹಿಂದೆ ಲಾಯರ್ ಆಗಿದ್ದಾಗ ಎಲ್ಲಾ ಕಡೆ ಹೋಗಿ ನಾಟಕ ನೋಡುತ್ತಿದ್ದೆ. ನಾನು ಲಾ ಕಾಲೇಜಿನಲ್ಲಿದ್ದಾಗ ಸಾಮಾಜಿಕ ನಾಟಕ ಮಾಡಿದ್ದೆ. ಯಮಧರ್ಮರಾಯನ ಸನ್ನಿಧಿ ಎಂಬ ನಾಟಕದಲ್ಲಿ ವೈದ್ಯನ ಪಾತ್ರ ಮಾಡಿದ್ದೆ. ಅದಕ್ಕೆ ನಾನು ಡಾಕ್ಟರ್ ಆಗಲಿಲ್ಲ.

ಪೌರಾಣಿಕ ನಾಟಕಗಳಿಂದಲೇ ಡಾ.ರಾಜಕುಮಾರ್, ಎನ್.ಟಿಆರ್ ಅವರಂತವರು ದೊಡ್ಡ ದೊಡ್ಡ ಕಲಾವಿದರಾದರು. ಇತ್ತೀಚೆಗೆ ಪೌರಾಣಿಕ ನಾಟಕಗಳ ಬಗ್ಗೆ ಆಸಕ್ತಿ ಕಮ್ಮಿಯಾಗುತ್ತಿದೆ. ಆಸಕ್ತಿ ಬರುವ ಹಾಗೆ ಮಾಡಬೇಕು. ಈಗ ವಕೀಲರ ಸಂಘದವರು ಅಭ್ಯಾಸ ಮಾಡಿ ನಾಟಕ ಮಾಡಿದ್ದಾರೆ. ಅದೇ ರೀತಿ ಎಲ್ಲರೂ ನಾಟಕ ಮಾಡುವ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು," ಎಂದು ಹೇಳಿದರು.











Click it and Unblock the Notifications