ಆದಿಶಂಕರರು ಆಯ್ತು ಈಗ ನೇತಾಜಿ ಪ್ರತಿಮೆ ನಿರ್ಮಾಣದಲ್ಲಿ ಮೈಸೂರಿನ ಶಿಲ್ಪಿ
ಬೆಂಗಳೂರು, ಜೂನ್ 1: ಕೇದಾರನಾಥದಲ್ಲಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಕೆತ್ತಿದ್ದ ಮೈಸೂರಿನ 37 ವರ್ಷದ ಶಿಲ್ಪಿ ಅರುಣ್ ಯೋಗಿರಾಜ್ ಕೌಶಲ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರುಹೋಗಿದ್ದಾರೆ. ಇದೀಗ ಇಂಡಿಯಾ ಗೇಟ್ ಬಳಿ ಸ್ಥಾಪಿಸಬೇಕೆಂದಿರುವ 30 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಕಡೆಯುವ ಕಾರ್ಯದಲ್ಲಿ ಯೋಗಿರಾಜ್‌ರನ್ನು ಒಳಗೊಳ್ಳಲಾಗಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ತಂಡವೊಂದು ನೇತಾಜಿ ಪ್ರತಿಮೆಯ ವಿನ್ಯಾಸ ಮಾಡಿದೆ. ಅರುಣ್ ಯೋಗಿರಾಜ್ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬೋಸ್‌ರ 2 ಅಡಿ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದರು. ಆಗ ಪ್ರಧಾನಿ ಈ ಭೇಟಿಯನ್ನು ಪ್ರಸ್ತಾಪಿಸಿ ಯೋಗಿರಾಜ್‌ಗೆ ಧನ್ಯವಾದ ಹೇಳಿದ್ದರು. ಮೈಸೂರಿನ ಈ ತಜ್ಞ ಶಿಲ್ಪಿಯ ಕೆತ್ತನೆ ಕಲೆಗೆ ಮಾರುಹೋದ ಮೋದಿ ಟ್ವಿಟ್ಟರ್‌ನಲ್ಲಿ ಯೋಗಿರಾಜ್‌ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.
ಇದೀಗ ನೇತಾಜಿಯವರ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಎನ್‌ಜಿಎಂಎ ಮಹಾನಿರ್ದೇಶಕ ಅದ್ವೈತ ಗದಾನಾಯಕ್ ನೇತೃತ್ವದ ತಂಡದ ಸಹಯೋಗದಲ್ಲಿ ಯೋಗಿರಾಜ್ ಕೆಲಸ ಮಾಡಲಿದ್ಧಾರೆ. ಯೋಗಿರಾಜ್ ಅವರು ಶಿಲ್ಪದಲ್ಲಿ ಮುಖಭಾವ ವ್ಯಕ್ತಪಡಿಸುವ ಕಲೆ ಸಿದ್ದಿಸಿಕೊಂಡಿರುವುದರಿಂದ ನೇತಾಜಿ ಪ್ರತಿಮೆಯ ಮುಖಭಾಗದ ಕೆತ್ತನೆ ಕಾರ್ಯದ ಜವಾಬ್ದಾರಿ ಪಡೆದಿದ್ದಾರೆ.

ಸ್ವಾತಂತ್ರ್ಯ ಸೇನಾನಿ ನೇತಾಜಿಯ ಬೃಹತ್ ಪ್ರತಿಮೆಯ ನಿರ್ಮಾಣಕ್ಕಾಗಿ ತೆಲಂಗಾಣದ ದೈತ್ಯ ಕಪ್ಪು ಗ್ರಾನೈಟ್ ಶಿಲೆಯೊಂದನ್ನು ತೆಗೆದಿರಿಸಲಾಗಿದ್ದು, ದೆಹಲಿಗೆ ಶೀಘ್ರದಲ್ಲೇ ಸಾಗಿಸಲಾಗುತ್ತಿದೆ. ಆ ಬಳಿಕ ಕೆತ್ತನೆ ಕೆಲಸ ಆರಂಭಿಸುವ ನಿರೀಕ್ಷೆ ಇದೆ. ಅರುಣ್ ಯೋಗಿರಾಜ್ ಇಂದು ಬುಧವಾರ ದೆಹಲಿಗೆ ತೆರಳಿದ್ದಾರೆ. ಅರುಣ್ ಯೋಗಿರಾಜ್ ಸೇರಿದಂತೆ ಇಡೀ ಎನ್‌ಜಿಎಂಎ ತಂಡಕ್ಕೆ ಆಗಸ್ಟ್ 15ರೊಳಗೆ ಪ್ರತಿಮೆ ಕೆತ್ತನೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಅರುಣ್ ಯೋಗಿರಾಜ್ ಸೇರಿದಂತೆ 20ಕ್ಕೂ ಹೆಚ್ಚು ಶಿಲ್ಪಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ.
