ಪ್ರತಿಪಕ್ಷಗಳು ನನ್ನನ್ನು ಜೀವಂತ ಸಮಾಧಿ ಮಾಡಲು ಬಯಸುತ್ತವೆ ಎಂಬ ಪ್ರಧಾನಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
ಮೈಸೂರು , ಮೇ. 11: 'ಪ್ರತಿಪಕ್ಷಗಳು ನನ್ನನ್ನು ಜೀವಂತ ಸಮಾಧಿ ಮಾಡಲು ಬಯಸುತ್ತವೆ, ಆದರೆ ಜನರೇ ನನ್ನ ಭದ್ರತಾ ಗುರಾಣಿ. ನನಗೆ ಯಾವುದೇ ಹಾನಿಯಾಗಲು ಅವರು ಬಿಡುವುದಿಲ್ಲ' ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ವಿರೋಧಪಕ್ಷಗಳು ನನ್ನನ್ನು ಸಮಾಧಿ ಮಾಡಲು ಹೊರಟಿವೆ. ನೀವು ನನ್ನನ್ನು ಕಾಪಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ದುರಂತವೇ ಸರಿ. ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ, ಮೋದಿ ಅವರನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ ಅಷ್ಟೆ" ಎಂದು ಟೀಕಿಸಿದ್ದಾರೆ.

ವಿರೋಧ ಪಕ್ಷಗಳ ಮೇಲೆ ಪ್ರಧಾನಿ ಆರೋಪ
ಮಹಾರಾಷ್ಟ್ರದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ವಿರೋಧಪಕ್ಷಗಳು ನನ್ನನ್ನು ಸಮಾಧಿ ಮಾಡಲು ಹೊರಟಿವೆ. ಆದರೆ, ಭಾರತದ ಜನರು ನನ್ನ ಭದ್ರತಾ ಗುರಾಣಿ. ಅವರು ನನ್ನನ್ನು ಜೀವಂತವಾಗಿ ಅಥವಾ ಸಾಯಿಸಿ ಹೂಳಲು ಸಾಧ್ಯವಿಲ್ಲ" ಎಂದು ಹೇಳಿದ್ದರು. ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರ ಹೇಳಿಕೆಗಳನ್ನು ಟೀಕಿಸುತ್ತಾ ಇಂತಹ ಕಾಮೆಂಟ್‌ಗಳನ್ನು ಮಾಡಿದ್ದರು.
ಈ ಹೇಳಿಕೆಗಳಿಗೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ, ಪ್ರಧಾನಿ ಮೋದಿ ಅವರನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.

"ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಗಳಾಗಿ ಬಡವರ ಪರವಾಗಿ ಏನೂ ಮಾಡಿಲ್ಲ ಎನ್ನುವುದು ಹಾಗು ಸುಳ್ಳಿನ ಸರದಾರ ಎನ್ನುವುದು ನಮ್ಮ ಆರೋಪ. ಜನರಿಗೆ ನೀಡಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ರಾಜಕೀಯವಾಗಿ ಅವರನ್ನು ಸೋಲಿಸಬೇಕೆನ್ನುವುದು ವಿರೋಧ ಪಕ್ಷಗಳ ಗುರಿ. ಏಕೆಂದರೆ ಈ ದೇಶದ ಆರ್ಥಿಕತೆ ಸುಧಾರಣೆಯಾಗಬೇಕು, ಬಡವರು ಉಳಿಯಬೇಕು" ಎಂದಿದ್ದಾರೆ.
"ಪ್ರಧಾನಿಗಳು ತಾವು ಸೋಲುತ್ತೇವೆಂದು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಭಾವನಾತ್ಮಕ ಆಟ ಜನರಿಗೆ ಗೊತ್ತಾಗಿದೆ. ಜನರಿಗೆ ಗೊತ್ತಾದ ಮೇಲೆ ಪುನಃ ಅದೇ ತಪ್ಪನ್ನು ಜನತೆ ಮಾಡುವುದಿಲ್ಲ. ರಾಜಕೀಯದಲ್ಲಿ ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು, ಕೆಳಗಿದ್ದವನು ಮೇಲೇರಬೇಕು" ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications