ಸಾವಯವ ಕೃಷಿ, ರೈತರ ಹಿತರಕ್ಷಣೆಯಿಂದ ದೇಶ ಸಮೃದ್ಧ: ಯದುವೀರ್
ಮೈಸೂರು, ನವೆಂಬರ್ 11: ಪರಿಸರ ಉಳಿಸುವುದು ಕೇವಲ ರೈತರ ಜವಾಬ್ದಾರಿ ಮಾತ್ರ ಅಲ್ಲ . ಅದು ಪ್ರತಿಯೊಬ್ಬರ ನಾಗರಿಕರ ಕರ್ತವ್ಯ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ರಾಷ್ಟ್ರಮಟ್ಟದ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಮಗಿರುವುದು ಒಂದೇ ಪರಿಸರ. ಸಾವಯವ ಕೃಷಿ, ರೈತರ ಹಿತರಕ್ಷಣೆ ಇದ್ದರೆ ನಮ್ಮ ದೇಶ ಸಮೃದ್ಧವಾಗಿರುತ್ತದೆ. ಇವುಗಳ ರಕ್ಷಣೆ ಜೊತೆಗೆ ಮಣ್ಣಿನ ಸಂರಕ್ಷಣೆ ಆಗಬೇಕು. ಕೃಷಿ ವಲಯದಲ್ಲಿ ಏನೆಲ್ಲಾ ಅಭಿವೃದ್ಧಿ , ಬದಲಾವಣೆ ಆಗಬೇಕು ಎಂಬುದರ ಬಗ್ಗೆ ಎಲ್ಲರೂ ಯೋಚಿಸಬೇಕು. ಎರಡು ಸಾವಿರ ಕೃಷಿಕರು ನಾನಾ ಭಾಗಗಳಿಂದ ಈ ಸಮ್ಮೇಳನಕ್ಕೆ ಬಂದಿರುವುದು ನಿಜಕ್ಕೂ ಖುಷಿ ತಂದಿದೆ ಎಂದರು.
ಕೃಷಿ ವಿಜ್ಞಾನಿ ಎ.ಆರ್.ವಾಸವಿ ಮಾತನಾಡಿ, ''ಇಂದು ಏಕ ಬೆಳೆಯು ಕೃಷಿಭೂಮಿಯನ್ನು ಆವರಿಸಿದ್ದು, ಮಣ್ಣು ಸತ್ವ ಕಳೆದುಕೊಂಡಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಅತಿವೃಷ್ಟಿ- ಅನಾವೃಷ್ಟಿ ಆಗುತ್ತಿದ್ದು, ಕೃಷಿ ವಲಯ ಬಿಕ್ಕಟ್ಟಿಗೆ ಸಿಲುಕಿದೆ. ಅದಕ್ಕೆ ಸಾವಯವ ಕೃಷಿಯೇ ಪರಿಹಾರ. ಜಾಗತಿಕ ವಾತಾವರಣ ಬದಲಾವಣೆ ಎಲ್ಲ ದೇಶಗಳ ಆಹಾರ ಭದ್ರತೆಗೆ ಸವಾಲನ್ನು ಒಡ್ಡಿದೆ. ಕೃಷಿ ವೈವಿಧ್ಯ ಉಳಿಸಿಕೊಳ್ಳುವುದೇ ನಮ್ಮ ಮುಂದಿರುವ ಆಯ್ಕೆ'' ಎಂದು ತಿಳಿಸಿದರು.

ಬಂಡವಾಳಶಾಹಿ ಪ್ರೇರಿತ ಮಾರುಕಟ್ಟೆಯು ರೈತರನ್ನು ಆದಾಯ ಕೇಂದ್ರಿತ ಕೃಷಿಗೆ ತಳ್ಳಿದೆ. ಅದರಿಂದ ವೈವಿಧ್ಯದ ಬೆಳೆ ಪದ್ಧತಿ ಕಣ್ಮರೆಯಾಗಿ ವಾಣಿಜ್ಯ, ಏಕ ಬೆಳೆಯು ಕೃಷಿಭೂಮಿಯನ್ನು ಆವರಿಸಿಕೊಂಡಿದೆ. ಹಸಿರು ಕ್ರಾಂತಿಯು ಪಾರಂಪರಿಕ ಕೃಷಿಯನ್ನು ಅವಸಾನಕ್ಕೆ ತಳ್ಳಿದೆ. ಕೃಷಿ ಭೂಮಿಯನ್ನು ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಹಾಳು ಮಾಡಿವೆ. ರೈತ ಸಮುದಾಯ ಆರಂಭದಲ್ಲಿ ಲಾಭಗಳಿಸಿದರೂ ಕಾಲಾನಂತರ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಕೇರಳದ ಕೃಷಿ ಸಚಿವ ಪಿ. ಪ್ರಸಾದ್ ಮಾತನಾಡಿ, "ಇಂದು ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಆದರೂ ಆಳುವ ಸರಕಾರಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹಾಗಾಗಿ ಪರಿಸರ ಸಂರಕ್ಷಣೆಗೆ ಇದು ಸರಿಯಾದ ಸಮಯ. ಭೂಮಿಯನ್ನು ರಕ್ಷಣೆ ಮಾಡಬೇಕಿದೆ. ಎಲ್ಲೆಡೆ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳನ್ನು ತಡೆಯಬೇಕಾದರೆ ಸಾವಯವ ಕೃಷಿಯತ್ತ ಹೊರಳುವುದು ತುರ್ತು ಅವಶ್ಯಕತೆಯಾಗಿದೆ" ಎಂದರು.
ಕೆಎಸ್‌ಒಯು ಕುಲಸಚಿವ ಖಾದರ್ ಪಾಷಾ, ಆಶಾ ಕಿಸಾನ್ ಸ್ವರಾಜ್ ಸಂಸ್ಥೆಯ ನಚಿಕೇತ್, ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ, ಸಮ್ಮೇಳನದ ಸ್ವಾಗತ ಸದಸ್ಯ ಕೃಷ್ಣಪ್ರಸಾದ್ ಇತರರು ಇದ್ದರು.












Click it and Unblock the Notifications