ಮೈಸೂರು:ರೋಹಿಣಿ ಸಿಂಧೂರಿ ವಿರುದ್ಧ 1ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸಾ. ರಾ. ಮಹೇಶ್
ಮೈಸೂರು, ಸೆಪ್ಟಂಬರ್ 11: ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡಿದ ಹಿನ್ನೆಲೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಾ. ರಾ. ಮಹೇಶ್ ಹೇಳಿದ್ದಾರೆ.
ಈ ಸಂಬಂಧ ಶಾಸಕ ಸಾ. ರಾ. ಮಹೇಶ್ ಮತ್ತು ಅವರ ಪರ ವಕೀಲರಾದ ಅರುಣ್ ಕುಮಾರ್ ಮೈಸೂರಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ರೋಹಿಣಿ ಸಿಂಧೂರಿ ಅವರು ಮೈಸೂರಿನ ಜಿಲ್ಲಾಧಿಕಾರಿ ಆಗಿದ್ದಾಗ ನಾನು ಹಲವು ಅಕ್ರಮಗಳನ್ನು ಬಯಲು ಮಾಡಿದ್ದೆ, ಈ ಸಂಬಂಧ ರೋಹಿಣಿ ಅವರು ನನ್ನ ವಿರುದ್ಧ ಭೂ ಹಗರಣದಂತಹ ಸುಳ್ಳು ಆರೋಪ ಮಾಡಿದ್ದರು ಎಂದ ಶಾಸಕ ಸಾ. ರಾ. ಮಹೇಶ್ ಹೇಳಿದ್ದಾರೆ.
ಹೀಗೆ ಸುಳ್ಳು ಆರೋಪ ಮಾಡಿದ್ದರಿಂದಾಗಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ಅವರು ತಿಳಿಸಿದರು. ಮೈಸೂರಲ್ಲಿ ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದವರು ಐಷಾರಾಮಿ ಜೀವನ ನಡೆಸಿದ್ದಾರೆ. ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಲ್ಲದೇ, ಕೋವಿಡ್ ಸಮಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇದನ್ನು ಮುಚ್ಚಿ ಹಾಕುವ ಸಲುವಾಗಿ ರೋಹಿಣಿ ಸಿಂಧೂರಿ ಅವರು ಕೊರೊನಾ ತಪಾಸಣೆ ಮತ್ತು ಕೋವಿಡ್ ಸಾವಿನ ಸಂಖ್ಯೆಯನ್ನು ಮುಚ್ಚಿ ಹಾಕಿದ್ದರು. ಈ ಬಗ್ಗೆ ಸರ್ಕಾರದ ಮಟ್ಟದ ವರದಿ ಆಧರಿಸಿ ವರ್ಗಾವಣೆ ಮಾಡಲಾಗಿತ್ತು. ಆದರೆ ನಾನು ವರ್ಗಾವಣೆ ಬೇಡ ಅಮಾನತು ಮಾಡಿ ಎಂದು ಕೋರಿದ್ದೆ ಎಂದರು.

ಇದಾದ ಮೇಲೆ ವರ್ಗಾವಣೆಗೊಂಡ ಅವರು ಭೂ ಅಕ್ರಮದಿಂದ ನನ್ನ ವರ್ಗಾವಣೆ ಆಗಿದೆ ಎಂದು ಬಿಂಬಿಸಲು ಅವರು ಹೊರಟಿದ್ದರು. ಈ ವೇಳೆಯೆ ನಾನು ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದೆ ಅದರಂತೆ ಇದೀಗ ಪ್ರಕರಣ ದಾಖಲಿಸಿದ್ದೇವೆ ಎಂದು ಸಾ. ರಾ. ಮಹೇಶ್ ಹೇಳಿದರು.
ಅಧಿಕಾರಿಯ ಮುಖವಾಡ ಕಳಚುತ್ತೇನೆ; ಜನರು ಇಂಥ ಅಧಿಕಾರಿಗಳ ಮಾತು ಬೇಗ ನಂಬುತ್ತಾರೆ. ಆದರೆ ರಾಜಕಾರಣಿಗಳ ಮಾತನ್ನು ಅನುಮಾನಿಸುತ್ತಾರೆ. ನಾನು ರಾಜಕೀಯ ಬೇಕಾದರೂ ಬಿಡುತ್ತೇನೆ. ಆದರೆ ಈ ಅಧಿಕಾರಿ (ರೋಹಿಣಿ ಸಿಂಧೂರಿ) ಮುಖವಾಡ ಕಳಚದೇ ಬಿಡುವುದಿಲ್ಲ ಎಂದು ಸಾ.ರಾ.ಮಹೇಶ್ ಗುಡುಗಿದರು.
ಈ ವೇಳೆ ಮಾತನಾಡಿದ ವಕೀಲ ಅರುಣ್ ಕುಮಾರ್, ಸಾ. ರಾ. ಮಹೇಶ್ ಅವರು ಭೂ ಕಬಳಿಕೆ ಮಾಡಿದ್ದಾರೆ ಎಂದು ರೋಹಿಣಿ ಸಿಂಧರಿ ಹೇಳಿಕೆಯ ಆಡಿಯೋ ವೈರಲ್ ಆಗಿತ್ತು. ಅದು ತಮ್ಮದೇ ಧ್ವನಿ ಎಂದು ಅವರು ಒಪ್ಪಿಕೊಂಡಿದ್ದಾರೆ. ಇದು ಖಾಸಗಿ ಸಂಭಾಷಣೆ ಎಂದಿದ್ದಾರೆ. ಸಾ. ರಾ. ಮಹೇಶ್ ಭೂ ಕಬಳಿಕೆ ಮಾಡಿದ್ದಾರೆ ಎಂದು ಬಿಂಬಿಸಿದ್ದರು. ಈ ಸಂಬಂಧ ರೋಹಿಣಿ ಅವರ ವಿರುದ್ಧ ಒಂದು ಕೋಟಿ ರೂ.ನ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದು ಅವರು ತಿಳಿಸಿದರು.












Click it and Unblock the Notifications