Mysuru: ಭಾನುವಾರ ಮೈಸೂರಿಗೆ ಪ್ರಧಾನಿ ಮೋದಿ; ಯದುವೀರ್ ಪರ ಪ್ರಚಾರ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ (ಏ.14ರಂದು) ಮೈಸೂರಿಗೆ ಆಗಮಿಸುತ್ತಿದ್ದು, ಮಹಾರಾಜ ಕಾಲೇಜು ಮೈದಾನದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು, ಕೊಡಗು, ಮಂಡ್ಯ ಹಾಗೂ ಚಾಮರಾಜನಗರ ಸೇರಿದಂತೆ ನಾಲ್ಕು ಜಿಲ್ಲೆಗಳನ್ನೊಳಗೊಂಡಂತೆ ಬಿಜೆಪಿ ಬೃಹತ್ ಬಹಿರಂಗ ಸಮಾವೇಶವನ್ನು ಏರ್ಪಡಿಸಿದೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 4 ಗಂಟೆಗೆ ನಡೆ ಪ್ರಚಾರ ಸಭೆಯನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ಕೈಗೊಂಡಿದೆ. ಬಳಿಕ ಮಂಗಳೂರಿನಲ್ಲಿ ಸಂಜೆ 6ಕ್ಕೆ ನಿಗದಿಯಾಗಿರುವ ರೋಡ್ ಶೋನಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಮಾಹಿತಿ ನೀಡಿದರು.
ಎಸ್‌ಪಿಜಿ ತಂಡದಿಂದ ಪರಿಶೀಲನೆ
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಿಗದಿಯಾಗುತ್ತಿದ್ದಂತೆ ಎಸ್‌ಪಿಜಿ ತಂಡವೂ ಶನಿವಾರ ಮೈಸೂರಿಗೆ ಆಗಮಿಸಿ ಕಾರ್ಯಕ್ರಮ ನಡೆಯುವ ಸ್ಥಳ, ವಿಮಾನ ನಿಲ್ದಾಣ, ಮೋದಿ ಅವರು ಆಗಮಿಸುವ ರಸ್ತೆ ಮಾರ್ಗಗಳಲ್ಲಿ ಪರಿಶೀಲನೆ ನಡೆಸಿವೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಮೈಸೂರು ನಗರ, ಗ್ರಾಮಾಂತರ ವಿಭಾಗದ ಬಿಜೆಪಿ ಮುಖಂಡರು ನಾಲ್ಕೈದು ದಿನದಿಂದಲೇ ಸಿದ್ಧತಾ ಕಾರ್ಯ ಆರಂಭಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ವೇದಿಕೆ ನಿರ್ಮಾಣ, ಎಲ್‌ಇಡಿ ಸ್ಕ್ರೀನ್‌ಗಳ ಅಳವಡಿಕೆ, ಜನರಿಗೆ ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ, ಎಂದು ಮೈಸೂರು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ.
20ನೇ ಬಾರಿ ಮೈಸೂರಿಗೆ ಭೇಟಿ
ಮೈಸೂರಿಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಿನಾಭಾವ ನಂಟು ಇಲ್ಲಿಯವರೆಗೂ ಎರಡು ದಶಕದಲ್ಲಿ ಮೋದಿ ಅವರು 20 ಬಾರಿ ಮೈಸೂರಿಗೆ ಬಂದಿದ್ದಾರೆ. ಸಾಮಾನ್ಯವಾಗಿ ಪ್ರಧಾನಿಯಾದವರು ಯಾವುದೇ ರಾಜ್ಯಕ್ಕೆ ಬಂದರು ಅಲ್ಲಿನ ರಾಜಾಧಾನಿಯ ರಾಜಭವನದಲ್ಲಿ ವಾಸ್ತವ್ಯ ಹೂಡುತ್ತಾರೆ. ಆದರೆ, ನರೇಂದ್ರ ಮೋದಿ 4 ಬಾರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವುದು ವಿಶೇಷ.
ಗುಜರಾತ್ ಸಿಎಂ ಆಗಿದ್ದಾಗ 2004ರಲ್ಲಿ ಮೋದಿ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ್ದರು. 2009ರಲ್ಲಿ ದಸರಾ ಪಂಜಿನ ಕವಾಯತು ವೀಕ್ಷಿಸಲು ಆಗಮಿಸಿದ್ದರು. 2014ರಲ್ಲಿ ಪ್ರತಾಪಸಿಂಹ ಪರ ಪ್ರಚಾರ ನಡೆಸಿದ್ದರು. 2016ರಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜನ್ಮ ಶತಮಾನೋತ್ಸವ, ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್‌ನ 103ನೇ ಅಧಿವೇಶನದಲ್ಲಿ ಭಾಗವಹಿಸಿದ್ದರು.
2022ರ ಜೂನ್ 20ರಂದು ಮಹರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದರು. ಜೂನ್ 21ರಂದು ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗ ಪ್ರದರ್ಶಿಸಿದ್ದರು. ಇದೇ ವರ್ಷ ಮಾರ್ಚ್ 12ರಂದು ಮಂಡ್ಯ ಹಾಗೂ ಧಾರವಾಡ ಜಿಲ್ಲೆ ಕಾರ್ಯಕ್ರಮಕ್ಕೆ ತೆರಳಲು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು.












Click it and Unblock the Notifications