ಬೋಸ್ ಪ್ರತಿಮೆಗಾಗಿ ಕಪ್ಪು ಗ್ರಾನೈಟ್ ಬಂಡೆಗಳನ್ನು ದೇಶದೆಲ್ಲೆಡೆ ಹುಡುಕಲಾಗಿತ್ತು. ಅಂತಿಮವಾಗಿ ಒಡಿಶಾ ಮತ್ತು ತೆಲಂಗಾಣದಲ್ಲಿ ಸೂಕ್ತವಾದ ಶಿಲೆಗಳು ಸಿಕ್ಕಿವೆ. ಕೊನೆಗೆ ತೆಲಂಗಾಣದ ಗ್ರಾನೈಟ್ ಅನ್ನು ಆಯ್ದುಕೊಳ್ಳಲಾಗಿದೆ. ಇದು ಬಹಳ ಗಟ್ಟಿಯಾದ ಗ್ರಾನೈಟ್ ಆಗಿದ್ದು ನೇತಾಜಿ ಅವರ ಗಟ್ಟಿ ವ್ಯಕ್ತಿತ್ವಕ್ಕೆ ಹೊಂದುತ್ತದೆ ಎಂಬ ಭಾವನೆ ಇದೆ. ಹಾಗೆಯೇ, ಹಲವು ದೇವರುಗಳು ಕಪ್ಪು ಬಣ್ಣದ ರೂಪಿಗಳೇ ಆದ್ದರಿಂದ ನೇತಾಜಿ ಪ್ರತಿಮೆಗೂ ಅದೇ ಬಣ್ಣದ ಶಿಲೆಯನ್ನು ಆರಿಸಲಾಗಿದೆ.
ಶಿಲ್ಪಕಲೆಯಲ್ಲಿ ಸಿದ್ದಿಸಿದ ಮನೆತನ:
ಅರುಣ್ ಯೋಗಿರಾಜ್ ಅವರ ಮನೆತನ ಶಿಲ್ಪಕೆತ್ತನೆಯಲ್ಲಿ ಹೆಸರುವಾಸಿಯಾಗಿದೆ. ಮೈಸೂರು ಅರಮನೆಯಲ್ಲಿ ಪ್ರಮುಖ ಶಿಲ್ಪಿಗಳಾಗಿ ಕೆಲಸ ಮಾಡುತ್ತಿದ್ದವರು. ಅರುಣ್ ಅವರ ತಂದೆ ಯೋಗಿರಾಜ್ ಶಿಲ್ಪಿ ಮಹಾನ್ ಶಿಲ್ಪಿ ಎಂದು ಹೆಸರುವಾಸಿಯಾಗಿದ್ದವರು. 37 ವರ್ಷದ ಅರುಣ್ ಯೋಗಿರಾಜ್ ಎಂಬಿಎ ವ್ಯಾಸಂಗ ಮಾಡಿದ್ದರೂ ತಮ್ಮ ಮನೆತನದ ಅತ್ಯಂತ ವಿರಳ ಕಲಾಸಿದ್ದಿಗೆ ತಮ್ಮನ್ನು ತೊಡಗಿಸಿಕೊಂಡಿದ್ಧಾರೆ. 2008ರಿಂದ ಪೂರ್ಣಾವಧಿ ಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕೇದಾರನಾಥದಲ್ಲಿ ಸ್ಥಾಪಿಸಲಾಗಿರುವ ಆದಿ ಶಂಕರಾಚಾರ್ಯರ ಪ್ರತಿಮೆಯ ಹಿಂದಿನ ಕೈ ಯೋಗಿರಾಜ್ ಅವರದ್ದಾಗಿದೆ. ಈ ಪ್ರತಿಮೆ ಕೆತ್ತನೆಯ ಜವಾಬ್ದಾರಿ ಸಿಗುವ ಮುನ್ನ ಅರುಣ್ ಯೋಗಿರಾಜ್ ಅವರು ಶಂಕರಾಚಾರ್ಯರ ಎರಡು ಅಡಿಯ ಪುಟ್ಟ ಮೂರ್ತಿಯನ್ನು ಕೆತ್ತಿ ನೀಡಿದ್ದರು. ಅದಾದ ಬಳಿಕ ಅವರಿಗೆ ದೊಡ್ಡ ವಿಗ್ರಹ ಕಡೆಯುವ ಅವಕಾಶ ಸಿಕ್ಕಿತು.
ಅರುಣ್ ಯೋಗಿರಾಜ್ ಇನ್ನೂ ಅನೇಕ ಪ್ರಮುಖ ಪ್ರತಿಮೆಗಳನ್ನು ರೂಪಿಸಿದ್ದಾರೆ. ಮೈಸೂರಿನಲ್ಲಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ 14.5 ಅಡಿ ಎತ್ತರದ ಬಿಳಿ ಮಾರ್ಬಲ್ ಶಿಲೆಯ ಪ್ರತಿಮೆ, ರಾಮಕೃಷ್ಣ ಪರಮಹಂಸರ ನೈಜಗಾತ್ರದ (Real Life Size) ಪ್ರತಿಮೆ ಹೀಗೆ ಹಲವು ಕಲಾಕೃತಿಗಳ ಹಿಂದಿನ ಕೈ ಅರುಣ್ ಯೋಗಿರಾಜ್ ಅವರದ್ದಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications