ಸಾಂಸ್ಕೃತಿಕ ನಗರಿಯ ಬಾನಂಗಳದಲ್ಲಿ ಹಾರಾಡಲಿವೆ ಬಣ್ಣಬಣ್ಣದ ಗಾಳಿಪಟ
ಮೈಸೂರು, ಸೆಪ್ಟೆಂಬರ್ 28: ದಸರೆಗೆ ಪೂರ್ವಭಾವಿಯಾಗಿ ನಾಳೆ ರಾತ್ರಿ ಬಣ್ಣಬಣ್ಣದ ತರಹೇವಾರಿ ಗಾಳಿಪಟಗಳು ಸಾಂಸ್ಕೃತಿಕ ನಗರಿಯ ಬಾನಂಗಳದಲ್ಲಿ ಹಾರಾಡಲಿವೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಂ ಶಂಕರ್, ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೈಸೂರಿನಲ್ಲಿ ಮೊದಲ ಬಾರಿಗೆ ಇಂಥ ಪ್ರಯೋಗ ಲಲಿತಮಹಲ್ ಅರಮನೆಯ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯಲಿದೆ.
ನಾಳೆ ಸೆ. 29 ಹಾಗೂ 30ರಂದು ಪತಂಗೋತ್ಸವ ಆಯೋಜಿಸಲಾಗಿದ್ದು, ಎಲ್‌ಇಡಿ ಬೆಳಕು ಹಾಗೂ ಆಕಾಶ ದೀಪಗಳಿಂದ ಕೂಡಿದ ಗಾಳಿಪಟಗಳ ಹಾರಾಟ ಪ್ರದರ್ಶನವಿರಲಿದೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಗಾಳಿಪಟ ಹಾರಾಟಗಾರರು ಉತ್ಸವದಲ್ಲಿ ಭಾಗವಹಿಸಿ ವಿಶಿಷ್ಟ ವಿನ್ಯಾಸದ ಗಾಳಿಪಟ ಪ್ರದರ್ಶಶನದ ಮೂಲಕ ಉತ್ಸವದಲ್ಲಿ ಕೌಶಲ ತೋರಲಿದ್ದಾರೆ ಎಂದರು.

ಅಷ್ಟೇ ಅಲ್ಲ ಅವರು ಬಗೆಬಗೆಯ ಗಾಳಿಪಟಗಳನ್ನು ಹಾರಿ ಬಿಟ್ಟು ಗಾಳಿಪಟ ಪ್ರಿಯರ ಉತ್ಸವಕ್ಕೆ ಮೆರುಗು ತುಂಬಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಚಾಲನೆ ನೀಡಲಿದ್ದಾರೆ.
ಎರಡು ದಿನಗಳ ಉತ್ಸವದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ಪಿ.ಜನಾರ್ಧನ್ ಮಾತನಾಡಿ ಉತ್ಸವದಲ್ಲಿ ಪಾಲ್ಗೊಳ್ಳುವವರು ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು.
30ರಂದು ಪತಂಗೋತ್ಸವದ ಜೊತೆ ಗಾಳಿಪಟ ತಯಾರಿಕೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಗಾಳಿಪಟ ಹಾರಿಸುವ ಬಗ್ಗೆಯೂ ಪರಿಣತರು ತರಬೇತಿ ನೀಡಲಿದ್ದಾರೆ. 2 ಇಂಚಿನಿಂದ ಹಿಡಿದು 30 ಅಡಿ ಎತ್ತರದವರೆಗಿನ ಗಾಳಿಪಟಗಳು ಉತ್ಸವದಲ್ಲಿ ಮೋಡಿ ಮಾಡಲಿವೆ.

ಪರಿಣಿತ ಗಾಳಿಪಟ ಕಲಾವಿದರನ್ನು ಉತ್ಸವಕ್ಕೆ ಆಹ್ವಾನಿಸಲಾಗುತ್ತಿದೆ. ಸೂರತ್, ಅಹಮದಾಬಾದ್, ಹೈದರಾಬಾದ್, ಮುಂಬೈ, ಮಂಗಳೂರಿನಿಂದ ಗಾಳಿಪಟ ಹಾರಾಟಗಾರರು ಬರಲಿದ್ದಾರೆ. ಮಂಗಳೂರು ತಂಡವು ಫ್ರಾನ್ಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದಿತ್ತು ಎಂದು ಮಾಹಿತಿ ನೀಡಿದರು.
ಈ ಬಾರಿ ದಸರಾ ಮಹೋತ್ಸವಕ್ಕೆ ಸ್ವಾಗತ ಗೀತೆ ರಚಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ನಟ ಪುನೀತ್ ರಾಜಕುಮಾರ್ ಹಾಡಲಿದ್ದಾರೆ. ಮಣಿಕಾಂತ್ ಕದ್ರಿ ಅವರು ಸಂಗೀತ ಸಂಯೋಜಿಸಲಿದ್ದು, ವಿ.ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಲಿದ್ದಾರೆ.
ದಸರೆಗೆ ಮೆರುಗು ತುಂಬಲು ಸ್ವಾಗತ ಗೀತೆ ಅಳವಡಿಸುವ ಯೋಜನೆ ಇದೆ. ಸದ್ಯದಲ್ಲೇ ಸಿದ್ಧತೆ ಆರಂಭವಾಗಲಿದ್ದು, ಕಲಾವಿದರನ್ನು ಸಂಪರ್ಕಿಸಲಾಗುವುದೆಂದು ಜನಾರ್ಧನ್ ತಿಳಿಸಿದರು.












Click it and Unblock the Notifications