Mysore Fire Accident : ಪಟಾಕಿ ಗೋಡೌನ್‌ನಲ್ಲಿ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ಪಟಾಕಿ ಬೆಂಕಿಗಾಹುತಿ
ಮೈಸೂರು, ಏಪ್ರಿಲ್. 19: ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ಮೌಲ್ಯದ ಪಟಾಕಿ ಬೆಂಕಿಗಾಹುತಿ ಆಗಿರುವ ಘಟನೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಜನರು ರಕ್ಷಣೆಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಪಟಾಕಿ ಸಿಡಿತಕ್ಕೆ ಉಂಟಾದ ಸರಣಿ ಸ್ಫೋಟಗಳು ಗೋಡೌನ್ ತುಂಬ ಬೆಂಕಿ ಹಬ್ಬುವಂತೆ ಮಾಡಿತ್ತು. ಇದರಿಂದ ಆ ಪ್ರದೇಶದಲ್ಲಿ ಸ್ವಲ್ಪ ಸಮಯದವರೆಗೆ ಉದ್ವಿಗ್ನತೆ ಮತ್ತು ಭೀತಿಯನ್ನು ಸೃಷ್ಟಿಯಾಗಿತ್ತು. ದೊಡ್ಡ ಸದ್ದಿನೊಂದಿಗೆ ಆಕಾಶದೆತ್ತರಕ್ಕೆ ಹಬ್ಬಿದ್ದ ಬೆಂಕಿಯ ಕೆನ್ನಾಲಿಗೆಯಿಂದ ದಟ್ಟ ಹೊಗೆ ಆವರಿಸಿತ್ತು. ಮಳೆಗೆಯ ಸಮೀಪವಿದ್ದ ಜನರು ತಮ್ಮ ರಕ್ಷನೆಗಾಗಿ ಸುರಕ್ಷಿತ ಸ್ಥಳಗಳಿಗೆ ತಲುಪಿದ್ದಾರೆ.

ಮೈಸೂರು ಹೊರವಲಯದಲ್ಲಿರುವ ಈ ಪಟಾಕಿಗಳನ್ನು ಸಂಗ್ರಹಿಸುವ ಗೋದಾಮಿನಲ್ಲಿ ಬೆಂಕಿ ಆವರಿಸಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆ ಬಗ್ಗೆ ಮಾಹಿತಿ ಪಡೆದ ಮೈಸೂರು, ಹೆಬ್ಬಾಳ ಹಾಗೂ ಸುತ್ತಮುತ್ತಲಿನ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ, ಎರಡು ಗಂಟೆಗೂ ಹೆಚ್ಚು ಕಾಲ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಸಫಲರಾಗಿದ್ದಾರೆ.
ಆರಂಭದಲ್ಲಿ ಮೂರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ತಲುಪಿದ್ದವು. ಆದರೆ ಸ್ಫೋಟದ ಪ್ರಮಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಉಂಟಾಗುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಹೆಚ್ಚುವರಿ ಅಗ್ನಿಶಾಮಕ ದಳಗಳನ್ನು ನಿಯೋಜಿಸಿದರು. ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ಶಾರ್ಟ್ ಸರ್ಕ್ಯೂಟ್ ಅಥವಾ ಹೆಚ್ಚುತ್ತಿರುವ ಪಾದರಸದ ಮಟ್ಟವು ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಪಟಾಕಿ ಭಸ್ಮವಾಗಿದೆ.
ವಿಜಯನಗರ ಮತ್ತು ಹೆಬ್ಬಾಳ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಂಡಿದ್ದಾರೆ. ಇನ್ನು, ಬೊಮ್ಮನಹಳ್ಳಿ ಕೆರೆಯ ಎದುರಿನ ಗೋಡೌನ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ಜಲಮೂಲದ ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳಿಗೆ ಹಾನಿಯಾಗಿದೆ ಎಂದು ಮೈಸೂರು ಕೈಗಾರಿಕಾ ಸಂಘ ತಿಳಿಸಿದೆ.
ಪಟಾಕಿಗಳನ್ನು ಸಂಗ್ರಹಿಸಲು ಅಥವಾ ಕೈಗಾರಿಕಾ ಪ್ರದೇಶದಲ್ಲಿ ಮಾರಾಟ ಮಾಡಲು ಪರವಾನಗಿ ನೀಡಬಾರದು ಎಂದು ಜಿಲ್ಲಾಡಳಿತ, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಇತರ ಅಧಿಕಾರಿಗಳು ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ತಮ್ಮ ಮನವಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಮೈಸೂರು ಕೈಗಾರಿಕಾ ಸಂಘ ಆರೋಪಿಸಿದೆ.
''ಸ್ಥಳೀಯ ಕೈಗಾರಿಕೆಗಳಿಗೂ ಅಪಾಯ ತಂದೊಡ್ಡಿರುವ ಕಾರಣ ಪರವಾನಗಿ ರದ್ದುಪಡಿಸುವಂತೆ ಕಳೆದ 15 ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದು ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಆರೋಪಿಸಿದ್ದಾರೆ.












Click it and Unblock the Notifications