ಮೈಸೂರಿನಲ್ಲಿ ತಂಗಿಯ ಮಾಂಗಲ್ಯ ಸರಕ್ಕೇ ಕೈ ಹಾಕಿದ್ದ ಅಣ್ಣನ ಬಂಧನ
ಮೈಸೂರು, ನವೆಂಬರ್ 13: ಅಣ್ಣನೇ ತಂಗಿಯ ವ್ಯಾನಿಟಿ ಬ್ಯಾಗ್ ನಿಂದ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಹೂಟಗಳ್ಳಿ ಕೆಎಚ್ ಬಿ ಕಾಲೊನಿ ನಿವಾಸಿ ಸಂತೋಷ್ ಕುಮಾರ್ (33) ಬಂಧಿತ ಆರೋಪಿ. ಈತ ತನ್ನ ತಂಗಿಯೊಂದಿಗೆ ಮೈಸೂರಿನ ಮೃಗಾಲಯದ ಮುಂಭಾಗ ಇರುವ ಬಟ್ಟೆ ಅಂಗಡಿಗೆ ಬಂದಿದ್ದು, ಬಟ್ಟೆ ಖರೀದಿ ಮಾಡುವ ವೇಳೆ ತಂಗಿ ತನ್ನ ಬಳಿಯಿದ್ದ 70 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ವ್ಯಾನಿಟಿ ಬ್ಯಾಗಿನಲ್ಲಿಟ್ಟು ಜೋಪಾನವಾಗಿ ನೋಡಿಕೊಳ್ಳುವಂತೆ ಹೇಳಿ ಸಂತೋಷ್ ಕುಮಾರ್ ಬಳಿ ನೀಡಿದ್ದಳು.
ಆದರೆ ಸಮಯ ಸಾಧಿಸಿ ಬ್ಯಾಗಿನಲ್ಲಿದ್ದ ಮಾಂಗಲ್ಯ ಸರವನ್ನು ಸಂತೋಷ್ ಕುಮಾರ್ ಕಳ್ಳತನ ಮಾಡಿ ತನಗೇನೂ ಗೊತ್ತಿಲ್ಲ ಎಂಬಂತೆ ಇದ್ದನು. ಬಟ್ಟೆ ಖರೀದಿ ಬಳಿಕ ಮನೆಗೆ ತೆರಳಿದ ಆಕೆ ಬ್ಯಾಗ್ ನಲ್ಲಿ ಹುಡುಕಿದಾಗ ಮಾಂಗಲ್ಯ ಸರ ಮಾಯವಾಗಿತ್ತು. ಈ ಬಗ್ಗೆ ಕೇಳಿದಾಗ ಆತ ತನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದಲ್ಲದೆ, ಯಾರೋ ಕದ್ದಿರಬಹುದು ಎಂದು ಕತೆ ಕಟ್ಟಿದ್ದನು. ಹೀಗಾಗಿ ಆತನ ಸಹೋದರಿ ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನಿಖೆ ವೇಳೆ ಮಾಂಗಲ್ಯ ಸರವನ್ನು ಸಂತೋಷ್ ಕುಮಾರ್ ಕಳ್ಳತನ ಮಾಡಿರುವ ಅನುಮಾನ ಬಂದಿದ್ದು, ಆತನನ್ನು ಹಿನಕಲ್ ಸಿಗ್ನಲ್ ಬಳಿ ಪತ್ತೆ ಮಾಡಿ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ತಂಗಿಯ ಚಿನ್ನದ ಮಾಂಗಲ್ಯ ಸರವನ್ನು ತಾನೇ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 3,50,000 ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications