ರಾಮಲಲ್ಲಾಗೆ ಶಿಲೆ ದೊರೆತ ಹಾರೋಹಳ್ಳಿಯಲ್ಲಿ ತಲೆ ಎತ್ತಲಿದೆ ಬೃಹತ್ ದೇಗುಲ! ವಿವರ ತಿಳಿಯಿರಿ
ಮೈಸೂರು, ಜನವರಿ 23: ಎಲ್ಲಿಯ ಹಾರೋಹಳ್ಳಿ? ಎಲ್ಲಿಯ ಅಯೋಧ್ಯೆ? ಆದರೆ ಎರಡಕ್ಕೂ ಈಗ ಕೃಷ್ಣಶಿಲೆ ಸಂಬಂಧ ಬೆಸೆದಿದೆ. ಕೋಟ್ಯಂತರ ಭಕ್ತರಿಗೆ ದರ್ಶನ ನೀಡಲಿರುವ ರಾಮಲಲ್ಲಾನ ವಿಗ್ರಹಕ್ಕೆ ಕೃಷ್ಣಶಿಲೆ ನೀಡುವ ಮೂಲಕ ಹಾರೋಹಳ್ಳಿ ಪ್ರಸಿದ್ಧಿಗೆ ಬಂದಿದೆ. ಈ ಮಣ್ಣಿನಲ್ಲಿ ದೈವತ್ವವಿರುವುದನ್ನು ಅರಿತ ಜಮೀನಿನ ಮಾಲೀಕರು ಇಲ್ಲೊಂದು ರಾಮದೇಗುಲ ನಿರ್ಮಾಣ ಮಾಡಲು ಹೊರಟ ಭಕ್ತರಿಗೆ ಮನಪೂರ್ವಕ ಒಪ್ಪಿಗೆ ನೀಡಿದ್ದರಿಂದ ಅತ್ತ ಅಯೋಧ್ಯೆಯಲ್ಲಿ ಮಂದಿರ ಉದ್ಘಾಟನೆ ಆಗುತ್ತಿದ್ದಂತೆಯೇ ಇತ್ತ ದೇಗುಲ ನಿರ್ಮಾಣಕ್ಕೆ ಸಿದ್ಧತೆ ಆರಂಭಗೊಂಡಿದೆ.
ರಾಮ ಕಣ್ಣು ತೆರೆದರೆ ಕಲ್ಲಿನ ಭೂಮಿಯೂ ಪಾವನವಾಗಿ ಬಿಡುತ್ತದೆ ಎಂಬುದಕ್ಕೆ ಇದೊಂದು ಸನ್ನಿವೇಶ ಸಾಕ್ಷಿಯಾಗಿದೆ. ಸದ್ಯ ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮೊದಲಿಗೆ ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಮೂರ್ತಿಯನ್ನು ನಮ್ಮದೇ ಊರಿನ ಶಿಲೆಯಿಂದ ನಿರ್ಮಾಣ ಮಾಡಿದ್ದು ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಸ್ವಗ್ರಾಮ ಸೇರಿದಂತೆ ಸುತ್ತಮುತ್ತಲಿನ ಜನ ಖುಷಿಪಟ್ಟಿದ್ದರು. ಇದೀಗ ದೇಗುಲವೂ ನಿರ್ಮಾಣವಾಗುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಜನರಲ್ಲಿ ಸಡಗರ ಸಂಭ್ರಮ ಇಮ್ಮಡಿಸಿದೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿ ಮೈಸೂರು ತಾಲೂಕಿನ ಹಾರೋಹಳ್ಳಿ ಸಮೀಪದ ಜಮೀನಿನಲ್ಲಿ ಲಭಿಸಿದ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಕೃಷ್ಣಶಿಲೆ ದೊರೆತ ಈ ಸ್ಥಳ ಸದ್ಯ ಎಲ್ಲರ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ರಾಮಮಂದಿರ ಉದ್ಘಾಟನೆಗೊಂಡ ದಿನವೇ ಇಲ್ಲಿ ವಿಶೇಷ ಪೂಜೆ ನಡೆಸಲಾಗಿದ್ದು, ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗಿದೆ.
ಕೃಷ್ಣಶಿಲೆ ದೊರೆತ ಸ್ಥಳದಲ್ಲಿದೆ ದೈವಮಹಿಮೆ
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಇಡೀ ದೇಶದ ಜನರು ನೋಡುತ್ತಿರುವ ಬಾಲರಾಮನ ವಿಗ್ರಹ ಕೆತ್ತನೆಗಾಗಿ ಬಳಸಿರುವ ಕೃಷ್ಣಶಿಲೆ ಹಾರೋಹಳ್ಳಿಯ ದಲಿತ ಸಮುದಾಯದ ಮುಖಂಡ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿರುವುದು ಸಂತೋಷದ ಸಂಗತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಇದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಾಲರಾಮನ ಮೂರ್ತಿಯ ಶಿಲೆ ಸಿಕ್ಕಿದೆ. ಹೀಗಾಗಿ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ದೈವಮಹಿಮೆಯಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ನಾವು ಚಿಕ್ಕವನಿದ್ದಾಗ ರಾಮನ ಫೋಟೋ ಹಿಡಿದು ಧನುರ್ಮಾಸದಲ್ಲಿ ರಾಮನ ಭಜನೆ ಮಾಡುತ್ತಿದ್ದೆವು, ಇದೀಗ ಈ ರೀತಿಯ ಸೌಭಾಗ್ಯ ನನಗೆ ಮತ್ತೆ ಸಿಕ್ಕಿದೆ. ದಲಿತ ಬಾಂಧವರ ಜಮೀನಿನಲ್ಲಿ ಈ ಕೃಷ್ಣಶಿಲೆ ದೊರೆತಿದ್ದರೆ, ಬಾಲರಾಮನ ಮೂರ್ತಿಯನ್ನು ಕೆತ್ತನೆ ಮಾಡಿರುವವರು ನಮ್ಮ ಮೈಸೂರಿನವರು ಎನ್ನುವುದು ಸಂತಸದ ಸಂಗತಿ ಎಂದು ಜಿ.ಟಿ.ದೇವೇಗೌಡರು ಹೇಳಿದ್ದಾರೆ.
ರಾಮ ಸೇರಿ ಎಲ್ಲ ವಿಗ್ರಹಗಳಿಗೂ ಇಲ್ಲಿಂದಲೇ ಶಿಲೆ
ರೈತ ರಾಮದಾಸ್ ಅವರ ಜಮೀನಿನಲ್ಲಿ ದೊರೆತ ಕೃಷ್ಣಶಿಲೆ ಹೊರತೆಗೆದು ಅಯೋಧ್ಯೆಗೆ ಕಳುಹಿಸಲು ನೆರವಾದ ಶ್ರೀನಿವಾಸ್ ಅವರು ಮಾತನಾಡಿ, ನಮ್ಮ ತಾತನ ಕಾಲದಿಂದಲೂ ಕಲ್ಲು ಗಣಿಗಾರಿಕೆ, ಶಿಲೆಗಳನ್ನು ಕೆತ್ತನೆ ಮಾಡಲು ಅಗತ್ಯವಿರುವ ಕಲ್ಲು ಪೂರೈಸುವ ಕೆಲಸ ಮಾಡುತ್ತಾ ಬಂದಿದ್ದೇವೆ. ರೈತ ರಾಮದಾಸ್ ಅವರ ಜಮೀನಿನನ್ನು ಸ್ವಚ್ಛಗೊಳಿಸಿ, ಕಲ್ಲನ್ನು ಮೂರು ಭಾಗ ಮಾಡಿ ಹೊರತೆಗೆಯಲಾಗಿತ್ತು.
8 ರಿಂದ 9 ದಿನಗಳ ಕಾಲ ಏಳೆಂಟು ಜನರು ಕೆಲಸ ಮಾಡಿ, ಕಲ್ಲನ್ನು ಹೊರತೆಗೆದು, 9 ಅಡಿ 8 ಇಂಚು ಕಲ್ಲನ್ನು ರಾಮನ ವಿಗ್ರ ಕೆತ್ತನೆಗೆ 7 ಅಡಿ ಕಲ್ಲನ್ನು ಸೀತಾ ವಿಗ್ರಹ ಕೆತ್ತನೆಗೆ ಕಳುಹಿಸಲಾಯಿತು. ಭರತ, ಲಕ್ಷ್ಮಣ ಹಾಗೂ ಶತ್ರುಘ್ನನ ಮೂರ್ತಿಗಳನ್ನು ಕೆತ್ತನೆ ಮಾಡಲು ಮೂರು ಕಲ್ಲುಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಭೂಮಿಯ ಮಾಲೀಕರಾರ ರಾಮದಾಸ್ ಮಾತನಾಡಿ, 'ಅಯೋಧ್ಯೆಯಿಂದ ಆಗಮಿಸಿದ್ದ ಗುರುಗಳು ಶಿಲೆ ದೊರೆತ ಜಾಗದಲ್ಲಿ ಪೂಜೆ ಮಾಡಿ, ಆಶೀರ್ವಾದ ಮಾಡಿದ್ದರು. ತಾತನ ಕಾಲದಿಂದಲೂ ಮಾಡಿಕೊಂಡು ಬಂದ ಕೆಲಸದಿಂದ ಈ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಕಲ್ಲು ದೊರೆತ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಲು ತೀರ್ಮಾನಿಸಿದ್ದು, ಅವರಿಗೆ ಜಾಗ ನೀಡುವುದಾಗಿ' ಹೇಳಿದ್ದಾರೆ. ಒಟ್ಟಾರೆ ಎಲ್ಲರ ಸಹಕಾರ ದೇಗುಲ ನಿರ್ಮಾಣಕ್ಕೆ ದೊರೆಯಲಿರುವುದರಿಂದ ಎಲ್ಲವೂ ಅಂದುಕೊಂಡಂತೆ ಆದರೆ ಹಾರೋಹಳ್ಳಿಯ ರಾಮದಾಸ್ ಅವರ ಜಮೀನಿನಲ್ಲಿ ರಾಮದೇಗುಲ ಬಹುಬೇಗವೇ ನಿರ್ಮಾಣವಾಗುವುದು ಖಚಿತವಾಗಿದೆ.












Click it and Unblock the Notifications