ಸಿಎಂ ಸಿದ್ದರಾಮಯ್ಯರನ್ನು ಭ್ರಷ್ಟ ಎಂದು ಜನ ತೀರ್ಮಾನಿಸಿದ್ದಾರೆ: ಯೋಗೇಶ್ವರ್ ಸೈನಿಕ ಕುಲಕ್ಕೆ ಅಪಮಾನ; ಎಚ್. ವಿಶ್ವನಾಥ್
ಸಿಎಂ ಸಿದ್ದರಾಮಯ್ಯನವರು ತಮ್ಮ ತವರು ಕ್ಷೇತ್ರ ವರುಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಸತ್ಯವಂತ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರನ್ನು ಭ್ರಷ್ಟ ಎಂದು ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟೀಕಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರುಣ ಕ್ಷೇತ್ರದದಲ್ಲಿ ಮಂಗಳವಾರ ನಡೆದ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟೀಕರಣ ಸಭೆಯಂತಿತ್ತು. ಸಿದ್ದರಾಮಯ್ಯ 16ನೇ ಲೂಯಿ ದೊರೆ ಇದ್ದಂಗೆ. ಲೂಯಿ ತನ್ನ ನಂತರ ಜಲಪ್ರಳಯ ಆಗಲಿ ಎಂದಿದ್ದ. ಅದೇ ರೀತಿ ಸಿದ್ದರಾಮಯ್ಯ ತನ್ನ ನಂತರ ಯಾರೂ ಇರಬಾರದು ಎಂಬ ಮನಸ್ಥಿತಿ ಹೊಂದಿದ್ದಾರೆ ಎಂದರು.

ನನಗೆ ಸ್ವಂತ ಮನೆ ಇಲ್ಲ, ಮರಿಸ್ವಾಮಿ ಮನೆಯಲ್ಲಿ ಇದ್ದೇನೆ ಎನ್ನುತ್ತೀರಿ. ನಿಮ್ಮ ಮಗ ಮತ್ತು ಸೊಸೆ ಹೆಸರಿನಲ್ಲಿ ಮಾಡಿರುವ ಪಬ್‌ನಿಂದ ಕೋಟ್ಯಂತರ ರೂಪಾಯಿ ಬಾಡಿಗೆ ಬರುತ್ತದೆ. ಇದಕ್ಕೆ ಸಚಿವ ಭೈರತಿ ಸುರೇಶ್ ಮಾಸ್ಟರ್ ಮೈಂಡ್ ಆಗಿದ್ದು, ಅವನ ಕ್ಷೇತ್ರದಲ್ಲೇ ಆ ಪಬ್ ಇದೆ ಎಂದರು.
ಸಿದ್ದರಾಮಯ್ಯ ನಾನು ಒಳ್ಳೆಯವ ಎಂದು ಡಂಗೂರ ಹೊಡೆಯುತ್ತಿದ್ದಾರೆ. ಸಚಿವ ಭೈರತಿ ಸುರೇಶ್ ಅವರನ್ನು ಒಳಗೆ ಹಾಕಿದರೆ ಎಲ್ಲಾ ವಿಚಾರ ಹೊರಗೆ ಬರುತ್ತವೆ. ಕರ್ನಾಟಕ ಫ್ರಾಡ್‌ಗಳ ಸಂತೆಯಂತಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ನೇರ ಕಾರಣರಾಗಿದ್ದಾರೆ. ಜೈಲಿಗೆ ಹೋಗಿ ಬಂದ ಒಬ್ಬ ಮಂತ್ರಿಗೆ ಮೈಸೂರು ಪೇಟ, ಹಾರ ಹಾಕಿ ಸ್ವಾಗತ ಮಾಡಿದ್ದೀರಿ. ನಿಮ್ಮನ್ನು ವಾಲ್ಮೀಕಿ ಸಮುದಾಯದ ಜನರು ನಂಬುವುದಿಲ್ಲ ಎಂದರು.
ಸೈನಿಕ ಕುಲಕ್ಕೆ ಯೋಗೇಶ್ವರ್ ಅಪಮಾನ
ಯಾಕೆ ಈಗ ಹಿಂದುಳಿದ ಕಾರ್ಡ್ ಅನ್ನು ಪ್ಲೇ ಮಾಡುತ್ತಿದ್ದಾರೆ? ಹಿಂದುಳಿದವರ ಮೂಗಿಗೆ ಸಿದ್ದರಾಮಯ್ಯ ಬೆಣ್ಣೆ ಸವರಿದ್ದಾರೆ. ಪ್ರದೇಶ ಕುರುಬರ ಸಂಘ ಒಡೆದಿದ್ದು ಯಾರು? ನಾನು ಕಟ್ಟಿದ ಕುರುಬರ ಮಠ ಒಡೆದಿದ್ದು ಯಾರು? ಇದೇ ಸಿದ್ದರಾಮಯ್ಯ ಎಂದು ಆರೋಪಿಸಿದರು. ಸೈನಿಕ ಕುಲಕ್ಕೆ ಯೋಗೇಶ್ವರ್ ಅಪಮಾನ. ಅವನನ್ನು ಸೈನಿಕ ಎಂದು ಕರೆಯಬೇಡಿ. ಹುಣಸೂರು ಉಪ ಚುನಾವಣೆ ವೇಳೆ ಪಾರ್ಟಿ ಕೊಟ್ಟ ಹಣ ತೆಗೆದುಕೊಂಡು ಓಡಿ ಹೋದರು. ಅಂತಹ ವ್ಯಕ್ತಿಯನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡು ಟಿಕೆಟ್ ಕೊಟ್ಟಿದೆ ಎಂದು ಟೀಕಿಸಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ರಾತ್ರೋರಾತ್ರಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದುಕೊಂಡರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ.












Click it and Unblock the Notifications