Vande Bharat; ವಂದೇ ಭಾರತ್ ರೈಲು ಮೈಸೂರು ನಗರಕ್ಕೆ ಸಿಹಿಸುದ್ದಿ
ಮೈಸೂರು, ನವೆಂಬರ್ 19: ಕರ್ನಾಟಕದಲ್ಲಿ ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಪರ್ಕ ಇರುವ ನಗರದಲ್ಲಿ ಮೈಸೂರು ಸಹ ಒಂದು. ವಂದೇ ಭಾರತ್ ರೈಲಿನ ವಿಚಾರದಲ್ಲಿ ರಾಜ್ಯದ ಸಾಂಸ್ಕೃತಿಕ ನಗರಕ್ಕೆ ಮತ್ತೊಂದು ಸಿಹಿಸುದ್ದಿ ಸಿಗಲಿದೆ.
2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಈ ರೈಲು ಬೆಂಗಳೂರು ಮೂಲಕ ಸಂಚಾರ ನಡೆಸುತ್ತದೆ.

ಈಗ ಭಾರತೀಯ ರೈಲ್ವೆ ಮೈಸೂರು ಜಂಕ್ಷನ್ ನಿಲ್ದಾಣದಲ್ಲಿ ವಂದೇ ಭಾರತ್ ರೈಲಿನ ನಿರ್ವಹಣೆ ಮಾಡುವುದಾಗಿ ಘೋಷಣೆ ಮಾಡಿದೆ. ನೈಋತ್ಯ ರೈಲ್ವೆಯ ವಿಭಾಗೀಯ ಕಛೇರಿಯೂ ಮೈಸೂರಿನಲ್ಲಿ ಇದ್ದು, ರೈಲಿನ ನಿರ್ವಹಣೆಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವ ಕಾರ್ಯ ಆರಂಭವಾಗಿದೆ.
ಎಲ್ಲಿ ನಡೆಯಲಿದೆ ರೈಲು ನಿರ್ವಹಣೆ?; ಭಾರತೀಯ ರೈಲ್ವೆಯ ಮಾಹಿತಿ ಪ್ರಕಾರ ಮೈಸೂರು ಜಂಕ್ಷನ್ ರೈಲು ನಿಲ್ದಾಣದ ಪಿಟ್‌ಲೈನ್ ನಂಬರ್ 4ರಲ್ಲಿ ವಂದೇ ಭಾರತ್ ರೈಲಿನ ನಿರ್ವಹಣೆ ನಡೆಯಲಿದೆ. ಇದಕ್ಕಾಗಿ ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಸೌಲಭ್ಯ ಮಾಡಲಾಗುತ್ತದೆ.
ವಂದೇ ಭಾರತ್ ರೈಲು ನಿರ್ವಹಣೆಗೆ ಅಗತ್ಯವಾಗಿ ಬೇಕಾಗಿರುವುದು Overhead Equipment (OHE) ಸೌಲಭ್ಯ. ಇದನ್ನು ಒದಗಿಸಲು ರೈಲ್ವೆ ಟೆಂಡರ್ ಕರೆದಿದೆ. ಸುಮಾರು 37 ಲಕ್ಷ ರೂ.ಗಳಲ್ಲಿ ಈ ಸೌಲಭ್ಯ ಒದಗಿಸಲಾಗುತ್ತದೆ. ಕಾಮಗಾರಿಗೆ 60 ದಿನಗಳ ಗಡುವು ನೀಡಲಾಗಿದೆ.
