Dhruva narayan: ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಧೀಮಂತ ನಾಯಕ
ಆರ್. ಧ್ರುವನಾರಾಯಣ ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಧೀಮಂತ ನಾಯಕ. 1999 ರಲ್ಲಿ, ಅವರು ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸಂತೇಮಾರನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 2004ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರು. ಅವರು 2008ರಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 11,800 ಮತಗಳ ಅಂತರದಿಂದ ಗೆದ್ದರು.
ಇದಾದ ಬಳಿಕ ಚಾಮರಾಜನಗರ ಕ್ಷೇತ್ರದಿಂದ 4,020 ಮತಗಳ ಅಂತರದಿಂದ 15ನೇ ಲೋಕಸಭೆಗೆ ಆಯ್ಕೆಯಾದರು. 2014ರಲ್ಲಿ ಮತ್ತೊಮ್ಮೆ 1,41,182 ಮತಗಳ ಅಂತರದಿಂದ ಗೆದ್ದು 16ನೇ ಲೋಕಸಭೆಗೆ ಸಂಸದರಾಗಿ ಆಯ್ಕೆಯಾದರು. 2019 ರಲ್ಲಿ, ಧ್ರುವನಾರಾಯಣ ಅವರು 17 ನೇ ಲೋಕಸಭೆ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ವಿರುದ್ಧ 12,716 ಮತಗಳ ಅಂತರದಿಂದ ಪರಾಭವಗೊಂಡರು.
ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ದತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್. ಧ್ರುವ ನಾರಾಯಣ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡಿದೆ.

61 ವರ್ಷ ವಯಸ್ಸಿನ ಆರ್. ಧ್ರುವ ನಾರಾಯಣ ಅವರು ಇಂದು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಶನಿವಾರ ಹಠಾತ್ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಮೈಸೂರಿನ ಡಿಆರ್‌ಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಆರ್ ಧ್ರುವನಾರಾಯಣ್ ನಿಧನ
ಧ್ರುವನಾರಾಯಣ ಅವರಿಗೆ ಆರೋಗ್ಯದ ಸಮಸ್ಯೆ ಇರಲಿಲ್ಲ. ಹೃದಯಸಂಬಂಧಿ ಕಾಯಿಲೆ ಇರಲಿಲ್ಲ. ಇಂದು ಬೆಳಿಗ್ಗೆ ಅವರಿಗೆ ಎದೆ ನೋವು ಶುರುವಾಗಿದೆ. ಹೀಗಾಗಿ ಶನಿವಾರ ಬೆಳಿಗ್ಗೆ 6.30ಕ್ಕೆ ಚಾಲಕನಿಗೆ ಕರೆ ಮಾಡಿದ್ದರು. ಚಾಲಕ 6.40ಕ್ಕೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಅವರಿಗೆ ತೀವ್ರ ರಕ್ತವಾಂತಿ ಆಗಿತ್ತು ಎಂದು ಚಾಲಕ ಹೇಳಿಕೊಂಡಿದ್ದಾರೆ. ಅವರನ್ನು ಮೈಸೂರಿನ ಡಿಆರ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ. ಅವರ ಅಕಾಲಿಕ ಮರಣದಿಂದಾಗಿ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವೈಯಕ್ತಿಕ ಜೀವನ
ಧ್ರುವನಾರಾಯಣ ಅವರು 1961 ಜುಲೈ 31ರಂದು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಜನಿಸಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಧ್ರುವನಾರಾಯಣ ಮೂಲತಃ ವೃತ್ತಿಯಿಂದ ಕೃಷಿಕರು. ಧ್ರುವನಾರಾಯಣ ಅವರ ತಂದೆ ರಂಗಸ್ವಾಮಿ ತಾಯಿ ಸಿದ್ದಮ್ಮ, ಪತ್ನಿ ವೀಣಾ. ಇವರಿಗೆ ಇಬ್ಬರು ಪುತ್ರರು ಇದ್ದಾರೆ. ಇವರ ಒಟ್ಟು ಆಸ್ತಿ 2.89 ಕೋಟಿ ರೂಪಾಯಿ ಇದ್ದು 26.06 ಲಕ್ಷ ರೂಪಾಯಿ ಸಾಲವನ್ನು ಹೊಂದಿದ್ದಾರೆ.

ರಾಜಕೀಯ ಜೀವನ
1983ರಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷ ಸೇರಿದ ಆರ್. ಧ್ರುವನಾರಾಯಣ ಅವರು ಕಾಲಾಂತರದಲ್ಲಿ ಪಕ್ಷದ ಮುಖಂಡನಾಗಿ ಬೆಳೆದರು. 2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಿಂದ ಸತತ ಎರಡು ಬಾರಿ ಶಾಸಕರಾಗಿ ಜಯ ಗಳಿಸಿದ್ದರು.
1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಎ.ಆರ್. ಕೃಷ್ಣಮೂರ್ತಿ ಅವರ ಎದುರು ಸೋತರು. ಆದರೆ ಇದೇ ಕೃಷ್ಣಮೂರ್ತಿ ಅವರನ್ನು 2004ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1 ಮತದಿಂದ ಧ್ರುವನಾರಾಯಣ ಸೋಲಿಸಿದ್ದರು. ಹಾಗೆಯೇ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿಯ ಕೃಷ್ಣಮೂರ್ತಿ ಅವರನ್ನು ಸೋಲಿಸಿ ಸಂಸದರಾದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕಾಂಗ್ರೆಸ್ ಅಭ್ಯಥಿಯಾಗಿ ಸ್ಪರ್ಧಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಸದ್ಯ ಅವರ ಹಠತ್ ನಿಧನದಿಂದಾಗಿ ಶೋಕದ ಸಾಗರದಲ್ಲಿ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮ ಮುಳುಗಿದೆ.












Click it and Unblock the Notifications