ಓಹೆಚ್‌ಇ ಸೌಲಭ್ಯವನ್ನು ಮ್ಯಾನ್ಯುಯೆಲ್ ಆಗಿ ನಿರ್ವಹಣೆ ಮಾಡಬೇಕಿದೆ. ವಂದೇ ಭಾರತ್ ರೈಲು ವಿದ್ಯುತ್ ಮೂಲಕ ಓಡಲಿದೆ. ಒಮ್ಮೆ ರೈಲು ಸಂಚಾರ ನಡೆಸಿದ ಬಳಿಕ ಸಾಮಾನ್ಯವಾಗಿ ಅದರ ಎಲೆಕ್ಟ್ರಿಕ್ ವ್ಯವಸ್ಥೆ ಪರಿಶೀಲಿಸಬೇಕಿದೆ. ಅದಕ್ಕೆ ಈ ಸೌಲಭ್ಯ ಅತ್ಯಗತ್ಯವಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲುಗಳ ನಿರ್ವಹಣೆಗಾಗಿಯೇ ಮೂಲ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಮಂಗಳೂರು ನಿಲ್ದಾಣದಲ್ಲಿ ಸುಮಾರು 60 ಲಕ್ಷ ವೆಚ್ಚದಲ್ಲಿ ಹೊಸದಾಗಿ ಪಿಟ್‌ಲೈನ್ ನಿರ್ಮಾಣ ಮಾಡಲಾಗಿದೆ. ಹೊಸ ಪಿಟ್‌ಲೈನ್‌ಗೆ Over Head equipment(OHE) ಲೈನ್ ಅಳವಡಿಕೆ ಮಾಡಲಾಗಿದೆ. ಆದರೆ ಸದ್ಯಕ್ಕೆ ಮಂಗಳೂರಿಗೆ ವಂದೇ ಭಾರತ್ ರೈಲಿನ ಸಂಪರ್ಕವಿಲ್ಲ.
ಭವಿಷ್ಯದಲ್ಲಿ ಮೈಸೂರಿಗೆ ಇನ್ನೂ ಹೆಚ್ಚಿನ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ಆದ್ದರಿಂದ ರೈಲಿನ ನಿರ್ವಹಣೆಗಾಗಿಯೇ ಓಹೆಚ್‌ಇ ಸೌಲಭ್ಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಸಾಮಾನ್ಯ ರೈಲುಗಳ ನಿರ್ವಹಣೆಗೆ ಈ ಸೌಲಭ್ಯದ ಅಗತ್ಯವಿಲ್ಲ.
ಮೈಸೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ನಡಸಬೇಕು ಎಂಬ ಬೇಡಿಕೆ ಇದೆ. ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಪ್ರಕಾರ, 'ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿ ಅದು ಕೂಡ ಈಡೇರಲಿದೆ. ಈ ಸಿಹಿಸುದ್ದಿಗಾಗಿ ಜಿಲ್ಲೆಯ ನಾಗರಿಕರ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಮೈಸೂರು ನಗರಕ್ಕೆ ಹೆಚ್ಚಿನ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಆಗ ರೈಲುಗಳ ನಿರ್ವಹಣೆಗೆ ಅಗತ್ಯವಾದ ಸೌಲಭ್ಯಗಳನ್ನು ಇಲಾಖೆ ಮಾಡಬೇಕಿದೆ. ಆದ್ದರಿಂದ ಈಗಲೇ ಇಲಾಖೆ ಟೆಂಡರ್ ಕರೆದಿದೆ.
ಕರ್ನಾಟಕದಲ್ಲಿ ಮೊದಲು ವಂದೇ ಭಾರತ್ ರೈಲು ಸಂಪರ್ಕ ಪಡೆದ ನಗರ ಮೈಸೂರು. 2022ರ ನವೆಂಬರ್‌ನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು ಸಂಚಾರ ಆರಂಭವಾಯಿತು. ಇದು ದಕ್ಷಿಣದ ಭಾರತದ ಮೊದಲ ವಂದೇ ಭಾರತ್ ರೈಲು ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಈ ವರ್ಷ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮತ್ತು ಯಶವಂತಪುರ-ಕಾಚಿಗುಡ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಗೊಂಡಿದೆ. ಭಾರತೀಯ ರೈಲ್ವೆ ನವೆಂಬರ್ 14ರಂದು ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದೆ.












Click it and Unblock the Notifications